Friday, 13th December 2024

DK Shivakumar: 15 ದಿನಕ್ಕೊಮ್ಮೆ ರಾಮನಗರ ಜಿಲ್ಲೆಯ ಜನರ ಅಹವಾಲು ಆಲಿಸುತ್ತೇನೆ: ಡಿ.ಕೆ. ಶಿವಕುಮಾರ್

DK Shivakumar

ಕನಕಪುರ: ರಾಜ್ಯಪಾಲರನ್ನು ಶನಿವಾರ ಭೇಟಿ ಮಾಡಬೇಕಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರನ್ನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಭಾನುವಾರ ರಜೆ ದಿನವಾದರೂ ಅಧಿಕಾರಿಗಳನ್ನು ಕರೆದುಕೊಂಡು ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದೇನೆ. ನಾನು ರಾಜ್ಯದಲ್ಲಿ ಇದ್ದಾಗ 15 ದಿನಕ್ಕೊಮ್ಮೆ ಈ ಕಾರ್ಯಕ್ರಮ ಮಾಡಿ, ಜಿಲ್ಲೆಯ ಜನರ ಸಮಸ್ಯೆ ಕೇಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕನಕಪುರದ ನಿವಾಸದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಕನಕಪುರದ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ಮಾತು ಕೊಟ್ಟಿದ್ದೆ. ಕನಕಪುರದ ಜತೆಗೆ ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ತಾಲೂಕಿನ ಜನ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ನಮ್ಮ ಜನ ಬೆಂಗಳೂರಿಗೆ ಬಂದು ಕಾಯುವುದನ್ನು ನೋಡಿ ಬಹಳ ಬೇಸರವಾಗುತ್ತಿತ್ತು. ಹೀಗಾಗಿ ನಾನೇ ಅವರಿಗೆ ತಿಂಗಳಿಗೆ ಎರಡು ದಿನ ಮೀಸಲಿಡಲು ತೀರ್ಮಾನಿಸಿದ್ದೇನೆ. ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ರಸ್ತೆ ವಿಚಾರವಾಗಿ ಎರಡು ಗುಂಪಿನ ನಡುವಣ ಸಮಸ್ಯೆ ನಿವಾರಣೆ ಬಗ್ಗೆ ಸಮಸ್ಯೆ ಹೇಳಿಕೊಂಡರು. ಇದು ಆಯಾಯ ಕುಟುಂಬಗಳ ನಡುವಣ ಸಮಸ್ಯೆ. ಅವರುಗಳ ಅಹಂನಿಂದ ಸಮಸ್ಯೆ ಹೆಚ್ಚಾಗುತ್ತದೆ. ಅದು ನನಗೆ ಪರಿಚಿತ ಊರು. ಎರಡು ಬಣದವರೂ ನಮ್ಮವರೇ. ಈಗ ದೊಡ್ಡವರಾಗಿದ್ದಾರೆ. ಜನ ಓಡಾಡುವ ಜಾಗಕ್ಕೆ ಅವಕಾಶ ತಪ್ಪಿಸಲು ಆಗುವುದಿಲ್ಲ. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.

ಚನ್ನಪಟ್ಟಣ ಕನಕಪುರ ಭಾಗದಲ್ಲಿ ಕಾಡಾನೆ ಹಾವಳಿ, ಚಿರತೆ ಕಾಟ ಹೆಚ್ಚಾಗಿದೆ ಎಂದು ಕೇಳಿದಾಗ, ಕಾಡಾನೆ ದಾಳಿಯಿಂದ ಅನೇಕ ಪ್ರಾಣ ಹಾನಿಯಾಗಿವೆ. ಇದನ್ನು ತಡೆಯಲು ರೈಲ್ವೇ ಕಂಬಿಯ ಬೇಲಿ ಹಾಕಲು ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಹಂತ ಹಂತವಾಗಿ ಇದನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಚನ್ನಪಟ್ಟಣ ಕೆರೆಗಳ ತುಂಬಿಸುವ ಬಗ್ಗೆ ಕೇಳಿದಾಗ, ಅರ್ಕಾವತಿ ನದಿಗೆ ಇನ್ನು ನೀರು ಬಂದಿಲ್ಲ. ಬೆಂಗಳೂರಿನಲ್ಲಿ ಬಿದ್ದ ಮಳೆ ಮಾತ್ರ ಈಗ ಬರುತ್ತಿದೆ. ಮಂಡ್ಯದಲ್ಲೂ ಸರಿಯಾಗಿ ಮಳೆ ಆಗಿಲ್ಲ. ಆದರೂ ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ” ಎಂದು ತಿಳಿಸಿದರು.

ರಾಜ್ಯಾದ್ಯಂತ ನಾಳೆಯಿಂದ ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದು, ಪ್ರಭಾವಿಗಳ ಜಾಗವನ್ನೂ ತೆರವು ಮಾಡುತ್ತೀರಾ ಎಂದು ಕೇಳಿದಾಗ, ಆ ಇಲಾಖೆ ಮಂತ್ರಿಗಳು ಅದರ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂಬ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬಹಳ ಸಂತೋಷ. ಅವರು ಹಿರಿಯ ನಾಯಕರು. ಅವರು ಯಾಕೆ ಆಗಬಾರದು” ಎಂದು ತಿಳಿಸಿದರು.

ಚನ್ನಪಟ್ಟಣ ಚುನಾವಣೆ ಬಗ್ಗೆ ಕೇಳಿದಾಗ, ಈ ಬಗ್ಗೆ ನೀವು ವಿಷಯ ಹೇಳಬೇಕು. ಅಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ? ಬಿಜೆಪಿಗೋ, ಜೆಡಿಎಸ್ ಗೋ? ಎಂದು ಹೇಳಿದರು.

