Wednesday, 11th December 2024

PSI Death Case: ಪಿಎಸ್​ಐ ಪರಶುರಾಮ್‌ ಸಾವು ಹೇಗಾಯ್ತು? ರಾಜ್ಯ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

parashuram psi death

ಬೆಂಗಳೂರು: ಯಾದಗಿರಿ ಪಿಎಸ್​ಐ ಪರಶುರಾಮ್‌ ಅವರು ಅನುಮಾನಾಸ್ಪದವಾಗಿ ಸಾವಿಗೀಡಾದ (PSI Death Case) ಪ್ರಕರಣದ ಕುರಿತು ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ (Home ministry) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಪಿಎಸ್‌ಐ ಪರಶುರಾಮ್‌ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಗೃಹ ಸಚಿವಾಲಯಕ್ಕೆ‌ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದರು. ಅದರ ಹಿಂದೆಯೇ, ಇದೀಗ ವರದಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಯಾದಗಿರಿ ಪಿಎಸ್​ಐ ಪರಶುರಾಮ ಅನುಮಾನಾಸ್ಪದ ಸಾವು ನಿಷ್ಪಕ್ಷಪಾತ ತನಿಖೆ‌ ಆಗುತ್ತಿಲ್ಲ ಎಂದು ಸಚಿವೆ ಶೋಭಾ ಇತ್ತೀಚೆಗೆ ಆರೋಪ ಮಾಡಿದ್ದರು. ಜೊತೆಗೆ ಪತ್ರ ಕೂಡ ಬರೆದಿದ್ದರು. ಸದ್ಯ ಸಚಿವೆ ಶೋಭಾ ಕರಂದ್ಲಾಜೆ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ಮಾಹಿತಿ ನೀಡುವಂತೆ ಸೂಚಿಸಿದೆ.

ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ತನಿಖೆಯ ಹೊಣೆಯನ್ನ ಹೊತ್ತಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿದ್ದಾರೆ. ತನಿಖೆ ಜವಾಬ್ದಾರಿ ತೆಗೆದುಕೊಂಡ ಆರು ದಿನಗಳ ನಂತರ ಸಿಐಡಿ ಎಸ್​ಪಿ ಪರಶುರಾಮ್‌ ಮನೆಗೆ ಭೇಟಿ ಕೊಟ್ಟಿದ್ದರು. ಪರಶುರಾಮ ಕುಟುಂಬಸ್ಥರನ್ನ ಕರೆಸಿಕೊಂಡಿರುವ ಅಧಿಕಾರಿಗಳು ಪರಶುರಾಮ ಅವರ ಮೊಬೈಲ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕುಟುಂಬಸ್ಥರ ಸಮ್ಮುಖದಲ್ಲಿ ಸ್ಥಳ ಮಹಜರು ಕೂಡ ನಡೆಸಿದ್ದರು.

ಯಾದಗಿರಿ ನಗರ ಠಾಣೆಯಿಂದ ಸೈಬರ್ ಠಾಣೆಗೆ ವರ್ಗಾವಣೆ ಆಗಿದ್ದ ಪಿಎಸ್ಐ ಪರಶುರಾಮ ಮೃತಪಟ್ಟ ದಿನವೇ, ಇದರ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರ ಇರುವ ಕುರಿತು ಪಿಎಸ್‌ಐ ಬರೆದಿಟ್ಟಿದ್ದ ಪತ್ರ ವೈರಲ್‌ ಆಗಿತ್ತು. ಸಾವು ಸಂಭವಿಸಿದ ಮಾರನೇ ದಿನವೇ ಕೇಸನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆಯ ಜವಾಬ್ದಾರಿ ವಹಿಸಿಕೊಂಡ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತಂಡ ಯಾದಗಿರಿಗೆ ಭೇಟಿ ಕೊಟ್ಟು ಡಿವೈಎಸ್ಪಿ ಕಚೇರಿಯಲ್ಲಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು.

ಪಿಎಸ್​ಐ ಪರಶುರಾಮ್‌ ಸಾವಿನ ಸಂದರ್ಭದಲ್ಲಿ ಪತ್ನಿ ಶ್ವೇತಾ ತುಂಬು ಬಸುರಿಯಾಗಿದ್ದರು. ಇದೀಗ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪತಿಯ ಸಾವಿನ ನಡುವೆ ಮಗುವಿನ ಜನನದ ಖುಷಿ- ದುಃಖಗಳ ಸಮ್ಮಿಶ್ರಣದಲ್ಲಿ ಕುಟುಂಬವಿದೆ.

ಮೃತ ಪರಶುರಾಮ್​ ಸಾವು ಹತ್ತಾರು ಅನುಮಾನಗಳಿಗೆ ಕಾರಣವಾಗಿತ್ತು. ಸಾವಿಗೂ ಮುನ್ನ 2 ದಿನಗಳ ಹಿಂದೆ ವರ್ಗಾವಣೆ ಆಗಿದ್ದ ಪರಶುರಾಮ ತಮ್ಮ ನಿವಾಸದಲ್ಲಿ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದರಲ್ಲಿ ಸ್ಥಳೀಯ ಶಾಸಕ ಚೆನ್ನಾರೆಡ್ಡಿಯ ಹೆಸರು ಕೇಳಿಬಂದಿತ್ತು. ಯಾದಗಿರಿ ಕಾಂಗ್ರೆಸ್​ ಶಾಸಕರೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪವನ್ನು ಮಾಡಿದ್ದರು.

ಯಾದಗಿರಿ ನಗರದಲ್ಲಿ ಪತ್ನಿ ಶ್ವೇತ ನೀಡಿದ ದೂರಿನನ್ವಯ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು. ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಾಗಿತ್ತು. ಇದರ ಜೊತೆಗೆ ಜಾತಿ ನಿಂದನೆಯ ಕೇಸ್ ಕೂಡ ದಾಖಲಾಗಿತ್ತು. ಯಾದಗಿರಿಯ ಎಸ್​ಪಿ ಸಂಗೀತಾಗೆ ಪರಶುರಾಮ ಪತ್ನಿ ಶ್ವೇತಾ ದೂರು ನೀಡಿ, ಪರಶುರಾಮ್‌ಗೆ ಪೋಸ್ಟಿಂಗ್​ಗಾಗಿ ಶಾಸಕರು ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಸುದ್ದಿ ಓದಿ: ಸಿದ್ದರಾಮಯ್ಯ ಮನೆಗೆ ಮುತ್ತಿಗೆ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ವಶ