Friday, 29th March 2024

ಸದಸ್ಯರಿಗೆ ಸಭ್ಯತೆ ಕಲಿಸಿ, ಸದನದ ಗೌರವ ಕಾಪಾಡುವೆ

ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್‌.

ಪ್ರತಾಪ್‌ಚಂದ್ರ ಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮಂಗಳವಾರ ಆಯ್ಕೆಯಾಗಿದ್ದಾರೆ. 74 ವರ್ಷದ ಹೊರಟ್ಟಿ 1980ರಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಗೊಳ್ಳುತ್ತಾ ಬಂದಿದ್ದಾರೆ. 2018ರಲ್ಲಿ ಆರು ತಿಂಗಳ ಅವಧಿಗೆ ವಿಧಾನಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಕಾರ್ಯ ನಿರ್ವ ಹಿಸಿದ್ದರು. ಹಲವು ವಿಚಾರಗಳನ್ನು ‘ವಿಶ್ವವಾಣಿ’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಸಭಾಪತಿಯಾಗಿ ಆಯ್ಕೆ ಆಗಿದ್ದೀರಿ, ರಾಜ್ಯದ ಜನತೆಗೆ ನೀಡುವ ಸಂದೇಶವೇನು?
ಸುಮಾರು 40 ವರ್ಷಗಳಿಂದ ವಿಧಾನಪರಿಷತ್ (ಮೇಲ್ಮನೆ) ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದನದಲ್ಲಿ ನಡೆಯುವ ಕಾರ್ಯಕಲಾಪಗಳು ರಾಜ್ಯದ ಜನತೆಗೆ ತಿಳಿಸುವ ಕೆಲಸ ನಡೆಯುತ್ತಿದೆ. ಹಾಗೆಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಮೂಲಕ ಜನರಲ್ಲಿ ಆಶಾಭಾವನೆ ಮೂಡಿಸುವ ಕೆಲಸ ಮಾಡಲಾಗುತ್ತದೆ. ಚಿಂತಕರ ಚಾವಡಿ ಅಥವಾ ಹಿರಿಯರ ಮನೆ ಎಂದು ಕರೆಯುವ ಮೇಲ್ಮನೆಯು ಜನರ ಚಿಂತನೆಗಳಿಗೆ ಸ್ಪಂದಿಸುವಂತಹದು. ಸದನದಲ್ಲಿ ಜನಸ್ನೇಹಿ ಕಾರ್ಯಕ್ರಮಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ನ್ಯಾಯ ಕಲ್ಪಿಸಲು ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸುಪರ್ಥಿಯಲ್ಲಿ ಏನೆಲ್ಲ ಜನಸೇವೆ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುವುದೇ ನನ್ನ ಗುರಿ. ವಾರದಲ್ಲಿ 4-5 ದಿನ
ಕಚೇರಿಯಲ್ಲಿದ್ದು, ಸಾರ್ವಜನಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ.

ಚಿಂತಕರ ಚಾವಡಿಯಲ್ಲಿ ಸಭ್ಯತೆ ಅನ್ನುವ ಪದಕ್ಕೆ ಅರ್ಥ ಸಿಗುತ್ತಿಲ್ಲ ಎಂಬ ದೂರುಗಳು ಇವೆಯಲ್ಲಾ?
ಸುಮಾರು ವರ್ಷಗಳಿಂದ ಕಾಪಾಡಿಕೊಂಡು ಬರಲಾಗುತ್ತಿದ್ದ ವಿಧಾನಪರಿಷತ್ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ನಿಜ. ನಾನು ಪರಿಷತ್‌ಗೆ ಬಂದ ಕಾಲಘಟ್ಟಕ್ಕೂ, ಈಗಿನ ಸನ್ನಿವೇಶಕ್ಕೂ ಬಹಳ ವ್ಯತ್ಯಾಸವಿದೆ. ಹಲವು ವಲಯಗಳಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಬರುತ್ತಾರೆ. ಅವರಿಗೆ ಸದನದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ಸದ್ಯದಲ್ಲೆ ಏರ್ಪಡಿಸಲಾಗುತ್ತದೆ. ಸದನದಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ಸದಸ್ಯರಿಗೆ ಹೇಳಿಕೊಡುವ ಮೂಲಕ ಕಲಾಪಗಳು ಸುಗಮವಾಗಿ ನಡೆಸಲು ಪ್ರಯತ್ನ ಮಾಡುವೆ. ಹಲವು ಬಾರಿ ಅನೇಕ ಘಟನೆಗಳು ನಡೆದಿವೆ. ಮುಂದೆ ಅಂತಹ ಘಟನೆಗಳು ಮರು ಕಳಿಸದಂತೆ ನೋಡಿಕೊಳ್ಳಲಾಗುತ್ತದೆ.

ಕೃಷಿ ಕಾಯಿದೆ ಕುರಿತು ವಿಧಾನಪರಿಷತ್ ನಲ್ಲಿ ಜೆಡಿಎಸ್ ಬೆಂಬಲ ನೀಡಿದ ಹಿನ್ನೆೆಲೆ ಏನು?
ಈ ದೇಶದ ಬೆನ್ನೆೆಲುಬು ರೈತ. ರೈತಪರ ಕಾಳಜಿವಹಿಸುವುದು ನಮ್ಮ ನಿಲುವು. ಸಭಾಪತಿಯಾಗಿ ಯಾವುದೇ ಸರಕಾರದ ವಿರುದ್ಧ ಮಾತನಾಡುವುದಿಲ್ಲ. ಎಲ್ಲ ಸರಕಾರಗಳು ರೈತರಿಗೆ ಪ್ರೋತ್ಸಾಹ ನೀಡಿದರೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಕೇಂದ್ರದಲ್ಲಿ
ಈಗಾಗಲೇ ಈ ಕುರಿತು ಚರ್ಚೆ ನಡೆಯುತ್ತಿದೆ. ರೈತರಿಗೆ ಕೃಷಿ ಕಾಯಿದೆ ಅನುಕೂಲವಾಗುವಂತೆ ಇರಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ರೈತಪರವಾಗಿ ನಿಲ್ಲುವುದು ಎಲ್ಲ ಪಕ್ಷಗಳ ಕರ್ತವ್ಯ. ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಕೆಲಸ ಸರಕಾರಗಳದ್ದು.

