Tuesday, 10th December 2024

Apprentice Training: ಪತ್ರಿಕೋದ್ಯಮ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

Apprentice Training

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 12 ತಿಂಗಳ ಅಪ್ರೆಂಟಿಸ್ ತರಬೇತಿಯನ್ನು (Apprentice Training) ಹಮ್ಮಿಕೊಂಡಿದೆ.

ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಒಬ್ಬ ಅಭ್ಯರ್ಥಿಯನ್ನು ಹಾಗೂ ಪರಿಶಿಷ್ಟ ಪಂಗಡದ ಒಬ್ಬ ಅಭ್ಯರ್ಥಿಯನ್ನು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್‌ಗೆ ಮಾಹೆಯಾನ ರೂ 15,000 ಗಳ ಸ್ಟೈಪೆಂಡ್ ನೀಡಲಾಗುವುದು. ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ, ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷಾ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು.

ಈ ಸುದ್ದಿಯನ್ನೂ ಓದಿ | Jio Finance: ಚಿನ್ನದ ಮೇಲಿನ ಹೂಡಿಕೆಗಾಗಿ ಜಿಯೊ ಫಿನಾನ್ಸ್‌ನಿಂದ ಸ್ಮಾರ್ಟ್‌ಗೋಲ್ಡ್ ಯೋಜನೆ ಶುರು!

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು. ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ, ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ನವೆಂಬರ್ 15 ರೊಳಗಾಗಿ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ವಾರ್ತಾ ಸೌಧ, 2ನೇ ಮಹಡಿ, ನಂ.17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು- 560001, ಇಲ್ಲಿಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ “ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ” ಎಂದು ನಮೂದಿಸಬೇಕು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ‘ಕ್ರೊಮ್ಯಾಟಿಕ್ ರಿದಮ್ಸ್’ ವರ್ಣಚಿತ್ರಗಳ ಪ್ರದರ್ಶನ

ಅರ್ಹ ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲೆ ತಿಳಿಸಿರುವ ಇಲಾಖೆ ಕಚೇರಿಯ ದೂರವಾಣಿ ಸಂಖ್ಯೆ: 080-22028059, ಇ-ಮೇಲ್ – urbaninformation2016@gmail.com ಹಾಗೂ ಮೊ.ಸಂ: 9480841219 ಅನ್ನು ಸಂಪರ್ಕಿಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.