Wednesday, 11th December 2024

Bengaluru Space Expo 2024: ಬೆಂಗಳೂರು ಸ್ಪೇಸ್‌ ಎಕ್ಸ್‌ಪೊ ಇಂದಿನಿಂದ ಆರಂಭ

Bengaluru Space Expo 2024

ಬೆಂಗಳೂರು: ಬೆಂಗಳೂರು ಸ್ಪೇಸ್‌ ಎಕ್ಸ್‌ಪೊ- 2024 (Bengaluru Space Expo 2024) ಆವೃತ್ತಿಯು ಇಂದಿನಿಂದ ಆರಂಭವಾಗಲಿದೆ. ಸೆ.18, ಬುಧವಾರದಿಂದ ಆರಂಭವಾಗಲಿರುವ ಬೆಂಗಳೂರು ಸ್ಪೇಸ್‌ ಎಕ್ಸ್‌ಪೊ ಸೆ.20 ಶುಕ್ರವಾರದವರೆಗೆ ಬೆಂಗಳೂರು ಇಂಟರ್‌ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ (BIEC) ಇಲ್ಲಿ ಆಯೋಜನೆಗೊಂಡಿದೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿ ಆಯೋಜಿಸಿರುವ ಈ ದ್ವೈವಾರ್ಷಿಕ ಅಂತಾರಾಷ್ಟ್ರೀಯ ಪ್ರದರ್ಶನದ ಎಂಟನೇ ಆವೃತ್ತಿಯಲ್ಲಿ ಪ್ರಪಂಚದಾದ್ಯಂತದ 250ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಕಂಪನಿಗಳು ಭಾಗವಹಿಸಲಿದ್ದಾರೆ. ಇತರ ಬಾಹ್ಯಾಕಾಶ ಉತ್ಸಾಹಿಗಳು ಮತ್ತು ಸಂದರ್ಶಕರಿಗೂ ಇದು ತೆರೆದಿದೆ.

ಕಾರ್ಯಕ್ರಮದಲ್ಲಿ ಸಂದರ್ಶಕರು ಉಚಿತವಾಗಿ ಭಾಗವಹಿಸಬಹುದು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಅನ್ವೇಷಿಸಲು ಮತ್ತು ಚರ್ಚಿಸಲು ಈ ಉದ್ಯಮದ ನಾಯಕರು, ಸಂಶೋಧಕರು ಮತ್ತು ಉತ್ಸಾಹಿಗಳಿಗೆ ಇದು ಸಾಮಾನ್ಯ ವೇದಿಕೆಯನ್ನು ಒದಗಿಸಿದೆ. ಪ್ರದರ್ಶನದಲ್ಲಿ ಹಲವಾರು ಹೊಸ ಉತ್ಪನ್ನಗಳ ಬಿಡುಗಡೆ ಆಗಲಿದೆ.

ಬೆಂಗಳೂರಿನ ಬಿಐಇಸಿಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದ ಭವಿಷ್ಯದ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳು ಪ್ರದರ್ಶಿತಗೊಳ್ಳಲಿವೆ. ಈವೆಂಟ್ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒಳಗೊಂಡಿದೆ. ಮೂರು ದಿನಗಳೂ ವ್ಯಾಪಾರಿ ಸಂದರ್ಶಕರಿಗೆ ತೆರೆದಿದ್ದು, ಇತರ ಸಾಮಾನ್ಯ ಸಂದರ್ಶಕರಿಗೆ ಸೀಮಿತ ಪ್ರವೇಶಾವಕಾಶವಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈವೆಂಟ್‌ನ ಕೊನೆಯ ದಿನವಾದ ಶುಕ್ರವಾರ ಭೇಟಿ ನೀಡಬಹುದು.

ಬೆಂಗಳೂರು ಬಾಹ್ಯಾಕಾಶ ಎಕ್ಸ್‌ಪೋ 2024ದಲ್ಲಿ ಬಾಹ್ಯಾಕಾಶ ಸಂಬಂಧಿತ ಸೇವೆಗಳು, ಡಿಟಿಎಚ್ ಪೂರೈಕೆದಾರರು, ಎಲೆಕ್ಟ್ರಾನಿಕ್ಸ್ ಮತ್ತು ಆಪ್ಟಿಕ್ಸ್, ಜಿಪಿಎಸ್ ನ್ಯಾವಿಗೇಷನ್, ಐಟಿ ಮತ್ತು ಸ್ಪೇಸ್‌ ಆಟೋಮೊಬೈಲ್‌ಗಳು, ಉಡಾವಣಾ ಸೌಲಭ್ಯ ಒದಗಿಸುವವರು, ಬಾಹ್ಯಾಕಾಶ ಉಪಕರಣಗಳ ತಯಾರಿಕೆ, ಸಂಶೋಧನಾ ಸಂಸ್ಥೆ, ಉಪಗ್ರಹ ಭಾಗಗಳು ಮತ್ತು ಘಟಕಗಳು, ಸಂಶೋಧನಾ ಸಂಸ್ಥೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳ ಪ್ರದರ್ಶಕರನ್ನು ಒಳಗೊಂಡಿದೆ.

ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಪ್ರಸ್ತುತ 80,372 ಕೋಟಿ ಮೌಲ್ಯದ್ದಾಗಿದೆ ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಗೆ 2-3% ಕೊಡುಗೆ ನೀಡುತ್ತದೆ. ಭಾರತೀಯ ಬಾಹ್ಯಾಕಾಶ ಆರ್ಥಿಕತೆಯು 2025 ರ ವೇಳೆಗೆ 1,08,837 ಕೋಟಿ ರೂಪಾಯಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ 400ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳು, ಸಂಘಟಿತ ಸಂಸ್ಥೆಗಳು ಮತ್ತು SMEಗಳು, ಬಾಹ್ಯಾಕಾಶ ಉಡಾವಣೆ ಮತ್ತು ಮೂಲಸೌಕರ್ಯಕ್ಕಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ISROನೊಂದಿಗೆ ಸಹಕರಿಸುತ್ತವೆ.

ಇದನ್ನೂ ಓದಿ: ‘ಪುಷ್ಪಕ್’ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