ವಿಶೇಷ ವರದಿ: ಲೋಕೇಶ್ ಬಾಬು
ಐಎಎಸ್ ಅಧಿಕಾರಿಗಳ ಜಟಾಪಟಿ ಪರ-ವಿರೋಧ ಚರ್ಚೆ
ಮೈಸೂರು ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರ ನಡುವಿನ ಜಟಾಪಟಿಗೆ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿರುವ ಬೆನ್ನ, ಜಿಲ್ಲಾಧಿಕಾರಿಗಳ ನಿವಾಸದೊಳಗಿನ ಈಜುಕೊಳ ಹಾಗೂ ಜಿಮ್ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಚರ್ಚೆಗೆ ಗ್ರಾಸ ಒದಗಿಸಿದೆ. ಜಿಲ್ಲಾಧಿಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದ್ದು ನೂರಾರು ವರ್ಷಗಳಷ್ಟು ಹಳೆಯದು.
ಇಂತಹ ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಇವುಗಳ ಇತಿಹಾಸ ತಿಳಿಸಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇವುಗಳ ರಕ್ಷಣೆಗಾಗಿಯೇ ಪ್ರತ್ಯೇಕ ಕಾನೂನು ರಚಿಸಿದೆ. ಈ ನಿಯಮದ ಪ್ರಕಾರ ಇಂಥ ಕಟ್ಟಡಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ. ಆದರೆ, ಇದಕ್ಕೆ ವಿರುದ್ಧವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಾರಂಪರಿಕ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ಈಜುಕೊಳ ಹಾಗೂ ಜಿಮ್ ನಿರ್ಮಾಣ ಮಾಡಿರುವುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಎಲ್ಲ ಕಾನೂನುಗಳನ್ನು ಗಾಳಿಗೆತೂರಿರುವುದು ಟೀಕೆಗೊಳಗಾಗಿದೆ.
ಮೈಸೂರು ಅರಮನೆಯಂಥ ಅರಮನೆಯಲ್ಲೆ ಈಜುಕೊಳವಿಲ್ಲ. ಅಷ್ಟೇ ಏಕೆ ರಾಜಭವನದಲ್ಲೂ ಇಲ್ಲ. ಆದರೆ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಈಜುಕೊಳ ನಿರ್ಮಿಸುವ ಹರಕತ್ತು ಏನಿತ್ತು ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಪಾರಂಪರಿಕ ಕಟ್ಟಡದ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೂ ಅವಕಾಶವಿಲ್ಲ. ಜತೆಗೆ ಇಡೀ ರಾಜ್ಯ ಕರೋನಾ ಸಮಕಷ್ಟದಲ್ಲಿರು ವಾಗ ಇದು ಬೇಕಿತ್ತಾ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಗೌರವ ಇರುವ ಯಾರೂ ಕೂಡ ಮಾಡದ ಕೆಲಸಕ್ಕೆ ಜಿಲ್ಲಾಧಿಕಾರಿ ಕೈ ಹಾಕಿದ್ದಾರೆ. ಆ ಮೂಲಕ ಭವಿಷ್ಯದ ತಲೆಮಾರಿಗೆ ಕಾನೂನು ಉಲ್ಲಂಘನೆಯ ಪಾಠ ಮಾಡುತ್ತಿದ್ದಾರೆ ಎಂಬ ಮಾರ್ಮಿಕ ನುಡಿಗಳು ಮೈಸೂರಿ ನಾದ್ಯಂತ ಹರಿದಾಡ ತೊಡಗಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಾರಂಪರಿಕ ಹಿನ್ನೆಲೆ ಹೊಂದಿರುವ ಕಟ್ಟಡಗಳು ನೂರಾರು ಇವೆ. ಅವುಗಳ ಮೇಲೆ ಪಾರಂಪರಿಕ ಕಟ್ಟಡ ಹಾಗೂ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ ನಿಗಾ ಇರಿಸಿ ಜತನದಿಂದ ಕಾಯ್ದುಕೊಂಡು ಬಂದಿದೆ.
ಮಾತ್ರವಲ್ಲ, ಇಂತಹ ಕಟ್ಟಡಗಳ ಆಸುಪಾಸು ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವ ಹಾಗಿಲ್ಲ. ಒಂದು ವೇಳೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದಾದಲ್ಲಿ ಸ್ಥಳೀಯ ನಗರಪಾಲಿಕೆ, ಜಿಡಳಿತ ಸೇರಿದಂತೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಗೆಂದೇ ರೂಪಿಸಲಾಗಿರುವ ಸಮಿತಿಯ ಅನುಮತಿ ಪಡೆಯಬೇಕು. ಅನುಮತಿ ಇಲ್ಲದ ಹೊರತು ಪಾರಂಪರಿಕ ಕಟ್ಟಡಗಳ ಸುತ್ತ ಒಂದಡಿ ಗುಂಡಿ ತೆಗೆಯಲೂ ಅವಕಾಶ ಇಲ್ಲ.
