Monday, 9th December 2024

DK Shivakumar: ಕುಮಾರಸ್ವಾಮಿ-ಜಮೀರ್ ನಡುವೆ ಗಳಸ್ಯ-ಕಂಠಸ್ಯ ಸ್ನೇಹ; ಡಿ.ಕೆ.ಶಿವಕುಮಾರ್ ವ್ಯಾಖ್ಯಾನ

DK Shivakumar

ಬೆಂಗಳೂರು: ಕುಮಾರಸ್ವಾಮಿ-ಜಮೀರ್ ಅವರ ಸಂಬಂಧ ಗಳಸ್ಯ-ಕಂಠಸ್ಯ ರೀತಿಯದು. ಅವರ ನಡುವಣ ಮಾತುಕತೆ ಅವರ ವೈಯಕ್ತಿಕ ವಿಚಾರ. ಅದರಲ್ಲಿ ಬಿಜೆಪಿ (BJP) ರಾಜಕೀಯ ಮಾಡಲು ಹೊರಟಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಕುಮಾರಸ್ವಾಮಿ ದೂರು ನೀಡಲಿ

ಜಮೀರ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರಾ? ಅವರಿಬ್ಬರ ನಡುವೆ ಹಳೆಯ ಸ್ನೇಹ ಇದೆ. ಅವರ ನಡುವೆ ಸ್ನೇಹದಲ್ಲಿ ಹಿಂದೆಂದೂ ಇಂತಹ ಮಾತು ಬಂದಿಲ್ಲವಾದರೆ ಕುಮಾರಸ್ವಾಮಿ ಅವರು ಜಮೀರ್ ವಿರುದ್ಧ ಜನಾಂಗೀಯ ನಿಂದನೆ ದೂರು ನೀಡಲಿ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಎಚ್.ಡಿ.ಕೋಟೆಯ ಕೆರೆಹಾಡಿಗೆ ಸಿದ್ದರಾಮಯ್ಯ ಭೇಟಿ; ಆದಿವಾಸಿಗಳ ಸಮಸ್ಯೆಗೆ ಸ್ಪಂದನೆ

ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಬೇಡ

ಜಮೀರ್ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದಾಗ, “ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಅವರಿಬ್ಬರ ನಡುವಣ ವೈಯಕ್ತಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದು ಬೇಡ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇವರು ಅವರಿಗೆ ಡ್ರೈವರ್ ಆಗಿದ್ದರೋ, ಡ್ರೈವರ್ ಓನರ್ ಕೆಲಸ ಮಾಡಿದ್ದರೋ ಅವರಿಬ್ಬರಿಗೆ ಗೊತ್ತು. ನನಗೆ ಆತ್ಮೀಯರಾಗಿರುವ ಅಲ್ಪಸಂಖ್ಯಾತ ಸಮುದಾಯದವರನ್ನು ಸಾಬ್ರೆ ಎಂದು ಕರೆಯುತ್ತೇವೆ. ಕೆಲವರನ್ನು ಗೌಡ ಎಂದು ಕರೆಯುತ್ತೇವೆ. ಇದು ಪ್ರೀತಿ ವಿಶ್ವಾಸದಲ್ಲಿ ನಡೆಯುವ ಸಂಭಾಷಣೆ. ಕುಮಾರಸ್ವಾಮಿ ಮೇಲೆ ಜಮೀರ್‌ಗೆ ಪ್ರೀತಿ. ಕುಮಾರಸ್ವಾಮಿ ಕೂಡ ಪ್ರೀತಿಯಿಂದ ಇವರನ್ನು ಕುಳ್ಳ ಎಂದು ಕರೆಯುತ್ತಾರಂತೆ. ಇದರಲ್ಲಿ ರಾಜಕಾರಣ ಬೇಕೇ” ಎಂದು ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಇದರ ಪರಿಣಾಮ ಬೀರುವುದಿಲ್ಲವೇ ಎಂದು ಕೇಳಿದಾಗ, ಚನ್ನಪಟ್ಟಣ ಹಾಗೂ ಬೇರೆ ಎಲ್ಲೂ ಯಾವ ಪರಿಣಾಮವನ್ನೂ ಬೀರುವುದಿಲ್ಲ. ವಿರೋಧ ಪಕ್ಷದವರು ಸೋಲಿನ ಭಯದಿಂದ ಇದಕ್ಕೆ ಬಣ್ಣ ಹಚ್ಚಿ ಟ್ವೀಟ್ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ ಎಂದು ಹೇಳಿದರು.

ಗುತ್ತಿಗೆಯಲ್ಲಿ ಮೀಸಲಾತಿ ಪ್ರಸ್ತಾವನೆ ಇಲ್ಲ

ಕಾಮಗಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಪ್ರಸ್ತಾವನೆ ಬಗ್ಗೆ ಕೇಳಿದಾಗ, ಇದೆಲ್ಲವೂ ಸುಳ್ಳು. ವಿರೋಧಿಗಳು ಚುನಾವಣೆ ಸಮಯದಲ್ಲಿ ಪ್ರಚಾರ ಪಡೆಯಲು ಈ ರೀತಿ ಸುಳ್ಳು ಹಬ್ಬಿಸುತ್ತಿದ್ದಾರೆ. ಅಧಿಕಾರಿಯುತ ಸ್ಥಾನದಲ್ಲಿದ್ದುಕೊಂಡು ಹೇಳುತ್ತಿದ್ದೇನೆ, ನಮ್ಮ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಗಳಿಲ್ಲ. ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಈ ಅವಕಾಶ ನೀಡಲು ಮುಂದಾಗಿದ್ದೆವು. ಅದರ ಹೊರತಾಗಿ ಅಲ್ಪಸಂಖ್ಯಾತರು, ಮುಸಲ್ಮಾನರಿಗೆ ಈ ಮೀಸಲಾತಿ ನೀಡುವ ಚರ್ಚೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಸೋಲುವ ಭಯದಿಂದ ಬಿಜೆಪಿ ಸುಳ್ಳಿನ ಕಂತೆ

ಚುನಾವಣೆ ಸಮಯದಲ್ಲಿ ಬಿಜೆಪಿ ಇಂತಹ ಸುಳ್ಳು ಹಬ್ಬಿಸುತ್ತಿದ್ದಾರೆ. ಚುನಾವಣೆ ಸೋಲುವ ಭಯದಿಂದ ಬೆಳ್ಳಿ ಬಟ್ಟಲು, ದೇವರ ಫೋಟೊ, ಹರಿಶಿನ ಕುಂಕುಮ, ಹಣ ಹಂಚಿ ಚುನಾವಣೆ ಮಾಡುತ್ತಿದ್ದಾರೆ. ಅವರು ಮಾತನಾಡುತ್ತಿರುವುದೆಲ್ಲಾ ಸುಳ್ಳಿನ ಕಂತೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ, ಜನರ ಹಿತ ಕಾಯುತ್ತೇವೆ

ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಮತ್ತೆ ಅವಕಾಶ ನೀಡಲಾಗುವುದೇ ಎಂದು ಕೇಳಿದಾಗ, ಬಂಡೀಪುರ ಭಾಗದ ಜನಪ್ರತಿನಿಧಿಗಳು ನನ್ನ ಬಳಿ ಚರ್ಚೆ ಮಾಡಿದ್ದು, ಎರಡೂ ರಾಜ್ಯಗಳ ಸರ್ಕಾರಗಳ ಜತೆ ಚರ್ಚೆ ಮಾಡಿ, ಎರಡೂ ರಾಜ್ಯಗಳಿಗೂ ಯಾವ ರೀತಿ ಅನುಕೂಲ ಮಾಡಿಕೊಡಲಾಗುವುದು ಎಂದು ತೀರ್ಮಾನ ಮಾಡಲಾಗುವುದು. ರಾಜ್ಯದ ಹಿತ, ಜನರ ಹಿತ ಕಾಪಾಡಿಕೊಂಡು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ‘ಸಮೃದ್ಧಿ ರಂಗತಂಡ’ಕ್ಕೆ ಚಾಲನೆ

ತಮ್ಮದು ಹಿಟ್ಲರ್, ಕೊತ್ವಾಲ್ ಸಂಸ್ಕೃತಿ ಎಂದು ಬಿಜೆಪಿ ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ, “ಅವರು ನನಗೆ ಹಿಟ್ಲರ್ ಹೆಸರು ನೀಡುತ್ತಿದ್ದಾರಲ್ಲಾ ನಾನು ಅದನ್ನು ಸ್ವೀಕರಿಸುತ್ತೇನೆ. ನನ್ನ ಮನೆ ಮುಂದೆ ಬೋರ್ಡ್ ತಂದು ಹಾಕಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.