Saturday, 14th December 2024

ರಾಜಧಾನಿಯಲ್ಲಿ ಕೀಟಗಳಿಗೊಂದು ಕ್ಯಾಂಟೀನ್‌ !

ತುರಹಳ್ಳಿ ಅರಣ್ಯದಲ್ಲಿ ನಿರ್ಮಾಣಗೊಂಡಿರುವ ಹೋಟೆಲ್

ಜೀವವೈವಿಧ್ಯತೆ, ಪರಿಸರದ ಉಳಿವಿಗೆ ಸಹಕಾರಿ

ವಿಶೇಷ ವರದಿ: ಅಪರ್ಣಾ ಎ.ಎಸ್. ಬೆಂಗಳೂರು

ರಾಜಧಾನಿ ಬೆಂಗಳೂರು ಎಂದರೆ ಕೇವಲ ಟ್ರಾಫಿಕ್, ಧೂಳು, ವಾಹನ ಎಂದು ಮೂಗು ಮುರಿಯುವ ಮಂದಿ, ಇನ್ನು ಮುಂದೆ ಕೀಟಗಳ ಹೊಟೇಲ್‌ಗಳಿಗೆ
ಭೇಟಿ ನೀಡಿ ಅಲ್ಲಿ ಕೀಟಗಳ ಜೀವನ ಪದ್ಧತಿಯನ್ನು ನೋಡಬಹುದಾಗಿದೆ.

ಹೌದು, ಜನರು ತಮ್ಮ ಸ್ನೇಹಿತರು, ಪರಿಚಯಸ್ಥರು ಮತ್ತು ಸಂಬಂಽಕರನ್ನು ಭೇಟಿಯಾಗುವ ಸಂದರ್ಭದಲ್ಲಿ ಮೊದಲಾಡುವ ಮಾತು ಇಂತಹ ಹೊಟೇಲ್‌ನಲ್ಲಿ
ಭೇಟಿಯಾಗುವ ಎಂದು. ಆದರೆ ಈ ವಾಕ್ಯ ಈಗ ಕೇವಲ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ, ಕೀಟಗಳಿಗೂ ಅನ್ವಯವಾಗಲಿದೆ.

ಹೌದು ಮುಖ್ಯಮಂತ್ರಿಯವರ ವಿಷನ್ ೨೦೨೨ ಯೋಜನೆಯಡಿಯಲ್ಲಿ ನಡೆಯುತ್ತಿರುವ ಟ್ರೀ ಪಾರ್ಕ್‌ಗಳಲ್ಲಿ ಇಂತಹ ಕೀಟಗಳ ಹೊಟೇಲ್ ಅನ್ನು ಪ್ರಾರಂಭಿಸ ಲಾಗಿದ್ದು, ಇದು ಜೀವವೈವಿಧ್ಯತೆಯ ಉಳಿವಿಗೆ ಹಾಗೂ ಪರಿಸರದ ಉಳಿವಿಗೂ ಸಹಕಾರಿಯಾಗಲಿದೆ. ನಗರದ ತುರಹಳ್ಳಿ ಹಾಗೂ ಕಾಡುಗೋಡಿ ಉದ್ಯಾನವನ ಗಳಲ್ಲಿ ಕೀಟಗಳಿಗೆ, ಪಕ್ಷಿಗಳಿಗಾಗಿ ಅರಣ್ಯ ಇಲಾಖೆ ವಿಶೇಷವಾದ ಹೊಟೇಲ್‌ಗಳನ್ನು ನಿರ್ಮಿಸಿದ್ದು, ಇಲ್ಲಿ ಅನೇಕ ವಿಧದ ಕೀಟ ಪ್ರಬೇಧಗಳೊಂದಿಗೆ ವಿಧ ವಿಧವಾದ ಪಕ್ಷಿ ಸಂಕುಲಗಳನ್ನೂ ಕಾಣಬಹುದಾಗಿದೆ. ಈ ಕೀಟಗಳ ಹೊಟೇಲ್ ಈಗ ಕೀಟ ಶಾಸ್ತ್ರಜ್ಞರು, ಪ್ರಬೇಧ ಸಂರಕ್ಷಕರು, ಪಕ್ಷಿ ವಿಜ್ಞಾನಿಗಳು ಮತ್ತು ಪ್ರಾಣಿಶಾಸ್ತ್ರಜ್ಞ ರಿಗೂ ಅತ್ಯಂತ ಪ್ರಿಯವಾದ ಸ್ಥಳವಾಗಿದ್ದು, ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ.