ಸಭಾಪತಿಯಾಗಿ ಆಯ್ಕೆಯಾಗಲು ಪ್ರೋತ್ಸಾಹ ನೀಡಿದ ಬಿಜೆಪಿಗೆ ಏನು ಹೇಳಲು ಬಯಸುತ್ತೀರಾ?
ಸಭಾಪತಿಯಾಗಿ ಬೆಂಬಲ ನೀಡಿ ಹೆಚ್ಚು ಮುತುವರ್ಜಿವಹಿಸಿದವರು ದೇವೇಗೌಡರು. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪ, ಆಡಳಿತ ಪಕ್ಷದ ನಾಯಕರು ಹಾಗೂ ನಮ್ಮ ಪಕ್ಷದವರು ನನ್ನ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಸಭಾಪತಿಯಾಗಿ ಆಯ್ಕೆ
ಮಾಡಿದ್ದಾರೆ. ಬಿಜೆಪಿಗೆ ಬಹುಮತ ಇದ್ದರೂ ನನ್ನ ಹಿರಿತನಕ್ಕೆ ಬೆಲೆ ನೀಡಿರುವ ಉಪಕಾರ ಸ್ಮರಿಸುತ್ತೇನೆ. ಯಾವುದೇ ರೀತಿಯಾಗಿ ಪಕ್ಷಪಾತ ಮಾಡದೆ ಏಕಮುಖವಾಗಿ ನಡೆದುಕೊಳ್ಳುತ್ತೇನೆ. ಸರಕಾರ ಜಾರಿಗೊಳಿಸುವ ಕಾರ್ಯಕ್ರಮಗಳೆಲ್ಲವನ್ನೂ
ಸದನ ದಲ್ಲಿ ಚರ್ಚೆ ಮಾಡಲು ಅವಕಾಶ ನೀಡುತ್ತೇನೆ. ಸದನದಲ್ಲಿ ಎಲ್ಲ ಪಕ್ಷದ ನಾಯಕರು ಮಾತನಾಡಲು ಅವಕಾಶ
ನೀಡುವ ಮೂಲಕ ಅವರ ಪ್ರತಿಯೊಂದು ಸಲಹೆ ಹಾಗೂ ಸಮಸ್ಯೆಗಳಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನ ಮೇಲಿದೆ.

ಗೋಹತ್ಯೆೆ ನಿಷೇಧ ಕಾಯಿದೆ ಜಾರಿಗೆ ಬಂದಿದೆ, ಇದಕ್ಕೆೆ ಸಭಾಪತಿ ಆಗಿ ನೀವು ಏನು ಹೇಳುತ್ತೀರಾ?
ಸದನದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಅಂಗೀಕಾರವಾಗಿದೆ. ಇದು ಸರಕಾರಕ್ಕೆ ಬಿಟ್ಟಿರುವ ವಿಷಯ. ಇದರ ಬಗ್ಗೆ ಸಭಾಪತಿ ಆದವರು ಮಾತನಾಡಬಾರದು. ಸದನದ ಒಳಗೆ ಚರ್ಚೆಯಾಗಿ ತೀರ್ಮಾನವಾಗಿದೆ. ಸದನದ ಹೊರಗೆ ಈ ವಿಷಯದ
ಕುರಿತು ಮಾತನಾಡುವುದು ತಪ್ಪು.

ಶಿಕ್ಷಕರ ಬೇಡಿಕೆಗೆ ಸ್ಪಂದಿಸುವ ನೀವು, ಈ ವೃಂದದ ಸಮಸ್ಯೆಗಳಿಗೆ ಪರಿಹಾರ ನೀಡುತ್ತೀರಾ?
ನನ್ನ ರಾಜಕೀಯ ಬೆಳವಣಿಗೆಯಲ್ಲಿ ಸ್ಥಾನಮಾನ- ಗೌರವವನ್ನು ಕಾಪಾಡಿರುವ ಸಮಸ್ತ ಶಿಕ್ಷಕ ವೃಂದದವರಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಇವತ್ತು ನಾನು ಸಭಾಪತಿ ಸ್ಥಾನದಲ್ಲಿದ್ದೇನೆ ಎಂಬುದಕ್ಕೆ ಅವರೇ ಕಾರಣ. ನನ್ನ ಅಧಿಕಾರವನ್ನು ಉಪಯೋಗ
ಮಾಡಿಕೊಂಡು ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ಶಿಕ್ಷಣದಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಲು ಅಧಿಕಾರವಿದೆ. ಶಿಕ್ಷಣದ ಬಗ್ಗೆ ಆಸಕ್ತಿ ತೋರಿ ಹೆಚ್ಚು ಒತ್ತು ನೀಡಲಾಗುತ್ತದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರುತ್ತಿವೆ. ಹಂತ ಹಂತವಾಗಿ ಶಿಕ್ಷಕ
ಕ್ಷೇತ್ರದ ಸಮಸ್ಯೆಗಳು ಬಗೆಹರಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!