Friday, 13th December 2024

Director Guruprasad: ನಿರ್ದೇಶಕ ಗುರುಪ್ರಸಾದ್ ಪಂಚಭೂತಗಳಲ್ಲಿ ಲೀನ; ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ

Director Guruprasad

ಬೆಂಗಳೂರು: ಮಠ, ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Director Guruprasad) ಅವರ ಅಂತ್ಯಸಂಸ್ಕಾರ ಬ್ರಾಹ್ಮಣ ಸಂಪ್ರದಾಯದಂತೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಭಾನುವಾರ ನೆರವೇರಿತು. ಈ ವೇಳೆ ಕುಟುಂಬಸ್ಥರು, ನಿರ್ದೇಶಕ ಯೋಗರಾಜ್ ಭಟ್, ದುನಿಯಾ ವಿಜಯ್, ಡಾಲಿ, ಸತೀಶ್ ನೀನಾಸಂ, ತಬಲಾ ನಾಣಿ ಸೇರಿ ಹಲವರು ಭಾಗಿಯಾಗಿದ್ದರು.‌

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಅಂತ್ಯಕ್ರಿಯೆಯಾಗಿ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಗುರುಪ್ರಸಾದ್ ಅವರ 2ನೇ ಪತ್ನಿ ಸುಮಿತ್ರಾ ಅವರ ಸಹೋದರರು ಅಂತಿಮ ವಿಧಿ ವಿಧಾನವನ್ನು ನೆರವೇರಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಅಪಾರ್ಮೆಂಟ್‌ನಲ್ಲಿ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ವೈದ್ಯರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಗುರುಪ್ರಸಾದ್ ಅವರು ಉಸಿರುಗಟ್ಟಿ ಮರಣ ಹೊಂದಿರುವುದಾಗಿ ತಿಳಿದುಂದಿದೆ.

ಗುರುಪ್ರಸಾದ್ ಸಾವಿರ ಸಲ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದಿದ್ದ: ನಟ ಜಗ್ಗೇಶ್‌

ಬೆಂಗಳೂರು: ಮಠ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Director Guruprasad) ಅವರು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ರಂಗನಾಯಕ’ ಸಿನಿಮಾ ಫ್ಲಾಪ್ ಆದ ಹಿನ್ನೆಲೆ ಗುರುಪ್ರಸಾದ್ ಸಾಲದ ಶೂಲಕ್ಕೆ ಸಿಲುಕಿದ್ದರು. ಆರ್ಥಿಕ ಸಂಕಷ್ಟದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ನಿರ್ದೇಶಕನ ಸಾವಿನ ಬಗ್ಗೆ ಹಿರಿಯ ನಟ ಜಗ್ಗೇಶ್‌ ಪ್ರತಿಕ್ರಿಯಿಸಿದ್ದು, ಗುರುಪ್ರಸಾದ್ ಈ ಹಿಂದೆ ಸಾವಿರ ಸಲ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಹೀಗಾಗಿ ಬಹಳ ಸಲ ಬುದ್ಧಿವಾದ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಟ ಜಗ್ಗೇಶ್ ಅವರು, ಗುರುಪ್ರಸಾದ್ ಯಾರ ಮಾತು ಕೂಡ ಕೇಳುತ್ತಿರಲಿಲ್ಲ. ಆತ ನಮ್ಮ ಮನೆಯಲ್ಲಿ ಬೆಳೆದಿರುವ ಹುಡುಗ. ಗುರುಪ್ರಸಾದ್‌ನ ನಾನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಕುಡಿತದ ಚಟಕ್ಕೆ ಬಿದ್ದು ತುಂಬಾ ಹಾಳಾಗಿದ್ದ. ಒಳ್ಳೆಯ ಬರವಣಿಗೆ ಶಕ್ತಿ ಹೊಂದಿರುವ ಆ ವ್ಯಕ್ತಿ 1000 ಸಲ ಸಾಯುತ್ತೇನೆ ಎಂದು ಹೇಳಿದ್ದ. ನಾನು ಈ ಬಗ್ಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದೆ. ಗುರುಪ್ರಸಾದ್ ಮೊದಲ ಪತ್ನಿ ಜತೆಗೂ ಸರಿಯಾಗಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್‌ ಮೀನಿಂಗ್‌ ಡೈಲಾಗ್‌ ಹಾಕುತ್ತಿದ್ದ. ಡಬಲ್‌ ಮೀನಿಂಗ್‌ ಡೈಲಾಗ್‌ ಬಳಸಬೇಡ ಎಂದು ಸಲಹೆ ನೀಡಿದ್ದೆ. ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್‌ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು ಬಹಳ ಬೇಸರವಾಗಿ ನಾನು ಕಣ್ಣೀರು ಹಾಕಿದ್ದೆ ಎಂದು ತಿಳಿಸಿದರು.

ಸಿನಿಮಾ ಹಿಟ್‌ ಆದ ನಂತರ ಸೋಲಲು ಆರಂಭವಾಯಿತು. ಈ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಆತನ ಬಳಿ ಇರಲಿಲ್ಲ. ಸೋಲುಗಳಿಂದ ಪಾಠ ಕಲಿಯುವ ಮನಸ್ಥಿತಿ ಇರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿಯನ್ನೇ ತುಚ್ಛವಾಗಿ ನಿಂದಿಸುತ್ತಿದ್ದ ಎಂದು ಹೇಳಿದರು.

ಗುರುಪ್ರಸಾದ್ ಅವರು ಎರಡು ಮದುವೆಯಾಗಿದ್ದ. ಮೊದಲ ಪತ್ನಿ ರಾಷ್ಟ್ರಮಟ್ಟದ ಯೋಗ ಪಟು ಆಗಿದ್ದರು. ಆದರೆ ಹಲವಾರು ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ದಂಪತಿ ದೂರವಾಗುವ ಮುನ್ನ ನಾನೇ ಹಲವು ಬಾರಿ ರಾಜಿ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ್ದೆ. ನಂತರ ಗುರುಪ್ರಸಾದ್‌ ಮತ್ತೊಂದು ಮದುವೆಯಾದ. ಈಗ ಆತ ಒಂಟಿಯಾಗಿದ್ದಾನೆ ಎಂಬ ಸುದ್ದಿ ಬರುತ್ತಿದೆ. ಈಗ ಆ ಪತ್ನಿಯೂ ಆತನಿಂದ ದೂರವಾಗಿರಬಬಹುದು ಎಂದು ಅನಿಸುತ್ತಿದೆ. ಒಂಟಿತನದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಗ್ಗೇಶ್‌ ಅನುಮಾನ ವ್ಯಕ್ತಪಡಿಸಿದರು.

1972ರ ನವೆಂಬರ್ 2ರಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರುಪ್ರಸಾದ್ ಜನಿಸಿದ್ದರು. 2006ರಲ್ಲಿ ಮಠ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗ ನಾಯಕ ಹಾಗೂ ಎರಡನೇ ಸಲ ಸೇರಿ ಹಲವು ಸಿನಿಮಾ ನಿರ್ದೇಶನ ಮಾಡಿದ್ದರು. ಸದ್ಯ ಇವರ ಅಡೆಮಾ ಸಿನಿಮಾ ಶೂಟಗ್ ನಡೆಯುತ್ತಿತ್ತು. ಎದ್ದೇಳು ಮಂಜುನಾಥ ಚಲನಚಿತ್ರಕ್ಕೆ ಇವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು. ಅತ್ಯುತ್ತಮ ಚಿತ್ರಕಥೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು.