ಮೈಸೂರು: ವಿದ್ಯಾಸಿರಿ (Vidyasiri) ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನ 1500 ರೂ.ಗಳನ್ನು ಮುಂದಿನ ವರ್ಷದಿಂದ ಎರಡು ಸಾವಿರ ರೂ. ಗಳಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಮೈಸೂರಿನಲ್ಲಿ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಸಿದ್ದಾರ್ಥ ನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ | IND vs AUS: ಕಪಿಲ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್ ಬುಮ್ರಾ
ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲೆ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳು ಜಾರಿ
ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಾರೆ. ಗೃಹ ಲಕ್ಷ್ಮೀ ಯೋಜನೆಯಡಿ 1 ಕೋಟಿ 22 ಲಕ್ಷ ಕುಟುಂಬಗಳ ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ವರ್ಷಕ್ಕೆ 32 ಸಾವಿರ ಕೋಟಿ ಒದಗಿಸಲಾಗುತ್ತಿದೆ ಎಂದರು. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಈ ಯೋಜನೆಗಳು ಜಾರಿಯಾಗಿವೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನಾನು ಹಳ್ಳಿಯಿಂದ ಬಂದು ನನ್ನ ಹಾಗೆ ಕಷ್ಟ ಪಡಬಾರದೆಂದು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕನಕದಾಸರ ಪ್ರತಿಮೆ ಸ್ಥಾಪಿಸುವುದಾಗಿ ಭರವಸೆ
ಕನಕದಾಸರ ಪ್ರತಿಮೆಯನ್ನು ಮೈಸೂರು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಈ ವೇಳೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಶಿಕ್ಷಣ, ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ
ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿಎಸ್‌ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ. ವಿವೇಕಾನಂದರು ಹೇಳಿದಂತೆ ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ ಎಂದರು.
ಈ ಸುದ್ದಿಯನ್ನೂ ಓದಿ | Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ಬೆಲೆ ಚೆಕ್ ಮಾಡಿ
ಹಿಂದುಳಿದ ವರ್ಗಗಳು 2ಎ ಕೆಟಗರಿಗೆ ಸೇರುತ್ತವೆ ಆದರೆ ಇದನ್ನು ಮೀರಿ ಮೆರಿಟ್‌ನಲ್ಲಿ ಅಂಕ ಗಳಿಸಿ ಸೀಟ್ ಪಡೆಯಲು ಪ್ರಯತ್ನಿಸಬೇಕು ಅದಕ್ಕಾಗಿ ಶ್ರಮವಹಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಹೆಚ್ಚು ಅಂಕಗಳನ್ನು ತೆಗೆಯಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮೇಲೆ ಬಂದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು ಸಮಾಜದಲ್ಲಿ ತುಳಿತಕ್ಕೊಳಗಾದವರ, ಅವಕಾಶ ವಂಚಿತರ ಸೇವೆ ಮಾಡಬೇಕು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ನಡುವಿನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.