Saturday, 14th December 2024

ಮುಖ್ಯಮಂತ್ರಿ ಬಾಣ, ಹೈಕಮಾಂಡ್ ತಲ್ಲಣ

ನಾಯಕತ್ವ ಗೊಂದಲಕ್ಕೆ ತೆರೆ ಎಳೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ನಾಯಕತ್ವ ಬದಲಾವಣೆಗೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಟ್ಟಿರುವ ಬಾಣ ಈಗ ಪಕ್ಷದ ಹೈಕಮಾಂಡ್
ಮುಂಬಾಗಿಲಲ್ಲಿ ನಾಟಿದೆ. ಈ ಬಾಣ ರಾಜ್ಯದ ಅತೃಪ್ತ ಬಣದ ಬಾಯಿ ಮುಚ್ಚಿಸಿದ್ದು ಮಾತ್ರವಲ್ಲದೆ ಪಕ್ಷದ ವರಿಷ್ಠರು
ನಾಯಕತ್ವ ಕುರಿತು ಸ್ಪಷ್ಟಪಡಿಸುವಂತೆ ಒತ್ತಾಯಿಸುತ್ತಿದೆ.

ಇದರಿಂದ ಪಕ್ಷದ ವಿರೋಧ ಬಣ ಮಾಡಿದ ಉಪಟಳಕ್ಕೆ ಈಗ ಹೈಕಮಾಂಡ್ ಉತ್ತರಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿ ಬಂದೊದಗಿದೆ. ಕಳೆದ ಐದಾರು ತಿಂಗಳಿನಿಂದ ಪಕ್ಷದವರೇ ಆದ ಬಸವಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ ಹಾಗೂ ಅರವಿಂದ ಬೆಲ್ಲದ್ ಸೇರಿದಂತೆ ಕೆಲವರು ನಾಯಕತ್ವ ಕುರಿತು ನಿರಂತರವಾಗಿ ಹೇಳಿಕೆ ನೀಡುತ್ತಿದ್ದ ಯಡಿಯೂರಪ್ಪ ಅವರು ಮಾತ್ರ ಎಲ್ಲಿಯೂ ತುಟಿ ಬಿಚ್ಚುತ್ತಿರಲಿಲ್ಲ.

ಆದರೆ ರಾಜ್ಯದ ಗುಪ್ತಚರ ಮಾಹಿತಿ ಪ್ರಕಾರ, ತಮ್ಮ ಜತೆಗಿರುವ ಸಚಿವರು, ಶಾಸಕರ ಕೆಲವರು ನಾಯಕತ್ವ ಬದಲಾವಣೆ ಸೊಪ್ಪು
ಹಾಕುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದರಿಂದ ಯಡಿಯೂರಪ್ಪ ಸಿಟ್ಟೆದ್ದು ರಾಜೀನಾಮೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪ ಅವರು ಅನಿರೀಕ್ಷಿತ ರೀತಿಯಲ್ಲಿ ಮೌನ ಮುರಿದು, ಪಕ್ಷ ಸೂಚಿಸಿದರೆ ರಾಜೀನಾಮೆ ಸಲ್ಲಿಸಲು ಸಿದ್ಧ.
ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅಚ್ಚರಿ ಮೂಡಿಸಿದ್ದಾರೆ.

