Friday, 13th December 2024

ಸಿಡಿ ಕೇಸ್‌: ಸಿಐಡಿಗೆ ವಹಿಸಲು ಚಿಂತನೆ

ಮಹಾನಾಯಕರು, ಸ್ವಪಕ್ಷೀಯರಿಗೆ ಪಾಠ ಕಲಿಸಲು ಸರಕಾರದ ತಂತ್ರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ದೇಶದ ಗಮನ ಸೆಳೆದಿರುವ ರಮೇಶ್ ಜಾರಕಿಹೊಳಿಯ ಸಿಡಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ.

ಮಳೆ ನಿಂತರೂ, ಹನಿ ನಿಲ್ಲಲಿಲ್ಲ ಎನ್ನುವಂತೆ ರಮೇಶ್ ಜಾರಕೀಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರವೂ ಕೇಳಿ ಬರುತ್ತಿರುವ ವಿಭಿನ್ನ ಹೇಳಿಕೆಗಳು ಪ್ರಕರಣವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ.

ಅದರಲ್ಲೂ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಕೇಸು ವಾಪಸ್ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಂತೆ ಇದರಲ್ಲಿ ಕೋಟಿ ಕೋಟಿ ರುಪಾಯಿಗಳ ಡೀಲ್ ನಡೆದಿರುವ ಬಗ್ಗೆೆ ಹೇಳಿಕೆಗಳು ಶುರುವಾಗಿವೆ. ಇದನ್ನು ಹೀಗೆ ಬಿಟ್ಟರೆ ಸರಕಾರದ ಹೆಸರಿಗೆ ಇನ್ನಷ್ಟು ಮಸಿ ಅಂಟಿಕೊಳ್ಳಲಿದೆ ಎಂದು ಪಕ್ಷದ ನಾಯಕರು ಗಾಬರಿಯಾಗಿದ್ದಾರೆ. ಆಗಿರುವ ಡ್ಯಾಮೇಜ್‌ನ್ನು ಕಂಟ್ರೋಲ್ ಮಾಡಿ ಸೂಕ್ತ ಕ್ರಮ ಕೈಗೊಂಡಂತೆ ತೋರಿಸಲು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದರೆ ಹೇಗೆ ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ
ಗೃಹ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಈ ಬಗ್ಗೆೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಷಡ್ಯಂತ್ರದಲ್ಲಿ ಸಚಿವರೂ ಇದ್ದಾರೆಯೇ?: ರಮೇಶ್ ಜಾರಕೀಹೊಳಿ ವಿರುದ್ಧದ ಈ ಪ್ರಕರಣದಲ್ಲಿ ಬಿಜೆಪಿಯ ಕೆಲವು ಸಚಿವರೇ
ಸಾಥ್ ನೀಡಿರಬಹುದು ಎನ್ನುವ ಅನುಮಾನದ ಚರ್ಚೆಗಳು ವಿಧಾನಸಭೆ ಮೊಗಸಾಲೆಯಲ್ಲಿ ನಡೆದಿವೆ. ಇದರಲ್ಲಿ ಹಿರಿಯ ಸಚಿವರು, ಕಿರಿಯರ ಸಚಿವರು, ಕೆಲವು ಶಾಸಕರೂ ಇರಬಹುದು ಎಂದು ಶಂಕಿಸಿ ಪಕ್ಷದ ಮುಖಂಡರ ನಡುವೆ ಗುಸುಗುಸು ನಡೆಯುತ್ತಿದೆ.

ಇದೆಲ್ಲದಕ್ಕೂ ಉತ್ತರವಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿದರೆ ಪಕ್ಷದೊಳಗಿನ ಷಡ್ಯಂತ್ರಿಗಳಿಗೂ ಪಾಠ ಕಲಿಸಿದಂತಾಗುತ್ತದೆ.
ಹಾಗೆಯೇ ಬೇರೆ ಪಕ್ಷಗಳ ಮಹಾನಾಯಕರನ್ನೂ ರಾಜಕೀಯವಾಗಿ ಹಣಿದಂತಾಗುತ್ತದೆ ಎಂದು ಸರಕಾರದ ಮುಖ್ಯಸ್ಥರು ಲೆಕ್ಕಾಚಾರ ಹಾಕಿದ್ದಾರೆ. ಈ ಲೆಕ್ಕಾಚಾರಕ್ಕೆ ಯಡಿಯೂರಪ್ಪ ಅವರು ಸಮ್ಮತಿ ನೀಡಿದರೆ ಇನೆರಡು ದಿನಗಳಲ್ಲಿ ಸಿಐಡಿ ತನಿಖೆ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಲ್ಲಹಳ್ಳಿ ದೂರು ವಾಪಸ್; ಅನುಮಾನಕ್ಕೆ ಕಾರಣ
ಅನ್ಯಾಯಕ್ಕೆ ಒಳಗಾದ ಯುವತಿ ಇನ್ನೂ ಪೊಲೀಸರಿಗೆ ದೂರು ನೀಡದಿರುವುದು ಪ್ರಕರಣದ ದುರ್ಬಲಕ್ಕೆ ಕಾರಣವಾಗಿದೆ. ಆದರೆ ಪ್ರಕರಣದಲ್ಲಿ ಯುವತಿಯೊಬ್ಬರಿಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದಿದ್ದು,
ಇದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಲ್ಲಹಳ್ಳಿ ಅವರು ದೂರು ಕೊಟ್ಟಿದ್ದೇಕೆ, ವಾಪಸ್ ಪಡೆದಿರುವುದು ಏಕೆ ಎನ್ನುವ ಪ್ರಶ್ನೆಗಳು ಎದ್ದಿವೆ.