Sunday, 1st December 2024

CM Siddaramaiah: ಅರಣ್ಯವಾಸಿಗಳ ನೃತ್ಯಕ್ಕೆ ಹೆಜ್ಜೆ ಕೂಡಿಸಿದ ಸಿಎಂ ಸಿದ್ದರಾಮಯ್ಯ, ವಿಡಿಯೊ ಇಲ್ಲಿದೆ

cm siddaramaiah

ಎಚ್.ಡಿ.ಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಂಗಳವಾರ ಮೈಸೂರು (Mysuru news) ಜಿಲ್ಲೆಯ ಹೆಚ್​ಡಿ ಕೋಟೆ ತಾಲೂಕಿನಲ್ಲಿನ ಉದ್ಭೂರುಹಾಡಿ ಮತ್ತು ಕೆರೆಹಾಡಿಗೆ ಭೇಟಿ ನೀಡಿದರು. ಈ ವೇಳೆ ಹಾಡಿಯ ನಿವಾಸಿಗಳು ಸಾಂಪ್ರದಾಯಿಕ ನೃತ್ಯದ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಈ ವೇಳೆ ನೃತ್ಯ ನೋಡುತ್ತಿದ್ದ ಸಿದ್ದರಾಮಯ್ಯ ತಾವೇ ಕೆಲ ಹೊತ್ತು ಹಾಡಿಯ ಸಾಂಪ್ರದಾಯಿಕ ನೃತ್ಯಕ್ಕೆ ಕೋಲಾಟದ ಕೋಲು ಹಿಡಿದು ಹೆಜ್ಜೆ ಹಾಕಿದರು.

ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯ ಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಬಾಯಿಂದಲೇ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಕೆಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಸಂಕೀರ್ಣವಾಗಿದ್ದ ಸಮಸ್ಯೆಗಳ ಕುರಿತಾಗಿ ವನ್ಯ ಜೀವಿ ಮಂಡಳಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಕ್ಷಣ ಕರೆಂಟು-ನೀರು ಒದಗಿಸಿ

ಹಲವು ದಶಕಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ಕರೆಂಟಿಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ ಎನ್ನುವ ಆದಿವಾಸಿಗಳ ಮಾತು ಕೇಳಿ ಗರಂ‌ ಆದ ಸಿಎಂ, ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಿಗಳು ಅನಗತ್ಯ ಕಿರುಕುಳ ತೊಂದರೆ ಕೊಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಿದರು.

ಒಂದು ತಿಂಗಳಲ್ಲಿ ಕರೆಂಟು, ನೀರು

ಆದಿವಾಸಿ ಗಣೇಶ, ರಮೇಶ ಎನ್ನುವವರ ಹಟ್ಟಿಯಲ್ಲೇ ನೆಲದ ಮೇಲೆ ಕುಳಿತು ಆದಿವಾಸಿಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಸಮಸ್ಯೆ ಆಲಿಸಿ, ಅರಣ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟ ಇತರೆ ಇಲಾಖೆಗಳ ಮುಖ್ಯಸ್ಥರ ಜತೆ ಚರ್ಚಿಸಿದರು. ಕೊನೆಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, “ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.