ನವದೆಹಲಿ: ವಿವಾಹಿತ ಮಹಿಳೆಯರು (Married Women) ಸ್ವಾರ್ಥಕ್ಕಾಗಿ ತಮ್ಮ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ಕ್ರೌರ್ಯ ಕಾನೂನನ್ನು (Cruelty Law) ದೊಡ್ಡಮಟ್ಟದಲ್ಲಿ ಬಳಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. 34 ವರ್ಷದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ (Atul Subhash) ನ್ಯಾಯ ಸಿಗಬೇಕೆಂಬ ಸಾಕಷ್ಟು ಬೇಡಿಕೆಗಳ ಮಧ್ಯೆಯೇ ಸುಪ್ರೀಂ ಕೋರ್ಟ್ (Supreme Court) ಕಳವಳ ವ್ಯಕ್ತಪಡಿಸಿದೆ. ಹಣ ವಸೂಲಿ ಮಾಡಲು ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ದೂರು ನೀಡಿದ್ದ ಅತುಲ್, ಪತ್ನಿಯ ಕಿರುಕುಳ ತಾಳಲಾರದೇ ಆಕೆ ಮತ್ತು ಆಕೆಯ ಕುಟುಂಬವನ್ನು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ವರದಿಯೊಂದರ ಪ್ರಕಾರ ನ್ಯಾಯಾಲಯವು ಮಂಗಳವಾರ ತೆಲಂಗಾಣ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸುವಾಗ, ವಿವಾಹಿತ ಮಹಿಳೆಯರ ವಿರುದ್ಧ ಪತಿ ಮತ್ತು ಅವರ ಸಂಬಂಧಿಕರಿಂದ ಕ್ರೌರ್ಯಕ್ಕೆ ದಂಡ ವಿಧಿಸುವ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಭಾರೀ ದುರ್ಬಳಕೆಯಾಗುತ್ತಿದೆ ಎಂದಿದೆ.
ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸುವ ಉದ್ದೇಶಕ್ಕಾಗಿ ಇರುವ ಕಾನೂನನ್ನು ಕೆಲವು ಮಹಿಳೆಯರು ತಮ್ಮ ಪತಿ ಮತ್ತು ಅವರ ಕುಟುಂಬವನ್ನು ಹೆದರಿಸಲು ಮತ್ತು ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠವು ಹೇಳಿದೆ. ಪತಿ ಮತ್ತು ಅವರ ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ತೆಲಂಗಾಣ ಪ್ರಕರಣ ವಿಚಾರಣೆ
ಪತಿ ಮತ್ತು ಅಳಿಯಂದಿರ ವಿರುದ್ಧ ಪತ್ನಿ ಸಲ್ಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು ವಜಾಗೊಳಿಸುವ ಸಂದರ್ಭದಲ್ಲಿ ಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ. ತೆಲಂಗಾಣ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ವಿಚ್ಛೇದನ ಕೋರಿ ಪತ್ನಿ ಪ್ರಕರಣ ದಾಖಲಿಸಿದ್ದರು. ವಾದಗಳನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಪತ್ನಿ ವೈಯಕ್ತಿಕ ದ್ವೇಷ ಸಾಧಿಸಲು ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಅವಳನ್ನು ರಕ್ಷಿಸಲು ಉದ್ದೇಶಿಸಿರುವ ಕಾನೂನು ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಸುಭಾಷ್ ಅತುಲ್ ಆತ್ಮಹತ್ಯೆ
ಪತ್ನಿಯ ನಿರಂತರ ಕಿರುಕುಳದಿಂದ ನೊಂದು ಬೆಂಗಳೂರಿನ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಮಂಗಳವಾರ(ಡಿ.10) ನಗರ ಠಾಣೆ ಪೊಲೀಸರು ಆತ್ಮಹತ್ಯೆ ಪತ್ರವನ್ನು ಅರಿತು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ ಮೂಲದ 34 ವರ್ಷದ ಅತುಲ್ ಸುಭಾಷ್ ಅವರು ಸೋಮವಾರ(ಡಿ.9) ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾವಿಗೂ ಮುನ್ನ 24 ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಅವರು ತಮ್ಮ ವಿಚ್ಛೇದಿತ ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಅವರು ತಮ್ಮ ಪ್ರಕರಣವನ್ನು ವಿವರಿಸುವ 90 ನಿಮಿಷಗಳ ವಿಡಿಯೊವನ್ನು ಸಹ ಚಿತ್ರೀಕರಿಸಿದ್ದರು. ಸಾಮಾಜಿಕ ಜಾಲತಾಣದ ಬಳಕೆದಾರರು ಅತುಲ್ ಸುಭಾಷ್ ಅವರ ಬೆಂಬಲಕ್ಕೆ ನಿಂತಿದ್ದು ಅವರ ಸಾವಿಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಅತುಲ್ ಆತ್ಮಹತ್ಯೆ ಪ್ರಕರಣ ಅವರ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂಬ ಮಾಹಿತಿಯಿದೆ.
ಈ ಸುದ್ದಿಯನ್ನೂ ಓದಿ:Dehradun Car Accident: 6 ವಿದ್ಯಾರ್ಥಿಗಳನ್ನು ಬಲಿ ಪಡೆದ ಡೆಡ್ಲಿ ಆಕ್ಸಿಡೆಂಟ್ ಮಿಸ್ಟ್ರಿ ರಿವೀಲ್; ಪಾರ್ಟಿ ಮಾಡಿ ನಂತ್ರ ಐಷಾರಾಮಿ ಕಾರುಗಳಲ್ಲಿ ರೇಸಿಂಗ್!