ವಿವಿಧ ಕೀಟಗಳು: ಈ ಕೀಟಗಳ ಹೊಟೇಲ್ ಅನ್ನು ಕೀಟಗಳ ರಕ್ಷಣೆಗಾಗಿ ತಯಾರು ಮಾಡಲಾಗಿದ್ದು, ಜೇನುನೊಣ, ಪತಂಗ, ಕಣಜಗಳು ಹಾಗೂ ಇತರೆ
ಕೀಟಗಳ ಸುರಕ್ಷತೆಗಾಗಿ ನಿರ್ಮಿಸಲಾಗಿದೆ. ಈ ಕೀಟಗಳು ಜೀವ ವೈವಿಧ್ಯತೆಗೆ ಸಹಕಾರಿಯಾಗಿರುವುದರಿಂದ ಜತೆಗೆ ಪ್ರಸ್ತುತ ದಿನಗಳಲ್ಲಿ ಇವುಗಳು ಅಳಿವಿನಂಚಿಗೆ ತಳ್ಳಲ್ಪಡುತ್ತಿರುವುದರಿಂದ ಈ ವರ್ಗಗಳ ರಕ್ಷಣೆಗೂ ಈ ಕೀಟಗಳ ಹೊಟೇಲ್ ಸಹಕಾರಿ ಯಾಗಲಿದೆ. ಈ ಹೊಟೇಲ್ ಅನ್ನು ತುರಹಳ್ಳಿ ಹಾಗೂ
ಕಾಡುಗೋಡಿ ಅರಣ್ಯ ವಿಭಾಗದಲ್ಲಿ ಪ್ರಾರಂಭಿಸಲಾಗಿದ್ದು, ವಿಶಾಲವಾದ ಪ್ರದೇಶ, ಐಷಾರಾಮಿ ಸೌಲಭ್ಯಗಳೊಂದಿಗೆ, ನೈಸರ್ಗಿಕವಾದ ನೀರು, ಗಾಳಿ
ಬೆಳಕು ನಿಯಂತ್ರಿತವಾದ ಸ್ಥಳವಾಗಿದೆ.

ಇದು ಪಕ್ಷಿ, ಕೀಟಗಳನ್ನು ಸಂತಾನೋತ್ಪತ್ತಿಗಾಗಿ ಹುರಿದುಂಬಿಸಲು ಸಹಾಯಕವಾಗಿದ್ದು, ಅವುಗಳ ಸಂರಕ್ಷಣೆಗೂ ಸಹಾಯಕವಾದ ತಾಣವಾಗಿದೆ. ಈ
ಹೊಟೇಲ್‌ಗಳು ವಿವಿಧ ಕೀಟಗಳಿಗೆ ಸೂಕ್ತವಾದ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಸಂಪೂರ್ಣ ಜೀವವೈವಿಧ್ಯಗಳ ಸುರಕ್ಷತೆಯ ತಾಣವಾಗಿದೆ. ಜತೆಗೆ ಇದು
ನಾಗರಿಕರನ್ನು, ವಿಶೇಷವಾಗಿ ಮಕ್ಕಳು ನೋಡ ಬಯಸುವ ಹಾಗೂ ಮಾಹಿತಿ ಪಡೆದುಕೊಳ್ಳಲು ಸೂಕ್ತವಾಗಿದೆ. ಇನ್ನು ಕೀಟಗಳಿಗೆ ಹೆಚ್ಚು ನಿಶ್ಶಬ್ದದ ಪರಿಸರ
ಅತ್ಯಂತ ಪ್ರಿಯವಾದುದರಿಂದ ಈ ಹೊಟೇಲ್‌ಗೆ ಭೇಟಿ ನೀಡುತ್ತಿದ್ದಂತೆಯೇ ಮೊದಲಿಗೆ ಕಾಣುವಂತಹದು ತೊಂದರೆ ಕೊಡಬೇಡಿ ಎಂಬ ಬೋರ್ಡ್
ಕಾಣಸಿಗುತ್ತದೆ.

