Wednesday, 11th December 2024

BY Vijayendra: ಎಫ್‌ಐಆರ್‌ ಹಿನ್ನೆಲೆ; ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಭೇಟಿಯಾದ ಬಿಜೆಪಿ ನಾಯಕರು

BY Vijayendra

ಬೆಂಗಳೂರು: ಸ್ವಾಮೀಜಿಗಳು ಸಹಜವಾಗಿ ಆಕ್ರೋಶದಿಂದ ಮಾತನಾಡಿದ್ದಾರೆ. ಸರ್ಕಾರವು ದೇಶದ್ರೋಹಿಗಳು, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಕೇಸ್‍ಗಳನ್ನು ಹಿಂಪಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಖಂಡಿತ ಸರಿಯಲ್ಲ. ಸ್ವಾಮೀಜಿಗಳ ಪರ ಇದ್ದೇವೆ ಎಂದು ತಿಳಿಸಿ, ಆಶೀರ್ವಾದ ಪಡೆದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ನಗರದ ಮೈಸೂರು ರಸ್ತೆ ಬಳಿ ಇರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರವು ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Karnataka Rain: ಬಿರುಗಾಳಿ ಸಹಿತ ಭಾರಿ ಮಳೆ; ನಾಳೆ ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ!

ಸ್ವಾಮೀಜಿಗಳು ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು. ಆದರೂ ಕೂಡ, ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದ ಅವರು, ರಾಜ್ಯ ಸರ್ಕಾರವು ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸುತ್ತಿದೆ, ಮಠಮಾನ್ಯಗಳ ಜಮೀನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ನೋಟಿಸ್ ಕೊಡುತ್ತಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆದಿದ್ದು, ರೈತರು ಬೀದಿಗೆ ಇಳಿದಿದ್ದಾರೆ ಎಂದು ತಿಳಿಸಿದರು. ಯತ್ನಾಳ್ ವಿಚಾರ, ನಕಲಿ ನೋಟಿಸ್ ಎಂಬ ಹೇಳಿಕೆ ಕುರಿತು ಪದೇಪದೇ ಮಾತನಾಡುವುದಿಲ್ಲ. ನೋಟಿಸ್ ಅಸಲಿಯೇ ನಕಲಿಯೇ ಎಂಬುದು ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಬಿಜೆಪಿ ಸ್ವಾಮೀಜಿಗಳ ಪರ ನಿಲ್ಲಲಿದೆ: ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ಮುಖಂಡರು ದೊಡ್ಡ ಸಭೆ ಮಾಡಿ ನಾವು ಸುಪ್ರೀಂ ಕೋರ್ಟಿನ ಮುಂದೆ ಹೋಗಿ ಭಿಕ್ಷೆ ಬೇಡುವುದಿಲ್ಲ. ನಿಮಗೆ ಸಂಸತ್ ಇದ್ದರೆ ನಮಗೆ ರಸ್ತೆಗಳಿವೆ. ನಾವೂ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ ನಿದರ್ಶನವಿದೆ. ಇದಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಕರಿಯ ಎಂದವರ ಬಗ್ಗೆ ಎಫ್‍ಐಆರ್ ಆಗಿದೆಯೇ? ಎಂದು ಪ್ರಶ್ನಿಸಿದ ಅವರು, ವಕ್ಫ್ ವಿಚಾರದಲ್ಲಿ ರೈತರಿಗೆ ಆಗಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಅವತ್ತು ಒಂದು ಮಾತನ್ನಾಡಿದ್ದರು. ಅದಕ್ಕೆ ಅವರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ. ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ ಮೇಲೆ ಇನ್ನೇನಿದೆ ಎಂದು ಪ್ರಶ್ನಿಸಿದರು.

ನಿಮ್ಮ ಪಕ್ಕದಲ್ಲೇ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ರಕ್ಷಿಸುತ್ತೀರಿ. ಮಾಡಿದ ತಪ್ಪಿಗೆ ಆಕ್ರೋಶ ವ್ಯಕ್ತವಾದಾಗ, ಕ್ಷಮೆ ಕೇಳಿದ ಮೇಲೂ ಕ್ರಮ ಜರುಗಿಸುವುದಾದರೆ ದ್ವಿಮುಖ ನೀತಿ ನಿಮ್ಮದಲ್ಲವೇ? ಓಲೈಕೆ ನೀತಿ ಮೂಲಕ ಹಿಂದೂಗಳು, ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿದ ಅವರು, ಬಿಜೆಪಿ ಸ್ವಾಮೀಜಿಗಳ ಪರ ನಿಲ್ಲಲಿದೆ. ಸರ್ಕಾರದ ಅನ್ಯಾಯಗಳ ವಿಷಯವನ್ನು ಜನರಿಗೆ ಎತ್ತಿ ತೋರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್‌ ಸೀಡ್ಸ್‌ ಕಾರ್ಪೋರೇಷನ್‌ನ 188 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

ಕಾನೂನು ಬೇರೆ ಬೇರೆ ಇದೆಯೇ?” ಅಶ್ವತ್ಥನಾರಾಯಣ್ ಪ್ರಶ್ನೆ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮಾತನಾಡಿ, ಸ್ವಾಮೀಜಿಗಳು ಕ್ಷಮೆ ಕೇಳಿದರೂ ಕೇಸು ದಾಖಲಿಸಿದ್ದಾರೆ. ದೇಶವಿರೋಧಿ, ಗಲಭೆ ಎಬ್ಬಿಸುವ ಹಾಗೂ ಸೌಹಾರ್ದತೆ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ಕೊಟ್ಟ ಇತರರ ಬಗ್ಗೆ ಸರ್ಕಾರ ಯಾಕೆ ಕೇಸು ಹಾಕಿಲ್ಲ? ಅವರ ಮೇಲೂ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಕಾನೂನು ಬೇರೆ ಬೇರೆ ಇದೆಯೇ ಎಂದು ಪ್ರಶ್ನಿಸಿದರು. ಸ್ವಾಮೀಜಿಯವರಿಗೆ 80 ವರ್ಷವಾಗಿದ್ದು, ಅನಾರೋಗ್ಯದಿಂದಿದ್ದಾರೆ. ಬಹಳ ನೊಂದಿದ್ದಾರೆ. ದೇಶದ್ರೋಹಿಗಳಿಗೂ ಇದು ಅನ್ವಯ ಮಾಡಬೇಕಿತ್ತು ಎಂದು ಹೇಳಿದರು.