Friday, 13th December 2024

DK Shivakumar: ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಭರದಲ್ಲಿ ಆ ಪದ ಬಳಸಿದ್ದೆ: ಡಿ.ಕೆ. ಶಿವಕುಮಾರ್ ವಿಷಾದ

DK Shivakumar

ಬೆಳಗಾವಿ: ವಿಧಾನಸಭೆಯಲ್ಲಿ ಮಾಜಿ ಸಿಎಂ ದಿವಂಗತ ಎಸ್.ಎಂ. ಕೃಷ್ಣ ಅವರಿಗೆ ತಾವು ಸಂತಾಪ ಸೂಚಿಸಿ ನಿನ್ನೆ ಮಾತನಾಡುವಾಗ ವಡ್ಡ ಪದ ಬಳಸಿದ್ದರಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಭೋವಿ ಸಮುದಾಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಬರದಲ್ಲಿ ಆ ಪದ ಬಳಸಿದ್ದೇಯೇ ಹೊರತು ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ಅಲ್ಲ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ದೇಶ ಒಂದು ಚುನಾವಣೆ ಸಣ್ಣ ಪಕ್ಷಗಳನ್ನು ಮುಗಿಸುವ ಹುನ್ನಾರ

ಒಂದು ದೇಶ ಒಂದು ಚುನಾವಣೆ ಮೂಲಕ ಸಣ್ಣ ಪಕ್ಷಗಳನ್ನು ಮುಗಿಸುವ ಹುನ್ನಾರ ಕೇಂದ್ರ ಸರ್ಕಾರ ಹೊಂದಿದೆ. ಟಿಎಂಸಿ, ಡಿಎಂಕೆ, ಎಸ್‌ಪಿ, ಕಮ್ಯುನಿಷ್ಟ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಂದ ಇಂಡಿಯಾ ಒಕ್ಕೂಟದ ಸಂಖ್ಯಾಬಲ ಹೆಚ್ಚಾಗಿದೆ. ಹೀಗಾಗಿ ಈ ಪಕ್ಷಗಳನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದರು. ವಿಜಯಪುರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | D Gukesh: ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ಗೆ ಪ್ರಧಾನಿ ಸಹಿತ ಹಲವು ದಿಗ್ಗಜರಿಂದ ಹರಿದು ಬಂತು ಶುಭಾಶಯಗಳ ಮಹಾಪೂರ

ಕೇಂದ್ರ ಸಚಿವ ಸಂಪುಟದಲ್ಲಿ ಒಂದು ದೇಶ ಒಂದು ಚುನಾವಣೆಗೆ ಅನುಮೋದನೆ ನೀಡಿರುವ ಬಗ್ಗೆ ಕೇಳಿದಾಗ, ಒಂದು ದೇಶ ಒಂದು ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಲು ಕೇಂದ್ರ ಎನ್‌ಡಿಎ ಸರ್ಕಾರಕ್ಕೆ ಸರಿಯಾದ ಸಂಖ್ಯಾಬಲವಿಲ್ಲ. ಮೂರನೇ ಎರಡು ಸಂಖ್ಯಾಬಲ ಬೇಕಾಗಿದ್ದು, ಅದನ್ನು ಹೇಗೆ ಸಾಧಿಸುತ್ತಾರೋ ಗೊತ್ತಿಲ್ಲ. ಕೆಲವು ರಾಜ್ಯಗಳಲ್ಲಿ ಈಗಷ್ಟೇ ಚುನಾವಣೆಯಾಗಿದೆ, ಮತ್ತೆ ಕೆಲವು ಕಡೆಗಳಲ್ಲಿ ಚುನಾವಣೆಯಾಗಿ ಎರಡು, ಮೂರು ವರ್ಷಗಳಾಗಿವೆ. ಇವುಗಳನ್ನು ಹೇಗೆ ಮಾಡುತ್ತಾರೆ ಗೊತ್ತಿಲ್ಲ. ಇದು ಕಷ್ಟಕರವಾದ ಪ್ರಕ್ರಿಯೆ. ಅವರು ತಮ್ಮದೇ ಆದ ಅಜೆಂಡಾ ಇಟ್ಟುಕೊಂಡು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪಕ್ಷದ ನಿಲುವು ತಿಳಿಸಿದ್ದು, ನಾವು ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕೇಂದ್ರದ ಅಧಿಸೂಚನೆ ನಂತರ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆಲಮಟ್ಟಿ ಜಲಾಶಯ ಎತ್ತರವನ್ನು 524 ಅಡಿಗಳಿಗೆ ಎತ್ತರಿಸಲು ನಾವು ಬದ್ಧವಾಗಿದ್ದೇವೆ. ಇದಕ್ಕಾಗಿ ಅಧಿಸೂಚನೆ ಹೊರಡಿಸಬೇಕಿದೆ. ಅಧಿಸೂಚನೆ ಹೊರಡಿಸುವ ಮುನ್ನ ಇದರ ಕಾಮಗಾರಿ ನಡೆಸಬೇಕೆ ಬೇಡವೆ ಎಂದು ಚರ್ಚೆ ನಡೆಯುತ್ತಿದೆ. ಭೂಸ್ವಾಧೀನ ವಿಚಾರವಾಗಿ ಕೆಲವು ತಾರತಮ್ಯವಿದೆ. ಕೆಲವರು ನ್ಯಾಯಾಲಯದಿಂದ ಬೆಂಗಳೂರಿನ ಬೆಲೆಗಿಂತ ಹೆಚ್ಚು ಮೊತ್ತದ ಪರಿಹಾರವನ್ನು ಪಡೆಯಲು ಆದೇಶ ತೆಗೆದುಕೊಂಡು ಬಂದಿದ್ದಾರೆ. ಇದು ಹೇಗೆ ಸಾಧ್ಯ. ಈ ನ್ಯೂನ್ಯತೆ ಸರಿಪಡಿಸಬೇಕು. ಬೊಮ್ಮಾಯಿ ಅವರ ಸರ್ಕಾರ ರೈತರಿಗೆ ನಿಗದಿಪಡಿಸಿರುವ ದರದ ಬಗ್ಗೆ ನಮಗೆ ತಕರಾರಿಲ್ಲ. ಸೋಮವಾರ ಮುಖ್ಯಮಂತ್ರಿಗಳು ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ಕೇಂದ್ರ ಸರ್ಕಾರ 6 ಸಾವಿರ ಕೋಟಿ ಅನುದಾನ ನೀಡಬೇಕಾಗಿದೆ

ಧರಣಿನಿರತರು ಬಹಳಷ್ಟು ಬೇಡಿಕೆಗಳನ್ನಿಟ್ಟಿರುವ ಬಗ್ಗೆ ಕೇಳಿದಾಗ, ನೂರು ಬೇಡಿಕೆಗಳನ್ನು ಬೇಕಾದರೂ ಇಡಲಿ. ಕಾನೂನು ಚೌಕಟ್ಟಿನಲ್ಲಿ ಕಾರ್ಯರೂಪಕ್ಕೆ ತರಲು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತೇವೆ. ಆಲಮಟ್ಟಿ ಅಣೆಕಟ್ಟು ಎತ್ತರ 524 ಅಡಿಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಅದನ್ನು ಮಾಡುವಷ್ಟರಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ. ಕೇಂದ್ರ ಸರ್ಕಾರ 6 ಸಾವಿರ ಕೋಟಿ ಅನುದಾನ ನೀಡಬೇಕಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.