Monday, 9th December 2024

Karnataka High court: ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯ ಮದರಸ ತೆರವಿಗೆ ಹೈಕೋರ್ಟ್‌ ಮೊರೆ ಹೋದ ಕೇಂದ್ರ

srirangapatna jama masjid

ಬೆಂಗಳೂರು: ‘ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯಲ್ಲಿರುವ (Srirangapatna Jama Masjid) ಮದರಸಾ (Madrasa) ತೆರವಿಗೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೇಂದ್ರ ಸರ್ಕಾರ, ಹೈಕೋರ್ಟ್‌ಗೆ (Karnataka high court) ಮನವಿ ಮಾಡಿದೆ. ಈ ಪ್ರಕರಣದಲ್ಲಿ ವಕ್ಫ್‌ ಬೋರ್ಡ್‌ (Waqf board) ಕೂಡ ಮಧ್ಯ ಪ್ರವೇಶಿಸಿದ್ದು, ಅದು ತನ್ನ ಆಸ್ತಿ, ಹೀಗಾಗಿ ಮದ್ರಸ ನಡೆಸಬಹುದು ಎಂದು ಪ್ರತಿಪಾದಿಸಿದೆ.

‘ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಚಟುವಟಿಕೆ ನಡೆಯುತ್ತಿದೆ’ ಎಂದು ಆರೋಪಿಸಿ ಕನಕಪುರ ತಾಲ್ಲೂಕು ಕಬ್ಬಾಳು ಗ್ರಾಮದ ಅಭಿಷೇಕ್ ಗೌಡ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ‘ಜುಮ್ಮಾ ಮಸೀದಿಯನ್ನು 1951ರಲ್ಲೇ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ. ಆದರೆ, ಅಲ್ಲಿ ಕಾನೂನುಬಾಹಿರ ಮದರಸಾ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಗಳನ್ನು ತಡೆಯಲು ಹೋ ದರೆ
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಸೀದಿಯಲ್ಲಿನ ಮದರಸಾ ತೆರವು ಮಾಡಲು ಜಿಲ್ಲಾಧಿಕಾರಿಗೆ ಅಗತ್ಯ ನಿರ್ದೇಶನ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ರಾಜ್ಯ ಸರ್ಕಾರ ಮತ್ತು ವಕ್ಫ್ ಬೋರ್ಡ್‌ ಪರ ಹಾಜರಿದ್ದ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಮಸೀದಿಯನ್ನು ವಕ್ಫ್ ಬೋರ್ಡ್‌ ಆಸ್ತಿ ಎಂದು1963ರಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ. ವಕ್ಫ್ ಬೋರ್ಡ್‌ ಆಸ್ತಿಯಲ್ಲಿ ಮದರಸಾ ಚಟುವಟಿಕೆಗೆ ಅವಕಾಶವಿದೆ’ ಎಂದು ಪ್ರತಿಪಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿತು.