ಕೊಲ್ಹಾರ: ಶೈಕ್ಷಣಿಕ ಹಂತದಲ್ಲಿ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ ಮಹಾನ್ ವ್ಯಕ್ತಿಗಳ, ವಿಶೇಷ ಸಾಧಕರ ಸಾಧನೆ ತೋರ್ಪಡಿಸಿ ಅವರಂತೆ ಸಾಧಿಸಲು ಪ್ರೇರಣೆ ನೀಡಬೇಕು ಎಂದು ಹುಬ್ಬಳ್ಳಿ ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ವಿಭಾಗೀಯ ಆಯುಕ್ತರಾದ ಶಂಕರ ಬೆಳ್ಳುಬ್ಬಿ ಹೇಳಿದರು.
ತಾಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯ ಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಗನಬಸವ ಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಕಾಲ ವೈಜ್ಞಾನಿಕವಾಗಿ ಬದಲಾಗಿದೆ ವೇದಿಕೆಯ ಮೇಲಿರುವ ನಾವುಗಳು ಪಾರ್ಲೇ ಜಿ ಕಾಲದವರು ಈಗಿನ ಮಕ್ಕಳು 2ಜಿ 3ಜಿ 4ಜಿ 5ಜಿ ಕಾಲದವರು, ನಾವುಗಳು ಬುಕ್ ಓದಿದವರು ಈಗೀಗ ಮಕ್ಕಳು ಫೇಸ್ಬುಕ್ ಓದುತ್ತಾ ಇದ್ದಾರೆ, ನಾವುಗಳೆಲ್ಲಾ ಗ್ರಾಂ… ನಲ್ಲಿ ಲೆಕ್ಕ ಹಾಕುತ್ತಾ ಇದ್ದೇವು ಈಗೀಗ ಮಕ್ಕಳು ಇನ್ಸ್ಟಾಗ್ರಾಮ್, ಟೆಲಿಗ್ರಾಂ ಉಪಯೋಗಿಸುತ್ತಾ ಇದ್ದಾರೆ ಎಂದು ಜಗತ್ತು ತಾಂತ್ರಿಕವಾಗಿ, ವೈಜ್ಞಾನಿಕ ವಾಗಿ ಮುಂದುವರೆದಿರುವ ಬಗ್ಗೆ ಮಾರ್ಮಿಕವಾಗಿ ನುಡಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಣ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದ ಅವರು ಸಂಗನಬಸವ ಶ್ರೀಗಳ ಹೆಸರಿನೊಂದಿಗೆ ರೋಣಿಹಾಳ ಗ್ರಾಮದಲ್ಲಿ ಮುನ್ನಡೆಯುತ್ತಿರುವ ಸಂಗನಬಸವ ಶಾಲೆಯು ಉತ್ತಮ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿದೆ ಈ ಶಾಲೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಧಿವ್ಯ ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಜಿಗಳು ಆಶೀರ್ವಚನ ನೀಡುತ್ತಾ ಜ್ಯೋತಿ ತನ್ನನ್ನು ತಾನು ದಹಿಸಿಕೊಂಡು ಜಗವ ಬೆಳಗಿದಂತೆ ಜಿಲ್ಲೆಯಲ್ಲಿ ಸಂಗನಬಸವ ಶ್ರೀಗಳು ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಬೆಳಕನ್ನು ಹರಡಿದ್ದಾರೆ ಶ್ರೀಗಳ ನಾಮಧೇಯದೊಂದಿಗೆ ರೋಣಿಹಾಳ ಗ್ರಾಮದಲ್ಲಿ ಮುನ್ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿ ಎಂದು ಹಾರೈಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ.ಗು ಸಿದ್ಧಾಪುರ ಹಾಗೂ ಇತರರು ಮಾತನಾಡಿದರು.
ಸಂಗನಬಸವ ಶ್ರೀ ಪ್ರಶಸ್ತಿ ಪ್ರಧಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಗನಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಸೇವೆ ಪರಿಗಣಿಸಿ ನ್ಯಾಯವಾದಿ ಮಹಮ್ಮದಗೌಸ್ ಹವಾಲ್ದಾರ್, ಸಹಕಾರಿ ಕ್ಷೇತ್ರದ ಸಾಧನೆ ಪರಿಗಣಿಸಿ ಕೆ.ಎಂ.ಎಫ್ ನಿರ್ದೇಶಕ ಗುರು ಚಲವಾದಿ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಪರಿಗಣಿಸಿ ಕುಬಕಡ್ಡಿ ಆರ್ ಎಂ ಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಉದಯಕುಮಾರ್ ಹಳ್ಳಿ ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿ ಕೊಲ್ಹಾರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಅವರಿಗೆ ಸಂಗನಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಮೂರ್ತಿ ರಾಜಶೇಖರಯ್ಯ ಹಿರೇಮಠ, ಮಹಾಂತಯ್ಯ ಮಠಪತಿ ಸಾನಿಧ್ಯ ವಹಿಸಿದ್ದರು.
ಬ.ಬಾಗೇವಾಡಿ ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಪೂಜಾರಿ, ತಾನಾಜಿ ನಾಗರಾಳ, ಮಲ್ಲಿಕಾರ್ಜುನ ದೇಸಾಯಿ, ರೋಣಿಹಾಳ ಗ್ರಾ ಪಂ ಉಪಾಧ್ಯಕ್ಷ ಗುರುನಗೌಡ ಬಿರಾದಾರ, ಗಂಗಾಧರ ಚೌದ್ರಿ, ನ್ಯಾಯವಾದಿ ಸದಾನಂದ ನಿಂಗನೂರ, ಸಿ.ಆರ್ ಹಿರೇಮಠ, ಬಸವರಾಜ ಬಿಳಗಿ, ಜಗದೀಶ ಸಾಲಳ್ಳಿ, ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಪಾರಗೊಂಡ, ಶಿಕ್ಷಣ ಸಂಯೋಜಕರಾದ ಜಿ.ಎಸ್ ಗಣಿ, ಎಸ್.ಜಿ ಪಾರಗೊಂಡ ಹಾಗೂ ಇತರರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ ಮಟ್ಟಿಹಾಳ ನಿರೂಪಿಸಿ ವಂದಿಸಿದರು.