Saturday, 23rd November 2024

Bengaluru News: ಬೆಂಗಳೂರಿನಲ್ಲಿ ನ.24ರಂದು ಸದ್ಗುರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ

Bengaluru News

ಬೆಂಗಳೂರು: ಬೆಂಗಳೂರಿನ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ನವೆಂಬರ್ 24ರಂದು ಭಾನುವಾರ ನಗರದ (Bengaluru News) ಬನಶಂಕರಿ ಒಂದನೇ ಹಂತದಲ್ಲಿರುವ (ಪಿಇಎಸ್ ಪದವಿ ಕಾಲೇಜು ಹಿಂಭಾಗ) ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆ ಆವರಣದಲ್ಲಿ ಸಂಗೀತ ಪರಮಹಂಸ ಸದ್ಗುರು ಶ್ರೀ ಮುತ್ತು ಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಮತ್ತು ಸಂತ ಕವಿ ಕನಕದಾಸರ ಜಯಂತಿ ಕಾರ್ಯಕ್ರಮ ನಿಮಿತ್ತ ವಿಶೇಷ ಸಂಗೀತ ಕಚೇರಿಗಳನ್ನು ಆಯೋಜಿಸಿದೆ.

ಅಂದು ಮಧ್ಯಾಹ್ನ 3:30ಕ್ಕೆ ಕಾರ್ಯಕ್ರಮವನ್ನು ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪೋಷಕರಾದ ಸುಧಾಮಣಿ ಉದ್ಘಾಟಿಸಲಿದ್ದಾರೆ . ನಾಡಿನ ಹಿರಿಯ ವಿದ್ವಾಂಸ ಮತ್ತು ಖ್ಯಾತ ಗಾಯಕ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ | Kannada New Movie: ʼಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರುʼ ಚಿತ್ರದ ಮೊದಲ ಹಾಡು ಬಿಡುಗಡೆ

ನಂತರ ಮುತ್ತುಸ್ವಾಮಿ ದೀಕ್ಷಿತರ ಪಾಶ್ಚಾತ್ಯ ಸಂಗೀತ ಸಂಯೋಜನೆಗಳನ್ನು ಆಧರಿಸಿದ ನೊಟ್ಟುಸ್ವರ ಸಾಹಿತ್ಯ ಗೋಷ್ಠಿ ಗಾಯನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ 15 ವೀಣಾ ಕಲಾವಿದರಿಂದ, ಮತ್ತು ವಯೋಲಿನ್‌ನಲ್ಲಿ ಚೈತ್ರ ಶ್ರೀಧರ್, ಏಕಕಾಲಕ್ಕೆ ನೊಟ್ಟುಸ್ವರ ವಾದನ ಮತ್ತು ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ನೊಟ್ಟುಸ್ವರ ಸಾಹಿತ್ಯ ಗಾಯನ ಪ್ರಸ್ತುತಿ ನಡೆಯಲಿದೆ. ನಂತರ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಗಾಯನವಿದೆ.

ಶಿಬಿರಾರ್ಥಿಗಳಿಂದ ಗಾಯನ

ವಿದ್ಯಾಲಯವು ಆಯೋಜಿಸಿದ್ದ ವಿಶೇಷ ಶಿಬಿರದಲ್ಲಿ ದಾಸರಪದಗಳನ್ನು ಕಲಿತ ಶಿಬಿರಾರ್ಥಿಗಳಿಂದ ಮತ್ತು ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಕನಕದಾಸರು ರಚಿಸಿದ ದೇವರನಾಮಗಳ ಗಾಯನ ನಡೆಯಲಿದೆ.

ವಿದ್ವಾಂಸರ ಕಛೇರಿ: ಭಾನುವಾರ ಸಂಜೆ 7ಕ್ಕೆ ವಿದ್ವಾನ್ ಸುಬ್ಬಕೃಷ್ಣ ಮತ್ತು ವಿದ್ವಾನ್ ನಿರಂಜನ ಯಡಿಯಾಳ ಅವರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಆಧರಿಸಿ ವಿಶೇಷ ಸಂಗೀತ ಕಚೇರಿ ಪ್ರಸ್ತುತಪಡಿಸಲಿದ್ದಾರೆ .

ಕೊಳಲು ವಾದನ ಕಛೇರಿ: ರಾತ್ರಿ 7.30 ಕ್ಕೆ ಯುವ ವಿದ್ವಾಂಸ ಶಶಾಂಕ ಚಿನ್ಯ ಅವರಿಂದ ಕೊಳಲು ವಾದನ ಕಛೇರಿ ಹಮ್ಮಿಕೊಳ್ಳಲಾಗಿದೆ.

ಪಕ್ಕವಾದ್ಯ ಸಾಥ್: ವಿದ್ವಾಂಸರಾದ ಅಭಯ್ ಸಂಪಿಗೆತ್ತಾಯ ( ಪಿಟೀಲು), ಶಿವಮೊಗ್ಗ ನಿಖಿಲ್ ಕುಮಾರ್ (ಮೃದಂಗ ), ವಿದುಷಿಯರಾದ ಬಿ. ಜಿ . ರಮಾ ಪ್ರಸನ್ನ, ದೀಪ್ತಿ ಎನ್ ಪ್ರಸಾದ್ ಮತ್ತು ಧನ್ಯಶ್ರೀ (ವೀಣೆ) ಸಾಥ್ ನೀಡಲಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ. ಎಸ್. ಶ್ರೀಕಂಠ ಭಟ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ಅಂತರ್‌ ಕಾಲೇಜು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸದ್ಗುರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೊಡುಗೆ ಅಪಾರವಾದದ್ದು. ಹಾಗೆಯೇ ಕರ್ನಾಟಕ ಸಂಗೀತ ಕ್ಷೇತ್ರ ಮತ್ತಷ್ಟು ಬೆಳಗಲು ದಾಸ ಶ್ರೇಷ್ಠರಾದ ಕನಕದಾಸರ ಪದ್ಯ, ಪದ, ಮುಂಡಿಗೆ ರಚನೆಗಳು ಮಹತ್ತರವಾದ ಕೊಡುಗೆಯನ್ನು ನೀಡಿವೆ. ಅವುಗಳನ್ನು ಸ್ಮರಣೆ ಮಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಸಮರ್ಥವಾಗಿ ಕೊಡುಗೆಯನ್ನಾಗಿ ನೀಡಲು ನಾವು ಇಂತಹ ಆರಾಧನಾ ಮಹೋತ್ಸವಗಳನ್ನು ನಡೆಸಬೇಕು. ಸಂಗೀತ-ಸಾಹಿತ್ಯಗಳು ಇಲ್ಲಿ ವಿಜೃಂಬಿಸಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು 25 ವರ್ಷದಿಂದ ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ತಿಳಿಸಿದ್ದಾರೆ.