Saturday, 12th October 2024

ಮನೆಯೊಳಗೆ ಕಳ್ಳರ ಹಿಡಿಯಲು ಅಧಿಕಾರವಿಲ್ಲ !

ಲೋಪಸೇವಾ ಆಯೋಗದ ಕರ್ಮಕಾಂಡ

ಕೆಪಿಎಸ್‌ಸಿ ಕರ್ಮಕಾಂಡ; ಆಯೋಗದ ಕಾರ್ಯದರ್ಶಿ ಬೇಸರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ನಿರಂತರ ಅಕ್ರಮಗಳ ಬಗ್ಗೆ ವಿಶ್ವವಾಣಿ ಪತ್ರಿಕೆ ಸರಣಿ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆ ಯಲ್ಲಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಸತ್ಯವತಿ ಅವರು ನೀಡಿದ ಪೂರ್ಣ ವಿವರ ಇಂತಿದೆ.

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಅಕ್ರಮಗಳು ನಡೆಯುತ್ತಲೇ ಇದ್ದು, ಅಕ್ರಮಗಳಲ್ಲಿ ಆಯೋಗದ ಸಿಬ್ಬಂದಿಯೇ ಸಿಕ್ಕಿ ಬೀಳು ತ್ತಿದ್ದಾರೆ. ಆದ್ದರಿಂದ ಮನೆಯೊಳಗೆ ಕಳ್ಳರಿದ್ದಾರೆ. ಇಲ್ಲಿ ಯಾರನ್ನು ನಂಬುವುದು ಎಂದು ಕೆಪಿಎಸ್‌ಸಿ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಹೇಳಿದ್ದಾರೆ.

ಆಯೋಗದಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷೆ ವಿಚಾರಗಳು ಗೌಪ್ಯವಾಗಿರಬೇಕಾಗುತ್ತದೆ. ಆದರೆ, ಹೊಸ ನಿಯಮದ ಪ್ರಕಾರ
ಇಂಥ ವಿಚಾರಗಳಲ್ಲಿ ಕಾರ್ಯದರ್ಶಿಯೂ ನೋಡುವಂತಿಲ್ಲ. ತಪ್ಪುಗಳಾದರೂ ಕಾರ್ಯದರ್ಶಿ ಹೊಣೆ ಹೊತ್ತುಕೊಳ್ಳಬೇಕಾಗಿದೆ. ಇಂಥ ವಿಚಾರಗಳಿಗೆ ಏನು ಮಾಡುವುದು ಎಂದು ಸತ್ಯವತಿ ಬೇಸರದಿಂದ ಹೇಳಿದ್ದಾರೆ.

ಆಯೋಗದ ವೈಫಲ್ಯದಿಂದ ಅಕ್ರಮಗಳಾಗಿವೆ. ಆದರೆ, ಪ್ರಾಮಾಣಿಕ ಅಭ್ಯರ್ಥಿಗಳ ಗತಿ ಏನು?
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಮೂವರು
ಪ್ರಮುಖ ಆರೋಪಿಗಳನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಿಡುವುದಿಲ್ಲ. ಈ ಘಟನೆಯಿಂದ ಸಂಸ್ಥೆಗೆ, ನಮಗೆ ಮುಜುಗರ ಆಗಿರುವುದು ನಿಜ. ಇದರಿಂದ ಸಾವಿರಾರು ಪ್ರಮಾಣಿಕ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿರುವುದು ನಿಜ. ಆದರೆ, ಇದನ್ನು ಇಲ್ಲಿಗೆ ಬಿಡುವುದಿಲ್ಲ. ವ್ಯವಸ್ಥೆಯನ್ನು ಕಠಿಣಗೊಳಿಸುತ್ತೇನೆ. ಇಂಥ ಅಕ್ರಮಗಳಿಗೆ ಕಡಿವಾಣ ಹಾಕುತ್ತೇನೆ.

ಪದೇಪದೆ ಏಕೆ ಕೆಪಿಎಸ್‌ಸಿ ಅಕ್ರಮ ನಡೆಯುತ್ತದೆ? ಇದಕ್ಕೆೆ ಅಂತ್ಯ ಇಲ್ಲವೇ?
ಕೆಪಿಎಸ್‌ಸಿ ಬಗ್ಗೆ ಕೇಳಿ ಬಂದಿರುವ ಅಕ್ರಮಗಳ ಬಗ್ಗೆ ಆಯೋಗ ಸಾಕಷ್ಟು ಕ್ರಮಕೈಗೊಂಡಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಗಳಿದ್ದರೆ ಸಂಬಂಧಿಸಿದವರಿಗೆ ಸಲ್ಲಿಸಬಹುದು. ಸಂಸ್ಥೆ ಸುಧಾರಣೆಗೆ ಸಾರ್ವಜನಿಕರ ಬೆಂಬಲವೂ ಅಗತ್ಯ. ವ್ಯವಸ್ಥೆ ಹಾಳಾಗಿದೆ. ಭ್ರಷ್ಟವಾಗಿದೆ ಎಂದು ಸುಮ್ಮನೆ ಕೂರಲಾಗುವುದಿಲ್ಲ. ಒಂದು ನಂಬಿಕೆ ಮೇಲೆ ಕೆಲಸ ಮಾಡಬೇಕಾಗುತ್ತದೆ. ಆದರೂ ಮೋಸ ನಡೆದರೆ ಕಷ್ಟ. ತಪ್ಪಿತಸ್ಥರನ್ನು ಬಿಡುವುದಿಲ್ಲ.

