ಅಧಿಕಾರಿ ಜೆ ಇ ನಾಗರಾಜ ಅಮಾನತಿಗೆ ಆಗ್ರಹ :ಅಮರೇಶ ಹೆಚ್ ಬಾದರದಿನ್ನಿ
ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಜೆ.ಜೆ.ಎಂ. ಯೋಜನೆ ಅಡಿಯಲ್ಲಿ ಹಿರೇಬಾದರದಿನ್ನಿ ಗ್ರಾಮದಲ್ಲಿ ಅಂದಾಜು ಮೊತ್ತ ರೂ.43 ಲಕ್ಷ ಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಸರ್ಕಾರದ ಅಂದಾಜು ಪತ್ರಿಕೆಯಂತೆ ಮಾಡದೇ ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ವಹಿಸಿದ್ದನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಒಳಪಡಿಸಿ ಸರ್ಕಾರದ ಹಣ ಲೂಟಿ ಮಾಡಿರುವ ಗುತ್ತೇದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ, ಗುತ್ತೇದಾರರ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಸದರಿ ಕಾಮಗಾರಿಯ ಬಿಲ್ಲನ್ನು ತಡೆಯ ಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಲ್ಲಟ ಹೋಬಳಿ ಘಟಕದಿಂದ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಸಮಿತಿ ಅಧ್ಯಕ್ಷ ಅಮರೇಶ ಹೆಚ್ ಬಾದರದಿನ್ನಿ ಮಾತಾನಾಡಿ ಸರ್ಕಾರದ ಯೋಜನೆಯಾದ ಜಲಜೀವನ ಮಿಷನ್ ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು 2022-ಮಾರ್ಚ ವೇಳೆಗೆ 25 ಲಕ್ಷ ಟ್ಯಾಪ್ ಸಂಪರ್ಕಗಳನ್ನು ನೀಡಲು ಯೋಜನೆ ರೂಪಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ ನಿಜ. ಆದರೆ ಇದನ್ನೇ ಬಂಡವಾಳವಾಗಿಸಿ ಕೊಂಡಿರುವ ಗುತ್ತೇದಾರರು ಮತ್ತು ಅಧಿಕಾರಿಗಳು ಸರ್ಕಾರದ ನೀತಿ ನಿಯಮ ಗಳನ್ನು ಪಾಲಿಸದೇ ಅಂದಾಜು ಪತ್ರಿಕೆ ಯಂತೆ ಕಾಮಗಾರಿಗಳನ್ನು ಕೈಗೊಳ್ಳದೇ ಗುತ್ತೇದಾರರು ಮತ್ತು ಅಧಿಕಾರಿ ಗಳು ಹೊಂದಾಣಿಕೆ ಮಾಡಿಕೊಂಡು ತಮ್ಮ ಮನ ಇಚ್ಛೆಯಂತೆ ಸ್ವಂತ ಲಾಭಕ್ಕಾಗಿ ಬೇಕಾಬಿಟ್ಟಿಯಾಗಿ ಕಾಮಗಾರಿ ಗಳನ್ನು ಮಾಡುತ್ತಿರುವುದು ವಿಷಾಧನೀಯವಾಗಿದೆ ಎಂದರು.
ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಜೆ.ಜೆ.ಎಂ. ಯೋಜನೆ ಅಡಿಯಲ್ಲಿ ಹಿರೇಬಾದರದಿನ್ನಿ ಗ್ರಾಮಕ್ಕೆ ರೂ.43.00 ಲಕ್ಷ ಮತ್ತು ಬಾಗಲವಾಡ ಗ್ರಾಮಕ್ಕೆ ರೂ.80 ಲಕ್ಷ ಒಟ್ಟು ರೂ.1.23 ಕೋಟಿ ಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಸದರಿ ಕಾಮಗಾರಿ ನಡೆದ ಸ್ಥಳಕ್ಕೆ ಸಂಬಂಧಪಟ್ಟ ಜೆ.ಇ ನಾಗರಾಜ ಮತ್ತು ಟೆಂಡರ್ ಪಡೆದ ಗುತ್ತೇದಾರರು ಕಾಮಗಾರಿ ಸ್ಥಳಕ್ಕೆ ಬಾರದೇ ಉಪಗುತ್ತೇದಾರರರ ಮುಖಾಂತರ ಕಳಪೆ ಕಾಮಗಾರಿ ನಿರ್ವಹಿಸಿ, ಈ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಹಳೇ ಪೈಪಲೈನ್‌ಗಳಿಗೆ ಸಂಪರ್ಕ ಕಲ್ಪಿಸಿ ಅರ್ಧಮರ್ಧ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣವನ್ನು ಲೂಟಿ ಮಾಡಿರುತ್ತಾರೆ.
ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಜೆ.ಜೆ.ಎಂ. ಯೋಜನೆ ಕಾಮಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಜೆ.ಇ. ನಾಗರಾಜ ರವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಸದರಿ ಕಾಮಗಾರಿ ಪಡೆದ ಗುತ್ತೇದಾರರ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಸದರಿ ಕಾಮಗಾರಿಯ ಹಣ ದುರುಪಯೋಗವಾಗದಂತೆ ಸೂಕ್ತ ಕ್ರಮಕೈಗೊಂಡು ಸದರಿ ಕಾಮಗಾರಿಯ ಹಣವನ್ನು ಪಾವತಿಸದೇ ತಡೆಹಿಡಿಯಬೇಕು ಎಂದು ನಮ್ಮ ಸಂಘಟನೆಯಿಂದ ಮನವಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭ ದಲ್ಲಿ ಶಿವರಾಜ ಎಸ್. ಯಮುನಪ್ಪ ಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.