ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಶ್ವವಾಣಿ ದೀಪಾವಳಿ ವಿಶೇಷಾಂಕವನ್ನು (Vishwavani Deepavali visheshanka) ಮಂಗಳವಾರ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ʼʼವಿಶ್ವವಾಣಿ ದೀಪಾವಳಿ ವಿಶೇಷಾಂಕವನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ. ವಿಶ್ವೇಶ್ವರ ಭಟ್ಟರು ಈ ವೀಶೇಷಾಂಕಕ್ಕಾಗಿ ಉತ್ತಮ ಲೇಖನಗಳನ್ನೇ ಬರೆಸಿರುತ್ತಾರೆ. ಜನರಿಗೆ ಉಪಯುಕ್ತವಾದ ಲೇಖನಗಳೇ ಈ ವಿಶೇಷಾಂಕದಲ್ಲಿರಲಿದೆʼʼ ಎಂದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಈ ಸಂದರ್ಭದಲ್ಲಿ ಮಾತನಾಡಿ “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಎಂಬ ಬಸವಣ್ಣನವರ ವಚನದಂತೆ ವಿಶ್ವೇಶ್ವರ ಭಟ್ಟರು ಪ್ರತಿ ಮನೆಯಲ್ಲಿ ಜ್ಞಾನದ ಜ್ಯೋತಿ ಬೆಳಗಿಸುವ ಕೆಲಸ ಮಾಡುತ್ತಿದ್ದಾರೆʼ ಎಂದು ಶ್ಲಾಘಿಸಿ, ವಿಶ್ವವಾಣಿಯ ಪ್ರಯತ್ನವೇ ವಿಶ್ವವನ್ನು ಜ್ಞಾನದ ಕಡೆ ತೆಗೆದುಕೊಂಡು ಹೋಗುವುದಾಗಿದೆ” ಎಂದು ಹೇಳಿದರು.
ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ʼʼವಿಶೇಷಾಂಕಗಳ ಮುಖಪುಟಕ್ಕೆ ಸಾಮಾನ್ಯವಾಗಿ ಸಿನಿಮಾ ತಾರೆಯರ, ಸೆಲೆಬ್ರಿಟಿಗಳ ಫೋಟೊಗಳನ್ನು ಬಳಸುತ್ತಾರೆ. ಆದರೆ ನಾವು ಈ ಸಂಪ್ರದಾಯ ಮುರಿದು ಸ್ವಾಮೀಜಿಗಳ ಫೋಟೊಗಳನ್ನು ಬಳಸುತ್ತಿದ್ದೇವೆʼʼ ಎಂದರು.
ವಿಶ್ವವಾಣಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿದಾನಂದ ಕಡಲಾಸ್ಕರ ಉಪಸ್ಥಿತರಿದ್ದರು.
ಈ ಸಂಚಿಕೆಯಲ್ಲಿ ಏನೇನಿವೆ?:
ಅನ್ನ, ಅಕ್ಷರ, ಆರ್ಥಿಕ ಸದೃಢತೆಯ ಹರಿಕಾರ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ವಿಶೇಷ ಲೇಖನವನ್ನು ಈ ವಿಶೇಷ ಸಂಚಿಕೆ ಹೊಂದಿದೆ. ಡಾ ಸಿ.ಜಿ. ರಾಘವೇಂದ್ರ ವೈಲಾಯ, ಬಿ. ಸತ್ಯನಾರಾಯಣ ಅರಸ, ರಾ.ನಂ. ಚಂದ್ರಶೇಖರ, ಗೌರಿ ಚಂದ್ರಕೇಸರಿ ಮತ್ತಿತರರ ಉಪಯುಕ್ತ ಬರಹಗಳಿವೆ. ಸಂಧ್ಯಾ ಹೆಗಡೆ, ಗೀತಾ ಕುಂದಾಪುರ, ಟಿ.ಎಸ್. ಶ್ರವಣಕುಮಾರಿ, ಡಾ.ಆರ್.ಜಿ. ಹೆಗಡೆ, ಬಿ.ಕೆ. ಮೀನಾಕ್ಷಿ, ದಿನೇಶ ಉಪ್ಪೂರ, ಮಡೋಡಿ ಅವರ ಮನೋಜ್ಞ ಸಣ್ಣ ಕತೆಗಳಿವೆ.
ಬೆಂ. ಶ್ರೀ. ರವೀಂದ್ರ, ಚಂದ್ರಶೇಖರ ಹೆಗಡೆ, ಡಾ. ಗೋವಿಂದ ಹೆಗಡೆಯವರ ಮನಮುಟ್ಟುವ ಕವನಗಳಿವೆ. ಮಹಾಂತೇಶ ಮಾಗನೂರ ಮತ್ತು ಡಾ. ವಿಶ್ವನಾಥ ನೇರಳಕಟ್ಟೆಯವರ ಚುರುಕಾದ ಚುಟುಕುಗಳು ಈ ಸಂಚಿಕೆಯ ಮೆರುಗು ಹೆಚ್ಚಿಸಿವೆ. ನಾನೇಕೆ ರೀಲ್ಸ್ ಮಾಡುತ್ತೇನೆ? ಎಂಬ ವಿಷಯ ಕುರಿತ ಓದುಗರ ಬರಹಗಳು ಕುತೂಹಲಕರ ಮೂಡಿಸುತ್ತವೆ. ಪರಿಸರ ಲೋಕದ ಕೀಟ ಕುರಿತು ಶಶಿಧರ ಹಾಲಾಡಿ ಅವರು ಬರೆದ ವಿಸ್ಮಯಕಾರಿ ಮಾಹಿತಿ ಇದೆ. ಜತೆಗೆ, ಸಿನಿಮಾ ಲೋಕದ ಮನರಂಜನೆಯೂ ಇದೆ.