ಮೈಸೂರಿನ ಜಿಲ್ಲಾಧಿಕಾರಿಗಳು ನೆಲೆಸಿರುವ ಕಟ್ಟಡ ಪಾರಂಪರಿಕ ಹಿನ್ನೆಲೆ ಹೊಂದಿದೆ. ಮಾತ್ರವಲ್ಲ, ಕಾಲಕಾಲಕ್ಕೆ ಅದನ್ನು ಸರಂಕ್ಷಿಸುತ್ತಾ ಬರಲಾಗಿದೆ. ಆದರೆ, ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಟ್ಟಡದ ಒಂದು ಬದಿಯಲ್ಲಿ ಅಂದಾಜು ೧೧ ಅಡಿ ಆಳ, 25 ಅಡಿ ಉದ್ದ ಹಾಗೂ 10 ಅಡಿ ಅಗಲದ ಹೈಟೆಕ್ ಮಾದರಿಯ ಸುಸಜ್ಜಿತ ಈಜುಕೊಳ ನಿರ್ಮಾಣ ಮಾಡಲಾಗಿದೆ.
ಇಂತಹದೊಂದು ಯೋಜನೆ ಅನುಷ್ಠಾನಗೊಂಡಿದ್ದರೂ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ರೀತಿಯ ಮಾಹಿತಿಯೇ
ಇರಲಿಲ್ಲ.
ಆದರೆ, 20 ದಿನಗಳ ಹಿಂದಷ್ಟೇ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಶ್ ಈ ಕುರಿತು ದಾಖಲೆ ಸಮೇತ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ, ಜನಪ್ರತಿನಿಧೀಗಳು ಜಿಲ್ಲಾಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಯೋಜನೆಗೆ ಹಣದ ಮೂಲ ಯಾವುದು ಎಂಬು ದನ್ನು ಬಹಿರಂಗ ಪಡಿಸಬೇಕು ಎಂಬ ಒತ್ತಾಯ ಹಾಗೂ ಕೂಗು ಮೈಸೂರಿ ನಾದ್ಯಂತ ಮಾತ್ರವಲ್ಲದೆ, ರಾಜ್ಯಾದ್ಯಂತ ಹರಿದಾಡಿತು. ಈಜುಕೊಳ ವಿಚಾರ ಕುರಿತು ಮೇಲಿಂದ ಮೇಲೆ ಟೀಕೆ, ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೊನ್ನೆಯಷ್ಟೇ ಈ ಕುರಿತಂತೆ 7 ದಿನದಲ್ಲಿ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದೆ. ನಾನಾ ಕಾರಣ ದಿಂದಾಗಿ ಮೈಸೂರಿನ ಜನ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ವಿರುದ್ಧ ಮುಗಿಬಿದ್ದ ಪರಿಣಾಮ ಮರೆಯಾಗಿ ಹೋಗಿದ್ದ ಈಜುಕೊಳ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ.
***
ಪಾರಂಪರಿಕ ಕಟ್ಟಡ ಎಂಬುದು ಗೊತ್ತಿದ್ದರೂ ಜಿಲ್ಲಾಧಿಕಾರಿಗಳು ಅದರ ಬದಿಯಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಅಕ್ಷಮ್ಯ. ಮಾತ್ರವಲ್ಲ, ಕರೋನಾದಂತಹ ಈ ಸಂದಿಗ್ಧ ಸಮಯದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿರುವುದು ಉದ್ಧಟತನದ ಪರಮಾವಧಿ. ಕರೋನಾ ಸೋಂಕು ತಡೆಗಟ್ಟಲು ಯೋಜನೆಗಳ ಅನುಷ್ಠಾನಕ್ಕಾಗಿ ಹಣಕಾಸು ಕ್ರೋಡೀಕರಿಸಲು ರಾಜ್ಯ ಹಾಗೂ
ಕೇಂದ್ರ ಸರಕಾರಗಳು ಹೆಣಗಾಡುತ್ತಿರುವ ಈ ಹೊತ್ತಿನಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಈ ನಡೆ ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ರಾಜ್ಯ ಸರ್ಕಾರ ತತ್ ಕ್ಷಣವೇ ಜಿಲ್ಲಾಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.
– ಕೆ.ವಿ.ಮಶ್ ನಗರ ಪಾಲಿಕೆ ಮಾಜಿ ಸದಸ್ಯ.