ಇಷ್ಟೆೆಲ್ಲಾ ಅಕ್ರಮಗಳಿಗೆ ಕಾರ್ಯದರ್ಶಿಗಳು ಹೇಗೆ ಹೊಣೆಗಾರರು?
ಹೋಟ ಸಮಿತಿ ಶಿಫಾರಸು ಪ್ರಕಾರ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕುರಿತ ಗೌಪ್ಯ ವಿಚಾರಗಳ ಬಗ್ಗೆ ಕಾರ್ಯ ದರ್ಶಿಯಾಗಲೀ,
ಅಧ್ಯಕ್ಷರಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆಯೋಗದಲ್ಲಿ ಗೌಪ್ಯ ವಿಚಾರಗಳ ವಿಭಾಗವೇ ಇದೆ. ಅದರಲ್ಲಿ ಕಾರ್ಯದರ್ಶಿ ಕೂಡ
ಪ್ರವೇಶ ಮಾಡುವಂತಿಲ್ಲ. ನಾನು ಒಂದು ವರ್ಷದಿಂದ ಆ ಕಡೆ ಹೋಗಿಯೇ ಇಲ್ಲ. ಇಲ್ಲಿ ಕಾರ್ಯದರ್ಶಿಗೆ ಅಧಿಕಾರವಿಲ್ಲ ದಂತಾಗಿದೆ. ಏನಾದರೂ ತೊಂದರೆಯಾದರೆ ಕಾರ್ಯದರ್ಶಿ ಜವಾಬ್ದಾರಿ ಎನ್ನುವಂತಾಗಿದೆ. ಆದ್ದರಿಂದ ಇಂಥ ವಿಚಾರಗಳನ್ನು ಏನು ಮಾಡಬೇಕು ಎನ್ನುವುದರ ಬಗ್ಗೆೆ ಚಿಂತಿಸಲಾಗುತ್ತಿದೆ.

ಆಯೋಗದೊಳಗೆ ಇರುವ ಡೀಲರ್‌ಗಳ ತಡೆಗೆ ಏನು ಕ್ರಮ ವಹಿಸಿದ್ದೀರಿ?
ನಾವು ಕೆಲಸ ಮಾಡುವ ಕಡೆ ನಂಬಿಕೆ ಮುಖ್ಯ. ಅಕ್ರಮಗಳು ಆಗುತ್ತವೆ ಎನ್ನುವುದರಿಂದ ಎಲ್ಲವನ್ನೂ ಹಾಗೂ ಎಲ್ಲರನ್ನೂ ನಾವು ಅನುಮಾನದಿಂದ ನೋಡುವುದಕ್ಕೆ ಆಗುವುದಿಲ್ಲ. ನಮ್ಮ ಮನೆಯೊಳಗೆ ಕಳ್ಳರಿದ್ದರೆ ಏನು ಮಾಡುವುದು. ಆದ್ದರಿಂದ ಇಂಥ ವಿಚಾರಗಳನ್ನು ಚಿಂತಿಸಿ ಕ್ರಮಕೈಗೊಳ್ಳಬೇಕಾಗುತ್ತದೆ.

ಹೋಟ ಸಮಿತಿ ಶಿಫಾರಸು ಕಾಟಾಚಾರದ ಜಾರಿ ಎನ್ನುವುದು ನಿಜವೇ?
ಹಾಗೇನಿಲ್ಲ. ಹೋಟ ಸಮಿತಿ ಶಿಫಾರಸುಗಳಲ್ಲಿ ಕೆಲವುಗಳನ್ನು ಸರಕಾರ ಒಪ್ಪಿಕೊಂಡಿದೆ. ಜಾರಿ ಕೂಡ ಮಾಡಲಾಗಿದೆ. ಉಳಿದ ಶಿಫಾರಸುಗಳ ಬಗ್ಗೆ ಮರುಪರಿಶೀಲಿಸುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ತಜ್ಞರನ್ನು ಹೊರ ರಾಜ್ಯಗಳಿಂದ ಕರೆಸಿಕೊಳ್ಳುವುದನ್ನು ಸರಕಾರ ಒಪ್ಪಿಲ್ಲ. ಆದರೆ, ಈ ಬಗ್ಗೆ ಸರಕಾರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಿ ಜಾರಿಗೆ ಯತ್ನಿಸುತ್ತೇವೆ. ಹೊರ ರಾಜ್ಯ ಗಳಿಂದ
ತಜ್ಞರನ್ನು ಕರೆಸಿ ಪ್ರಶ್ನೆ ಪತ್ರಿಕೆ ಮತ್ತು ಮೌಲ್ಯ ಮಾಪನಗಳು ನಡೆಯುವಂತೆ ಮಾಡುತ್ತೇವೆ.

ಆಯೋಗದ ಸಿಬ್ಬಂದಿ ವರ್ಗಾವಣೆಯಿಂದ ಅಕ್ರಮ ತಡೆ ಸಾಧ್ಯವೇ?
ಆಯೋಗದ ಸಿಬ್ಬಂದಿಯನ್ನು ಬೇರೆ ಕಡೆಗೆ ನಿಯೋಜಿಸುವ ಸಂಬಂಧ ವೃಂದ ಮತ್ತು ನೇಮಕ ನಿಯುಗಳಿಗೆ ತಿದ್ದುಪಡಿ ತರಲು
ಕ್ರಮಕೈಗೊಳ್ಳಲಾಗುತ್ತಿದೆ. ಈ ಮೂಲಕ ಸಾಕಷ್ಟು ಸುಧಾರಣೆಗೆ ಕ್ರಮಕೈಗೊಳ್ಳುತ್ತಿದ್ದೇವೆ. ಹಾಗೆಯೇ ಬೇರೆ ಇಲಾಖೆಗಳಿಂದ ಗುಪ್ತಚರ ಹಾಗೂ ಭದ್ರತೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಆಯೋಗಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಕ್ರಮ ಕೈಗೊಳ್ಳ ಲಾಗುತ್ತಿದೆ.