Saturday, 14th December 2024

ಕಬ್ಬಿನ ಬೆಲೆ ನಿಗದಿಪಡಿಸಲು ಆಗ್ರಹ:ರಾಷ್ಟ್ರೀಯ ಹೆದ್ದಾರಿ ಬಂದ್

ಕೊಲ್ಹಾರ: ಕಬ್ಬಿನ ದರಕ್ಕೆ ಸೂಕ್ತ ಬೆಲೆ ನಿಗದಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಸೋಮು ಬಿರಾದಾರ ಮಾತನಾ ಡುತ್ತಾ ಸರಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ರೈತಾಪಿ ವರ್ಗದ ಗೋಳು ಆಲಿಸಬೇಕಾದ ಆಳುವ ಸರಕಾರ ಸಕ್ಕರೆ ಕಾರ್ಖಾನೆ ಮಾಲಿಕರ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಕ್ಕರೆ ಕಾರ್ಖಾನೆ ಮಾಲಿಕರು ಪ್ರತಿ ಟನ್ ಕಬ್ಬಿಗೆ 3500 ರೂ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ಮಾತನಾಡುತ್ತಾ ರೈತ ದೇಶದ ಬೆನ್ನೆಲುಬು ಎನ್ನುವುದು ಸರಕಾರ ಅರಿತುಕೊಂಡು ನಡೆಯಬೇಕಿದೆ ಆಳುವ ಸರಕಾರ ಅನ್ನದಾತನ ಹಿತವನ್ನು ಕಾಪಾಡಬೇಕು ಕೂಡಲೇ ಸಕ್ಕರೆ ಕಾರ್ಖನೆ ಮಾಲಿಕರ ಸಭೆ ಕರೆದು ದರ ನಿಗದಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ದೇವರು ಮಾತನಾಡುತ್ತಾ ಕಬ್ಬಿನ ಕಾರ್ಖಾನೆ ಮಾಲಿಕರು ರೈತರನ್ನು ಶೋಷಣೆ ಮಾಡುತ್ತಿವೆ. ರೈತ ವರ್ಷಪೂರ್ತಿ ಶ್ರಮ ವಹಿಸಿ ದುಡಿದ ದುಡಿತಕ್ಕೆ ಸೂಕ್ತ ಪ್ರತಿಫಲ ನೀಡದೆ ಅನ್ಯಾಯವೆಸಗುತ್ತಿವೆ ಸರಕಾರ ಮದ್ಯಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳಿಗೆ ಸ್ಪಷ್ಟವಾದ ಆದೇಶ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅವಳಿ ಜಿಲ್ಲೆಯ ಅನೇಕ ರೈತರು ಭಾಗವಹಿಸಿದ್ದರು. ತಹಶಿಲ್ದಾರ ಪಿ.ಜಿ ಪವಾರ್ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರೊಡನೆ ಚರ್ಚಿಸಿದರು. ಕೊಲ್ಹಾರ ಪಿ.ಎಸ್.ಐ ಪ್ರೀತಮ್ ನಾಯಕ್ ಸೂಕ್ತ ಪೊಲೀಸ್ ಬಂದೋಬಸ್ತ ಕೈಗೊಂಡಿದ್ದರು.

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದ ಕಾರಣ ಕಲಕಾಲ ಸಂಚಾರ ಸ್ಥಗಿತಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ವಾಹನಗಳು ನಿಂತು ಪ್ರಯಾಣಿಕರು ಪರದಾಡುವಂತಾಯಿತು.