Sunday, 6th October 2024

ಸರಕಾರದಿಂದ ಸದ್ದಿಲ್ಲದೆ ಬಿಪಿಎಲ್‌ ಕಾರ್ಡ್‌ ದಂಧೆ

ವಿಶೇಷ ವರದಿ: ಶಿವಕುಮಾರ್‌ ಬೆಳ್ಳಿತಟ್ಟೆ

ಇದು ಹಿಂದಿನ ತೀರ್ಮಾನವೋ, ಹೊಸ ನಾಯಕತ್ವದ ಬದಲಾವಣೆಯೋ ತಿಳಿಯುತ್ತಿಲ್ಲ

ಸರಕಾರದ ನಾಯಕತ್ವ ಬದಲಾವಣೆಯ ಫಲವೋ ಏನೋ, ರಾಜ್ಯದಲ್ಲಿ ದೀನ, ದುರ್ಬಲರ ಹೊಟ್ಟೆಪಾಡಿನ ಚೀಟಿ ಎಂದೇ ಹೆಸರಾದ ಬಿಪಿಎಲ್‌ ಕಾರ್ಡ್ ಬಂದ್ ಆಗಿವೆ.

ಇದು ಸರಕಾರದ ನೂತನ ನಾಯಕತ್ವದ ಕೊಡುಗೆಯೋ ಅಥವಾ ಹಿಂದಿನ ವ್ಯವಸ್ಥೆಯ ಎಡವಟ್ಟು ತೀರ್ಮಾನ ವೋ ಎನ್ನುವುದು ಫಲಾನುಭವಿಗಳಿಗಂತೂ ತಿಳಿಯುತ್ತಿಲ್ಲ. ಆಹಾರ ಇಲಾಖೆ ಕೈಗೊಂಡಿರುವ ಈ ಬಡಜನರ ವಿರೋಧಿ ತೀರ್ಮಾನದ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿದಂತೆ ಕಾಣುತ್ತಿಲ್ಲ. ಆದರೆ ಈ ತೀರ್ಮಾನದ ಹಿಂದೆ ಆಹಾರ ಸಚಿವ ಉಮೇಶ್ ಕತ್ತಿ ಅವರ ಉದ್ದೇಶಿತ ಚಿಂತನೆ ಇದೆ ಎನ್ನುವುದು ದೃಢವಾಗಿದೆ.

ಹೌದು. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ಹಂಚಿಕೆ ಬಂದ್ ಆಗಿದ್ದು, ಸದ್ಯ ಯಾರೂ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‌ಗಳು ಕೂಡ ಸಿಗುತ್ತಿಲ್ಲ. ಹೀಗಾಗಿ ರಾಜ್ಯಾದಂತ ಸುಮಾರು ೪.೫೦ಲಕ್ಷಕ್ಕೂ ಅಽಕ ಮಂದಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಷ್ಟೇ ಅಲ್ಲ. ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ೧ ಲಕ್ಷಕ್ಕ ಹೆಚ್ಚು ಜನ ಕಾಯುತ್ತಿದ್ದು, ಇಲಾಖೆ ವೆಬ್‌ಸೈಟ್‌ನತ್ತ ನಿತ್ಯವೂ ನೋಡಿ ನಿರಾಶೆ ಗೊಳ್ಳುತ್ತಿದ್ದಾರೆ.

ಕಾಯಿದೆ ಹೇಳುವುದೇನು?
ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯಿದೆ ಪ್ರಕಾರ ಪಡಿತರ ವಿತರಣೆಯಲ್ಲಿ ಅರ್ಹರನ್ನು ಸೌಲಭ್ಯದಿಂದ ಹೊರಗೆ ಇರಿಸುವಂತಿಲ್ಲ, ಆದರೆ, ಸಲ್ಲಿಕೆಯಾಗಿರುವ ಅರ್ಜಿಗಳನ್ನೇ ಪರಿಶೀಲಿಸಿ ಸರಕಾರ ಅಂತಿಮಗೊಳಿಸಿಲ್ಲ. ಈ ಮೂಲಕ ಅರ್ಹ ಫಲಾನುಭವಿಗಳನ್ನು ಸೌಲಭ್ಯದಿಂದ ಹೊರಗಿಟ್ಟಿದೆ. ಇದು ಕಾಯಿದೆಗೆ ಸಂಪೂರ್ಣ ವಿರೋಧವಾಗಿದ್ದು, ಇದನ್ನು ಪ್ರಶ್ನಿಸಲು ಕೆಲವು ಜನಪರ ಸಂಘಟನೆಗಳು ಮುಂದಾಗಿವೆ.