ಬನ್ನೇರುಘಟ್ಟದಲ್ಲೇ ಮೊದಲ ನಿರ್ಮಾಣ: ವಿಶೇಷ ತಾಣಗಳ ನಿರ್ಮಾಣ ಈ ಮೊದಲು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಮಾಡಲಾಗಿದ್ದು, ಇದು
ಚಿಟ್ಟೆಗಳಿಗಾಗಿ ನಿರ್ಮಿಸಲಾದ ಚಿಟ್ಟೆ ಪಾರ್ಕ್ ಆಗಿದೆ. ಇಲ್ಲಿ ಪತಂಗ,ಚಿಟ್ಟೆ ಸೇರಿದಂತೆ ವಿವಿಧ ವರ್ಗದ ಕೀಟ ಪ್ರಬೇಧಗಳ ಆವಾಸ ತಾಣವಾಗಿದ್ದು, ಅತ್ಯಂತ
ಚಿಕ್ಕದಾಗಿ ಚೊಕ್ಕವಾಗಿ ನಿರ್ಮಿಸಲಾಗಿದೆ. ಇದರ ನಂತರದ ನಿರ್ಮಾಣವೇ ಈ ತುರಹಳ್ಳಿಯ ಕೀಟಗಳ ಹೊಟೇಲ್ ಆಗಿದ್ದು, ತುರಹಳ್ಳಿ ಟ್ರೀ ಪಾರ್ಕ್‌ನಲ್ಲಿ ಕೆಲವು ಮಾರ್ಪಾಟುಗಳೊಂದಿಗೆ ನಿರ್ಮಾಣ ಮಾಡಲಾಗಿದ್ದು, ಕಾಡುಗೋಡಿಯಲ್ಲಿಯೂ ಇದನ್ನು ಇನ್ನಷ್ಟು ಸುಧಾರಿಸಿ ನಿರ್ಮಿಸಲಾಗಿದೆ. ಸದ್ಯದ ಮಟ್ಟಿಗೆ ಇದು ನಗರವಾಸಿಗಳಿಗೆ ಅತ್ಯಂತ ಆಕರ್ಷಣೆಯ ವಿಚಾರವಾಗಿದೆ. ಇನ್ನು ಮಾಚನಹಳ್ಳಿಯಲ್ಲೂ ಈ ಹೊಟೇಲ್ ನಿರ್ಮಾಣದ ಯೋಜನೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಕುರಿತಾದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ನಿರ್ಮಾಣದ ವಿಧಾನ
ಕೀಟದ ಹೋಟೆಲ್ ಅನ್ನು ಬಿದಿರು, ಮರ, ಇಟ್ಟಿಗೆಗಳು, ಮಂಗಳೂರು ಅಂಚುಗಳು ಮತ್ತು ಇತರ ಉಳಿದ ವಸ್ತುಗಳೊಂದಿಗೆ ರಚಿಸಲಾಗಿದ್ದು, ಇತರೆ ಹೊಟೇಲ್ ನಂತೆಯೇ ರಚಿಸಲಾಗಿದೆ. ಇಲ್ಲಿ ವಿಶ್ರಾಂತಿ ಜತೆಗೆ ಆನಂದವಾಗಿ ಸಮಯ ಕಳೆಯಲು ಬಯಸುವವರಿಗೆ ಉತ್ತಮ ಅವಕಾಶವಾಗಿದ್ದು, ಕೀಟಗಳಿಗೆ ಸೂಕ್ತವಾದ
ಸ್ಥಳವಾಗಿದೆ. ಜೇನುನೊಣಗಳು, ಕಣಜಗಳು, ಪತಂಗಗಳು ಮತ್ತು ಇತರ ಕೀಟಗಳನ್ನು ಇಲ್ಲಿ ಕಾಣಬಹುದಾಗಿದೆ. ತುರಹಳ್ಳಿಯ ಹೊಟೇಲ್ ಸುಮಾರು
ಮೂರು ಅಡಿ ಎತ್ತರ ಮತ್ತು ಐದು ಅಡಿ ಉದ್ದವಿದ್ದರೆ, ಕಾಡುಗೋಡಿಯಲ್ಲಿ ಇದು ಏಳೂವರೆ ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲವಿದೆ. ಅವಾಂತರವನ್ನು ಕಡಿಮೆ
ಮಾಡಲು ಅವು ಉದ್ಯಾನವನಗಳ ಆಂತರಿಕ ಭಾಗದಲ್ಲಿವೆ. ಹುಲ್ಲಿನಲ್ಲಿ ಸಾಕಷ್ಟು ತೇವಾಂಶವಿದೆ ಎಂದು ಖಚಿತಪಡಿಸಿಕೊಳ್ಳಲು, ಸಿಂಪರಣೆಯನ್ನು ಅಳವಡಿಸ
ಲಾಗಿದೆ. ಅರಣ್ಯ ಇಲಾಖೆ ಸದ್ಯದ ಮಟ್ಟಿಗೆ ಈ ತುರಹಳ್ಳಿ ಕಾಡುಗೋಡಿ ಕೀಟಗಳ ಹೊಟೇಲ್ ಅನ್ನು ರೆಸಾರ್ಟ್‌ಗಳಲ್ಲಿಯೂ ಪುನರಾವರ್ತಿಸಲು ಯೋಜನೆ
ನಡೆಸುತ್ತಿದೆ. ಈ ಹೊಟೇಲ್‌ಗಳು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗುವುದಲ್ಲದೇ, ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕಾರಿಯಾಗಲಿದೆ.

