Wednesday, 11th December 2024

ಹಿಂದೂಪರ ಸಂಘಟನೆಗಳಿಂದ ರಾಜ್ಯಪಾಲರಿಗೆ ಮನವಿ

ಬನವಾಸಿ: ಶಿವಮೊಗ್ಗದಲ್ಲಿ ಭಾನುವಾರ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಖಂಡಿಸಿ, ಆರೋಪಿಗಳ ಬಂಧನ ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ನಾಗರಾಜ್ ಬೋರಕರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಕದಂಬ ವೃತ್ತದಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು, ಕೆಲ ಕಾಲ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ವಾಹನ ಸಂಚಾರ ತಡೆದರು. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಎಸ್‌ಡಿಪಿಐನ ಪೈಶಾಚಿಕ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು ಇದೆಲ್ಲದರ ಹಿಂದೆ ಮುಸ್ಲೀಂ ಮೂಲಭೂತವಾದಿ ಸಂಘಟನೆಗಳ ಪಾತ್ರ ಇರುವುದು ಹಲವಾರು ಬಾರಿ ಸಾಬೀತಾಗಿದೆ ಎಂದು ದೂರಿದರು.

ಹರ್ಷನ ಹತ್ಯೆ ಪೂರ್ವ ನಿಯೋಜಿತವಾಗಿದ್ದು ಉದ್ದೇಶಪೂರ್ವಕವಾಗಿಯೇ ಕೊಲೆ ನಡೆದಿದೆ. ರಾಜ್ಯದಲ್ಲಿ ಹಿಂದೂಗಳನ್ನು ಬಜರಂಗದಳದ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವವರ ವಿರುದ್ಧ ತಿರುಗಿ ಬೀಳುವ ಕಾಲ ಬಂದಿದೆ. ಶಾಂತ ಭಾವನೆಯಿಂದ ಇರುವ ಹಿಂದೂಗಳನ್ನು ಕೆಣಕಿದರೆ ಏನಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ರಾಜ್ಯ ಸರ್ಕಾರವೂ ಹಿಂದೂಗಳ ರಕ್ಷಣೆಗೆ ಅಗತ್ಯ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಾಮರಸ್ಯ ಪ್ರಮುಖ ರವೀಶ ಹೆಗಡೆ, ಹಿಂದೂ ಸಂಘಟನೆಯ ಪ್ರಮುಖರಾದ ಶಿವ ಕುಮಾರ ದೇಸಾಯಿ ಗೌಡ, ಅರವಿಂದ ಬಳಿಗಾರ, ಗಜಾನನ ಗೌಡ, ಸುಧೀರ ನಾಯರ್, ಅರವಿಂದ ಶೆಟ್ಟಿ, ಸಿದ್ದವಿರೇಶ ನೆರಗಲ್, ಪ್ರೇಮ್ ಕುಮಾರ್ ನಾಯ್ಕ್, ಸಿದ್ದಲಿಂಗೇಶ ನೆರಗಲ್, ನಾಗರಾಜ್ ನಾಯ್ಕ್, ಮಂಜುನಾಥ ನಾಯ್ಕ್, ವಿನಯ ಗೌಡ, ವೀರಭದ್ರ ಗೌಡ, ಚಂದ್ರಶೇಖರ ಗೌಡ, ಮನೋಜ ಚನ್ನಯ್ಯ, ಸಚೀನ್ ಮಾಳವದೆ, ಶಿವಕುಮಾರ ಆರೇರ, ಕೇಶವ ಯಡೂರಬೈಲ್, ಶಿವಾಜಿ ಆರೇರ, ವಿನಾಯಕ ಮಂಗ ಳೂರು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪಟ್ಟಣದಲ್ಲಿ ಸಿಪಿಐ ರಾಮಚಂದ್ರ ನಾಯ್ಕ್ ಹಾಗೂ ಪಿಎಸ್ಐ ಹನುಮಂತ ಬಿರಾದಾರ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.