Friday, 13th December 2024

DK Shivakumar: ಬಿಜೆಪಿ ಕಾಲದಲ್ಲೂ ಎಷ್ಟೋ ಕೇಸ್ ವಾಪಸ್ ಪಡೆದಿದ್ರು: ಡಿಕೆಶಿ

DK Shivakumar

ಮೈಸೂರು: ಬಿಜೆಪಿ ಸರ್ಕಾರ ಈ ಹಿಂದೆ ತನ್ನ ಪಕ್ಷದ ಕಾರ್ಯಕರ್ತರು, ಆರ್‌ಎಸ್‌ಎಸ್, ಬಜರಂಗದಳದವರ ಮೇಲಿದ್ದ ಅನೇಕ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಆದರೆ, ಈಗ ರಾಜಕೀಯ ಕಾರಣಕ್ಕೆ ಹಳೇ ಹುಬ್ಬಳ್ಳಿ ಪ್ರಕರಣದ ಕುರಿತು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (DK Shivakumar) ಹೇಳಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿರುವ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಕಾಲದಲ್ಲಿ ಎಷ್ಟು ಕೇಸ್‌ಗಳನ್ನು ವಾಪಸ್ ಪಡೆಯಲಾಗಿತ್ತು ಎನ್ನುವ ಬಗ್ಗೆ ತಿಳಿದಿದೆಯೇ? ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದರು.

ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದು ಸುಳ್ಳೇ ಎಂದು ಕೇಳಿದಾಗ “ರಾಜಕೀಯ ಒತ್ತಡಗಳಿಗೆ ಈ ರೀತಿ ಆಗಿರುತ್ತದೆ. ಪ್ರಕರಣ ದಾಖಲಾಗಿದ್ದವರದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾಗಿದೆ. ನಾವು ನ್ಯಾಯವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಇತರೇ ವಿಚಾರಗಳ ಬಗ್ಗೆ ಆನಂತರ ಮಾತನಾಡೋಣ” ಎಂದರು.

ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಕ್ಷ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ಇದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ನೀಡಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ಬಿಜೆಪಿ ಶಾಸಕರ ಮನವಿ ಸ್ವೀಕರಿಸದೇ ಸಿಎಂ ದುರಹಂಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

ಬಿಜೆಪಿಯವರ ಹೋರಾಟಗಳು ನಿರಾಧಾರ: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿಯವರು ನಿರಾಧಾರವಾದ ವಿಚಾರಗಳ ಬಗ್ಗೆಯೇ ಹೋರಾಟ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್‌ ಪಡೆದಿರುವುದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸುವ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಸಿಎಂ (CM Siddaramaiah) ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಳು ಮೊಕದ್ದಮೆಗಳು, ಹೋರಾಟಗಳನ್ನು ಕಾರಣವಾಗಿಸಿ ಪ್ರಕರಣಗಳಿದ್ದರೆ ಅವುಗಳ ಬಗ್ಗೆ ಸೂಕ್ತವಾಗಿ ತೀರ್ಮಾನಿಸಿ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಇಂತಹ ಸಮಿತಿಗಳು ಬಿಜೆಪಿ ಸೇರಿ ಎಲ್ಲರ ಅಧಿಕಾರಾವಧಿಯಲ್ಲಿಯೂ ಅಸ್ತಿತ್ವದಲ್ಲಿದ್ದವು. ಅಂತೆಯೇ ಹುಬ್ಬಳ್ಳಿ ಗಲಭೆ ಪ್ರಕರಣವು ಸುಳ್ಳು ಪ್ರಕರಣವೆಂದು ನಿರ್ಧರಿಸಿ ಪ್ರಕರಣವನ್ನು ವಾಪಸ್‌ ಪಡೆಯಲಾಗಿದೆ.

ಈ ತೀರ್ಮಾನವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ನಂತರವಷ್ಟೇ ಪ್ರಕರಣವನ್ನು ವಾಪಸ್‌ ಪಡೆಯಲು ಸಾಧ್ಯ. ಇದೇ ರೀತಿ ಬಿಜೆಪಿಯವರ ಕಾಲದಲ್ಲೂ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.