ನಿಮ್ಮ ಪಕ್ಷದಲ್ಲಿ ಯಾರು ಅಭ್ಯರ್ಥಿ ಎಂದು ಕೇಳಿದಾಗ, ನಾನೇ ಬಿ ಫಾರಂ ನೀಡುತ್ತಿರುವುದರಿಂದ, ನಾನೇ ಅಭ್ಯರ್ಥಿ. ನಮ್ಮ ಪಕ್ಷದ ಸಿದ್ಧತೆ ನಾವು ಮಾಡಿಕೊಳ್ಳುತ್ತಿದ್ದೇವೆ. ನಮಗೆ ಅಭ್ಯರ್ಥಿ ಮುಖ್ಯವಲ್ಲ. ನಾನು, ಸುರೇಶ್, ರವಿ, ಬಾಲಕೃಷ್ಣ, ಇಕ್ಬಾಲ್ ಹುಸೇನ್, ಪುಟ್ಟಣ್ಣ ಎಲ್ಲರೂ ಒಂದೊಂದು ಹೋಬಳಿ ಹಂಚಿಕೊಂಡು ಕೆಲಸ ಹಾಗೂ ಜನಸೇವೆ ಮಾಡುತ್ತೇವೆ. ಯಾರೇ ಸ್ಪರ್ಧೆ ಮಾಡಿದರೂ ನಾನೇ ಅಭ್ಯರ್ಥಿ. ನನಗಿರುವ ಜವಾಬ್ದಾರಿ ಹಾಗೂ ನನ್ನ ಮುಖ ನೋಡಿ ಎಂದು ಮನವಿ ಮಾಡುತ್ತೇನೆ. ಮೊನ್ನೆಯಷ್ಟೇ ಉದ್ಯೋಗ ಮೇಳ ಮಾಡಿದ್ದೇನೆ. ಅಲ್ಲಿನ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. 5 ಸಾವಿರ ಮನೆಗಳನ್ನು ನಿಗದಿ ಮಾಡಲಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹150 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಮುಂದಿನ ವಾರದಲ್ಲಿ ಕೆಲವು ಕಾಮಗಾರಿಗೆ ಚಾಲನೆ ನೀಡುತ್ತೇವೆ. ಈ ಹಿಂದೆ ಇದ್ದವರೂ ಈ ಕೆಲಸ ಮಾಡಬಹುದಿತ್ತು. ಅವರು ಎಂದಾದರೂ ಉದ್ಯೋಗ ಮೇಳ ಮಾಡಿದ್ದಾರಾ? ನಿವೇಶನ ಹಂಚಿಕೆ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬೆಳಗಾವಿ ಅಧಿವೇಶನ ಮಾಡಿ ನೂರು ವರ್ಷಗಳು ಕಳೆದಿವೆ. ಗಾಂಧೀಜಿ ಅವರು ಚನ್ನಪಟ್ಟಣ ಹಾಗೂ ಕನಕಪುರಕ್ಕೂ ಭೇಟಿ ನೀಡಿದ್ದರಂತೆ. ಈ ಕುರಿತ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ತಿಳಿಸಿದರು.

ನಿವೇಶನ ವಿಚಾರವಾಗಿ ಕೆಲವು ಗ್ರಾಮಗಳಲ್ಲಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ಪ್ರತಿಭಟನೆ ಮಾಡಬೇಕು. ಆಗಲೇ ಸಮಸ್ಯೆ ಏನಿದೆ ಎಂದು ತಿಳಿಯುತ್ತದೆ. ಶ್ರಮ ಇದ್ದರೆ ಫಲ. ನಮ್ಮ ತಪ್ಪಿದ್ದರೆ ನಾವು ತಿದ್ದುಕೊಳ್ಳುತ್ತೇವೆ. ಹೋರಾಟ ಮಾಡುವವರನ್ನು ನಾವು ಬೇಡ ಎನ್ನುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಬೇಕು. ಆಗಲೇ ತಪ್ಪು ಏನು ಎಂದು ತಿಳಿಯುತ್ತದೆ. ನನ್ನ ಟೀಕೆ ಮಾಡುವವರನ್ನು ಬೇಡ ಎನ್ನುವುದಿಲ್ಲ. ಕೆಲವರು ಚಟಕ್ಕೆ ಮಾತನಾಡುತ್ತಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಯಶಸ್ವಿಯಾಗಿದ್ದು, ಚನ್ನಪಟ್ಟಣದಲ್ಲಿ ಅದೇ ಆಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, ದೊಡ್ಡವರು ಏನಾದರೂ ಹೇಳಿಕೊಳ್ಳಲಿ. ಕನಿಷ್ಠ ಪಕ್ಷ ನಮ್ಮ ಹೆಣ ಹೊರಲು ನಾಲ್ಕು ಜನ ಸಿದ್ಧವಾಗಿದ್ದಾರಲ್ಲ ಅಷ್ಟು ಸಾಕು ಎಂದು ತಿಳಿಸಿದರು.

ನೀವೇ ಅಭ್ಯರ್ಥಿ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರಿಗೆ ಟೆನ್ಷನ್ ಆಗಿದೆಯೇ ಎಂದು ಕೇಳಿದಾಗ, ಅವರೇಕೆ ಟೆನ್ಷನ್ ಆಗುತ್ತಾರೆ. ಅವರು ತಮ್ಮ ಚುನಾವಣೆಗೆ ಮಾತ್ರ ಟೆನ್ಷನ್ ಆಗುತ್ತಾರೆ. ಬೇರೆಯವರ ಚುನಾವಣೆಗೆ ಅಲ್ಲ ಎಂದು ತಿಳಿಸಿದರು.