Friday, 13th December 2024

BBK 11: ಬಿಗ್‌ ಬಾಸ್‌ಗೆ ಶಾಕ್‌; ನೊಟೀಸ್‌ ಜಾರಿ ಮಾಡಿದ ರಾಮನಗರ ಪೊಲೀಸರು: ಶೋ ನಿಲ್ಲುತ್ತಾ?

BBK 11

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 (BBK 11) ಎರಡನೇ ವಾರಕ್ಕೆ ಕಾಲಿಟ್ಟಿದ್ದು, ದಾಖಲೆಯ ಟಿಆರ್‌ಪಿಯೊಂದಿಗೆ ಮುನ್ನುಗ್ಗುತ್ತಿದೆ. ಜಗಳ, ವಾದ-ವಿವಾದ, ವಿಭಿನ್ನ ಟಾಸ್ಕ್‌ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಬಿಗ್‌ ಬಾಸ್‌ಗೆ ಇದೀಗ ಬಹು ದೊಡ್ಡ ಶಾಕ್‌ ಎದುರಾಗಿದೆ. ರಾಮನಗರ ಪೊಲೀಸರು ಬಿಗ್​ ಬಾಸ್​ ಶೋಗೆ ನೊಟೀಸ್ ನೀಡಿದ್ದಾರೆ.

ರಾಮನಗರದ ಕುಂಬಳಗೋಡು ಠಾಣೆ ಪೊಲೀಸರು ಬಿಗ್‌ ಬಾಸ್‌ ಆಯೋಜಕರಿಗೆ ನೋಟಿಸ್‌ ನೀಡಿದ್ದು, ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಬಿಗ್ ​ಬಾಸ್​ ಕಾರ್ಯಕ್ರಮದ ವಿಡಿಯೊಗಳನ್ನು ಹಾಜರುಪಡಿಸಲೂ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕಾರಣವೇನು?

ಬಿಗ್ ​ಬಾಸ್​ ಕನ್ನಡ ಸೀಸನ್ 11ರಲ್ಲಿ ಇದೇ ಮೊದಲ ಬಾರಿಗೆ ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್‌ ಪರಿಚಯಿಸಲಾಗಿತ್ತು. ಅದಕ್ಕಾಗಿ ಮನೆಯನ್ನು 2 ಭಾಗಗಳಾಗಿ ವಿಭಾಗಿಸಲಾಗಿತ್ತು. ಅದರಂತೆ ಆರಂಭದ ದಿನವೇ ಕೆಲವು ಸ್ಪರ್ಧಿಗಳನ್ನು ಸ್ವರ್ಗಕ್ಕೆ, ಕೆಲವು ಸ್ಪರ್ಧಿಗಳನ್ನು ನರಕಕ್ಕೆ ಕಳಿಸಲಾಗಿತ್ತು. ನರಕಕ್ಕೆ ಹೋದ ಸ್ಪರ್ಧಿಗಳು ನೆಲದ ಮೇಲೆ ಹಾಕಲಾದ ಬೆಡ್​ನಲ್ಲಿ ಮಲಗಬೇಕಿತ್ತು. ಅವರಿಗೆ ಕೇವಲ ಗಂಜಿ ಕೊಡಲಾಗುತ್ತಿತ್ತು. ಕುರ್ಚಿ ವ್ಯವಸ್ಥೆಯೂ ಇರಲಿಲ್ಲ. ಜತೆಗೆ ಜೈಲಿನ ಮಾದರಿಯ ಸರಳುಗಳ ಹಿಂದೆ ಇರಬೇಕಿತ್ತು. ನೀರು, ಊಟಕ್ಕೆ ಸ್ವರ್ಗವಾಸಿಗಳ ಅನುಮತಿ ಕೇಳಬೇಕಿತ್ತು. ಮಾತ್ರವಲ್ಲ ಶೌಚಾಲಯ ಹೋಗಲು ಸಹ ಅನುಮತಿ ಬೇಕಿತ್ತು.

ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಮಧ್ಯ ಪ್ರವೇಶಿಸಿ ಈ ಕುರಿತು ಮಾನವಕ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್​ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದ್ದರು.

ಹೀಗಾಗಿ ಮಾನವ ಹಕ್ಕು ಆಯೋಗವು ಬಿಗ್​ ಬಾಸ್​ಗೆ ನೋಟೀಸ್ ಕಳಿಸಿತ್ತು ಎನ್ನಲಾಗಿದೆ. ಇದಾದ ಬೆನ್ನಲ್ಲೇ ಬಿಗ್ ಬಾಸ್‌ ಮನೆಯೊಳಗೆ ನರಕವನ್ನ ಧ್ವಂಸ ಮಾಡಿ ಎಲ್ಲರಿಗೂ ಸಮಾನ ಸ್ಥಾನಮಾನ, ಸಮಾನ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲಾಗಿತ್ತು. ಇದೀಗ ಮಾನವ ಹಕ್ಕು ಉಲ್ಲಂಘನೆ ವಿಚಾರವಾಗಿ ರಾಮನಗರದ ಕುಂಬಳಗೋಡು ಪೊಲೀಸರು ಠಾಣೆಯ ಇನ್ಸಪೆಕ್ಟರ್ ಮಂಜುನಾಥ್ ಹೂಗಾರ್ ಅವರು ಬಿಗ್​ ಬಾಸ್​ಗೆ ತೆರಳಿ ಆಯೋಜಕರಿಗೆ ನೊಟೀಸ್ ನೀಡಿದ್ದು, ಕೆಲವು ದಿನಾಂಕದ ಫುಟೇಜ್ ಮತ್ತು ಅದರ ಸಂಪೂರ್ಣ ಆಡಿಯೋ ಅನ್ನು ಸಹ ನೀಡುವಂತೆ ತಿಳಿಸಿದ್ದಾರೆ. ಈ ಬಗ್ಗೆ ಅಸಡ್ಡೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಬಿಗ್‌ ಬಾಸ್‌ ಹೇಳಿದ್ದೇನು?

ಬಿಗ್ ಬಾಸ್‌ ಮನೆಯೊಳಗೆ ನರಕವನ್ನ ಧ್ವಂಸ ಮಾಡಿ ಎಲ್ಲರಿಗೂ ಸಮಾನ ಸ್ಥಾನಮಾನ, ಸಮಾನ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿದ ಬಳಿಕ ಬಿಗ್‌ ಬಾಸ್‌, ʼʼಈ ಮನೆ ಎರಡಾಗೋದಕ್ಕೆ ಒಂದು ದೊಡ್ಡ ಉದ್ದೇಶ ಇತ್ತು. ಆ ಉದ್ದೇಶ ಪೂರ್ಣಗೊಂಡಿದೆ. ಈಗ ಈ ಮನೆ ಒಂದಾಗೋ ಸಮಯ ಬಂದಿದೆ. ಇನ್ನು.. ಎರಡಾಗಿದ್ದ ಮನೆ ಒಂದಾಗುತ್ತೆ. ಒಂದಾದ ಮನೆ ಸ್ವರ್ಗವಾಗಿ ಉಳಿಯುತ್ತಾ? ಇಲ್ಲ, ನರಕ ಆಗುತ್ತಾ ಅನ್ನೋದು ನಿಮ್ಮ ಕೈಯಲ್ಲೇ ಇದೆʼʼ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್: ಶಿಶಿರ್ ಶಾಸ್ತ್ರಿ ಈಗ ದೊಡ್ಮನೆ ನಾಯಕ