***

ಕೀಟಗಳ ಹೊಟೇಲ್ ಮೂಲತಃ ವಿದೇಶಿ ಯೋಜನೆಯಾಗಿದ್ದು, ತರಹೇವಾರಿ ಅಳಿವಿನಂಚಿನ ಕೀಟಗಳ ರಕ್ಷಣೆಗಾಗಿ ಪ್ರಾರಂಭಿಸಿದ್ದೇವೆ. ಈ ಹೊಟೇಲ್ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಇದರ ಜತೆಗೆ ಮಾಹಿತಿ ನೀಡಲೂ ಸಹಾಯಕವಾಗಲಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಯೋಜನೆಯನ್ನು ವಿಸ್ತರಿಸುವ ಪ್ಲ್ಯಾನ್ ಇದೆ. ಇದು ಪ್ರವಾಸಿ ತಾಣವಾಗಿ, ಜನರನ್ನು ಆಕರ್ಷಿಸುತ್ತಿದೆ.ಜನರಿಗೆ ಇಲ್ಲಿ ನೆಮ್ಮದಿ, ಸಂತಸ ನೀಡಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳೂ ಇವೆ.
– ಎಸ್.ಎಸ್. ರವಿಶಂಕರ್ ಬೆಂಗಳೂರು ನಗರ 
ಉಪಅರಣ್ಯ ಸಂರಕ್ಷಣಾಧಿಕಾರಿ