ಹೇಗಿದೆ ಪಡಿತರ ಪರಿಸ್ಥಿತಿ? 
ರಾಜ್ಯದಲ್ಲಿ ಸದ್ಯ 1.22 ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದು, ಇದರ ಮೂಲಕ 4.19 ಕೋಟಿ ಜನರಿಗೆ ಪ್ರತಿ ತಿಂಗಳು ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಈ ಹಿಂದೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ಘಟಕಕ್ಕೆ 7 ಕೆ.ಜಿ. ಅಕ್ಕಿ, ರಾಗಿಯಂಥ ಧಾನ್ಯ ಹಾಗೂ ಶೇ.80ರ ದರದಲ್ಲಿ ಎಣ್ಣೆ, ಬೇಳೆ ಹಾಗೂ ಉಪ್ಪು ನೀಡಲಾಗು ತ್ತಿತ್ತು. ಆದರೆ ಬಿಜೆಪಿ ಸರಕಾರದಲ್ಲಿ ಅನ್ನಭಾಗ್ಯದಲ್ಲಿ ನೀಡುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಕಡಿತಗೊಳಿಸಲಾಗಿತ್ತು. ಈ ಮಧ್ಯೆ ಕೋವಿಡ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರತಿ ಘಟಕಕ್ಕೆ 5 ಕೆ.ಜಿ ಹೆಚ್ಚುವರಿ ಅಕ್ಕಿ ನೀಡುತ್ತಿದೆ. ಹೀಗಾಗಿ ಸರಕಾರ ನೀಡುತ್ತಿದ್ದ ಪಡಿತರದಲ್ಲಿ ಸಾಕಷ್ಟು ಕತ್ತರಿಯಾಗಿದ್ದರೂ ಅದು ಫಲಾನುಭವಿಗಳಿಗೆ ತಿಳಿಯುತ್ತಿಲ್ಲ.

ಆಹಾರ ಭದ್ರತಾ ಕಾಯಿದೆ ಉಲ್ಲಂಘನೆ
ರಾಜ್ಯದಲ್ಲಿ ಕರೋನಾ ಮತ್ತು ಲಾಕ್‌ಡೌನ್ ಪರಿಣಾಮದಿಂದ ಅನೇಕ ಬಿಪಿಎಲ್ ಕಾರ್ಡ್‌ದಾರರು ಕೂಲಿ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನರಿತೇ ಕೇಂದ್ರ ಸರಕಾರ ಕಡಿಮೆ ದರದಲ್ಲಿ ಧಾನ್ಯ ವಿತರಿಸಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರಿಗೆ ರಾಜ್ಯ ಸರಕಾರ ಬಡವರಿಗೆ ಇನ್ನೂ ಹೆಚ್ಚಿನ ನೆರವು ಕಲ್ಪಿಸಬೇಕಿತ್ತು. ಆದರೆ ಇರುವ ಸೌಲಭ್ಯವನ್ನೂ ಪಡೆಯಲಾಗದಂತೆ ನಿರ್ಧಾರ ಕೈಗೊಂಡು ಆಹಾರ ಭದ್ರತೆ ಕಾಯಿದೆ ಉಲ್ಲಂಘಿಸಿದೆ. ಅಂದರೆ ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯಿದೆ ಪ್ರಕಾರ ಪಡಿತರ ವಿತರಣೆಯಲ್ಲಿ ಅರ್ಹರನ್ನು ಸೌಲಭ್ಯದಿಂದ ಹೊರಗೆ ಇರಿಸುವಂತಿಲ್ಲ, ಆದರೆ ಸರಕಾರ ಸಲ್ಲಿಕೆಯಾಗಿರುವ ಅರ್ಜಿಗಳನ್ನೇ ಪರಿಶೀಲಿಸಿ ಅಂತಿಮಗೊಳಿಸಿಲ್ಲ. ಈ ಮೂಲಕ ಅರ್ಹ ಫಲಾನುಭವಿಗಳನ್ನು ಸೌಲಭ್ಯದಿಂದ ಹೊರಗಿಟ್ಟಿದೆ. ಇದು ಕಾಯಿದೆಗೆ ವಿರೋಧವಾಗಿದ್ದು, ಇದನ್ನು
ಪ್ರಶ್ನಿಸಲು ಕೆಲವು ಜನಪರ ಸಂಘಟನೆಗಳು ಮುಂದಾಗಿವೆ.