ಅಂದರೆ ನನ್ನನ್ನು ಅಧಿಕಾರದಿಂದ ಇಳಿಸಬೇಕಾದರೆ ಹೈಕಮಾಂಡ್‌ನಿಂದ ಸೂಚನೆ ಕೊಡಿಸಿ ನೋಡೋಣ ಎಂದು ವಿರೋಧಿ ಗಳಿಗೆ ಪರೋಕ್ಷ ಸವಾಲು ಹಾಕಿದ್ದಾರೆ. ಹಾಗೆಯೇ ನಾಯಕತ್ವ ಬದಲಾವಣೆ ಮಾಡಿ ವಿರೋಧಿಗಳ ಹೇಳಿಕೆ ಸತ್ಯ ಎಂದು ದೃಢಪಡಿಸಿ, ಇಲ್ಲವೇ ಅವರ ಬಾಯಿ ಮುಚ್ಚಿಸಿ. ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿ ಎಂಬ ಒತ್ತಡದ ಬಾಣ
ಪ್ರಯೋಗ ಮಾಡಿದ್ದಾರೆ. ಹೀಗಾಗಿ ಯುಡಿಯೂರಪ್ಪ ಅವರ ತಿರುಗುಬಾಣ ಈಗ ಹೈಕಮಾಂಡ್ ಅನ್ನೇ ಇಕ್ಕಟ್ಟಿಗೆ ಸಿಕ್ಕಿಸಿದೆ. ದಿಲ್ಲಿ ನಾಯಕರು ನಾಯಕತ್ವ ಬದಲಿಸುವ ಹೇಳಿಕೆ ನೀಡಿ ಯಡಿಯೂರಪ್ಪ ಅವರಿಗೆ ಉತ್ತರಿಸಬೇಕು. ಇಲ್ಲವೇ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ವಿರೋಧಿಗಳ ಬಾಯಿ ಮುಚ್ಚಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.

ಪಕ್ಷ ಮೌನವಾದರೆ ಪ್ರತಿಪಕ್ಷಕ್ಕೆ ಆಹಾರ
ಈ ವಿಚಾರದಲ್ಲಿ ಹೈಕಮಾಂಡ್ ಈ ತನಕ ವಹಿಸಿದ ಜಾಣಮೌನಕ್ಕೆ ಶರಣಾದರೆ ಅದರ ಪರಿಣಾಮ ಗಂಭೀರವಾಗಿತ್ತದೆ ಎನ್ನುವ ಅರಿವು ದಿಲ್ಲಿ ನಾಯಕರಿಗಿದೆ. ಏಕೆಂದರೆ, ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತು ಸಾವು ಇನ್ನೂ ಹೆಚ್ಚುತ್ತಲೇ ಇದ್ದು, ಇಂಥ ಸಂದರ್ಭದಲ್ಲಿ ಸರಕಾರದಲ್ಲಿ ನಾಯಕತ್ವ ಬದಲಾವಣೆಯ ಬೀದಿ ಜಗಳಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಬಿಜೆಪಿ ಒಳಜಗಳವೇ ಟೀಕೆಯ ಮುಖ್ಯ ಆಹಾರವಾಗಿದ್ದು, ಇದು
ಬಿಜೆಪಿಗೆ ದೊಡ್ಡ ಹೊಡೆತ ಉಂಟಾಗಲಿದೆ ಎನ್ನುವ ಆತಂಕವೂ ಇದೆ. ಹೀಗಾಗಿ ನಾಯಕತ್ತವ ಗೊಂದಲಕ್ಕೆ ಈಗ ಹೈಕಮಾಂಡ್ ತೆರೆ ಎಳೆಯಲೇಬೇಕಾದ ಅನಿವಾರ್ಯ ಉಂಟಾಗಿದೆ ಎಂದು ಬಿಜೆಪಿ ದೆಹಲಿ ಕಚೇರಿ ಮೂಲಗಳು ಹೇಳುತ್ತಿವೆ.

