Thursday, 12th December 2024

BBMP Property Tax: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗ! ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ

Property Registration

ಬೆಂಗಳೂರು: ನೀವು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ (BBMP Property Tax) ಆಸ್ತಿ ತೆರಿಗೆ ಉಳಿಸಿಕೊಂಡಿರುವವರಾದರೆ ಹುಷಾರ್. ಇಷ್ಟರಲ್ಲೇ ಬಿಬಿಎಂಪಿ ನಿಮ್ಮ ಕಟ್ಟಡಕ್ಕೆ ಬೀಗ ಜಡಿಯಬಹುದು. ಇಂಥ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ವಸೂಲಿ ಮಾಡಲು ಮುಖ್ಯ ಆಯುಕ್ತರಾದ (Commissioner) ತುಷಾರ್ ಗಿರಿನಾಥ್ (Tushar Girinath) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಲ್ಲೇಶ್ವರಂನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಸೂಚನೆ ನೀಡಿದರು.

ಆಯಾ ವಲಯಗಳ ಸಹಾಯಕ ಕಂದಾಯ ಅಧಿಕಾರಿ ವ್ಯಾಪ್ತಿವಾರು ಸಭೆ ನಡೆಸಿ, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಾಗೂ ಪರಿಷ್ಕರಣೆ ಪ್ರಕರಣಗಳ ಪಟ್ಟಿಯ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದ್ದು, ಈ ಯೋಜನೆಯು 30ನೇ ನವೆಂಬರ್ ವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು 30ನೇ ನವೆಂಬರ್ ಒಳಗಾಗಿ BBMPtax.karnataka.gov.in ಗೆ ಭೇಟಿ ನೀಡಿ ಪಾವತಿಸಬೇಕು. ಇಲ್ಲವಾದಲ್ಲಿ 1ನೇ ಡಿಸೆಂಬರ್ 2024 ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆಯು ದುಪ್ಪಟ್ಟಾಗಲಿದೆ ಎಂಬುದರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೆಕೆಂದು ಸೂಚಿಸಿದರು.

ನಗರದಲ್ಲಿ ಇ-ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲೆಗಳನ್ನು ತೆಗದುಕೊಂಡು ಹೋಗಿ 45 ರೂ. ಪಾವತಿಸಿದರೆ ಇ-ಖಾತಾ ಸಿಗಲಿದೆ ಎಂದು ಹೇಳಿದರು.

ನಾಗರೀಕರು ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಸಲುವಾಗಿ ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ಇದರಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಈ ವೀಡಿಯೋ ನೋಡಿಕೊಂಡು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ. ಇದೇ ರೀತಿ ಇನ್ನಿತರೆ ವೀಡಿಯೋಗಳನ್ನು ಕೂಡಾ ಅಪ್ಲೋಡ್ ಮಾಡಲಿದ್ದು, ಪಾಲಿಕೆಯ ಯೂಟ್ಯೂಬ್ ಚಾನಲ್ ಅನ್ನು Subscribe ಮಾಡಿಕೊಳ್ಳಲು ನಾಗರೀಕರಲ್ಲಿ ಕೋರಿದೆ.

ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ. ಸದರಿ ಕೇಂದ್ರಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅನಗತ್ಯವಾಗಿ ಕರೆ ಮಾಡದಿರಲು ವಿನಂತಿಸಿದೆ.

ವಲಯ – ಸಹಾಯವಾಣಿ ಸಂಖ್ಯೆ

  1. ಬೊಮ್ಮನಹಳ್ಳಿ ವಲಯ: 9480683182 / 9480683712
  2. ದಾಸರಹಳ್ಳಿ ವಲಯ: 9480683710
  3. ಮಹಾದೇವಪುರ ವಲಯ: 9480683718 / 9480683720
  4. ಪೂರ್ವ ವಲಯ: 9480683203
  5. ಪಶ್ಚಿಮ ವಲಯ: 9480683653 / 9480683204
  6. ದಕ್ಷಿಣ ವಲಯ: 9480683638 / 9480683179
  7. ರಾಜರಾಜೇಶ್ವರಿ ನಗರ ವಲಯ: 9480683576
  8. ಯಲಹಂಕ ವಲಯ: 9480683645 / 9480683516

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸತೀಶ್, ಸ್ನೇಹಲ್, ಕರೀಗೌಡ, ಅರ್ಚನಾ, ರಮೇಶ್, ಗಿರೀಶ್, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: Property Registration: ಅನಧಿಕೃತ ಬಡಾವಣೆಗಳ ತಡೆಗೆ ಬಿಬಿಎಂಪಿ ಕ್ರಮ; ಏಕ ನಿವೇಶನಕ್ಕೆ ಎ, ಬಿ ಖಾತೆ ಸ್ಥಗಿತ