ದಿಲ್ಲಿ ನಾಯಕರ ಚಿಂತನೆ ಏನು ?
ದಿಲ್ಲಿ ಮೂಲಗಳ ಪ್ರಕಾರ ಪಕ್ಷದ ರಾಷ್ಟ್ರೀಯ ನಾಯಕರು ಈ ವಿಚಾರದಲ್ಲಿ ಕೊಂಚ ನಿಧಾನವಾಗಿ ಪ್ರತಿಕ್ರಿಯಿಸಲು ಸಿದ್ಧತೆ ನಡೆಸುತ್ತಿದೆ. ಅಂದರೆ ಜೂನ್ ೨೦ ವರೆಗೂ ರಾಜ್ಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಗಮನಿಸಿ ನಂತರ ರಾಜ್ಯಉಸ್ತುವಾರಿ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳುಹಿಸಿ ಒಂದು ಪ್ರಾಥಮಿಕ ಸಂದೇಶ ರವಾನಿಸಲಿದೆ. ಆನಂತರ ಅವರಿಂದ ರಾಜ್ಯದ
ಉಭಯ ಬಣಗಳ ನಾಯಕರಿಂದಲೂ ಮಾಹಿತಿ ಪಡೆದು ಅದನ್ನು ವಿಶ್ಲೇಷಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ಕಳುಹಿಸಲಿದೆ. ಈ ಮಧ್ಯೆ ಪಕ್ಷದ ವರಿಷ್ಠರಾದ ನರೇಂದ್ರಮೋದಿ ಹಾಗೂ ಅಮಿತ್ ಶಾ ಅವರು, ಅರುಣ್ ಸಿಂಗ್ ಅವರ ಮಾಹಿತಿಗಿಂತ ಪಕ್ಕಾ ಆರ್‌ಎಸ್‌ಎಸ್ ಮೂಲದ ಭೂಪೇಂದ್ರ ಯಾದವ್ ಅವರ ಮಾಹಿತಿಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ ಎನ್ನಲಾಗಿದೆ.

ಸಹಿ ಸಂಗ್ರಹ ಸಮರ ಶುರು
ಯಡಿಯೂರಪ್ಪ ಅವರ ಹೇಳಿಕೆಯಿಂದ ಬೆಚ್ಚಿರುವ ಅವರ ಬೆಂಬಲಿಗರು, ಈಗ ಸಹಿ ಸಂಗ್ರಹ ರಾಜಕಾರಣ ಆರಂಭಿಸಿದ್ದಾರೆ. ಸದ್ಯ ಯಡಿಯೂರಪ್ಪ ವಿರುದ್ಧ ಯತ್ನಾಳ್, ಯೋಗೇಶ್ವರ ಹಾಗೂ ಅರವಿಂದ ಬೆಲ್ಲದ್ ಬಿಟ್ಟರೇ ಯಾರೂ ಬಹಿರಂಗವಾಗಿ ಕಾಣುತ್ತಿಲ್ಲ. ಸಹಿ ಸಂಗ್ರಹ ಆರಂಭಿಸಿದರೆ ಪರೋಕ್ಷವಾಗಿ ವಿರೋಧಿಸುವವರ ಅಸಲಿಯತ್ತು ಗೊತ್ತಾಗಲಿದೆ ಎಂದು ಸಿಎಂ ಪರ ಬಣ ತಂತ್ರರೂಪಿಸಿದೆ. ಈ ಮಧ್ಯೆ, ಶಾಸಕ ರೇಣುಕಾಚಾರ್ಯ ಈಗಾಗಲೇ ಯಡಿಯೂರಪ್ಪ ನಾಯಕತ್ವದ ಪರ ೬೫ ಶಾಸಕರ ಸಹಿ
ಸಂಗ್ರವಾಗಿದೆ ಎಂದೂ ಸಾರಿ ಹೇಳುತ್ತಿದ್ದು, ಇದನ್ನು ಅರವಿಂದ್ ಬೆಲ್ಲದ್ ವಿರೋಧಿಸಿದ್ದಾರೆ. ೬೫ ಮಂದಿ ಸಹಿ ಹಾಕಿರುವ ಪತ್ರ ಈ ಹಿಂದೆ ಶಾಸಕರ ಅನುದಾನಕ್ಕೆ ಸಂಬಂಧಿಸಿದ್ದಾಗಿತ್ತು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

***

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವೇ. ಆದ್ದರಿಂದ ಅವರನ್ನು ಕೆಳಗಿಸುವ ಉದ್ದೇಶ ನಮ್ಮದಾಗಿಲ್ಲ.
ಅವರು ನಮ್ಮ ನಾಯಕರು. ಈ ಬಗ್ಗೆ ಪದೇಪದೆ ಪ್ರಶ್ನಿಸಬೇಡಿ.

– ಸಿ.ಪಿ ಯೋಗೇಶ್ವರ, ಪ್ರವಾಸೋದ್ಯಮ ಸಚಿವ