Friday, 13th December 2024

ಶುದ್ದ ಕುಡಿದ ನೀರಿನ ಘಟಕಗಳೆಂಬ ಮರೀಚಿಕೆ !

ಗ್ರಾಮೀಣಾಭಿವೃದ್ಧಿ ವಾರ್ಷಿಕ ವರದಿಯಲ್ಲಿ ಇರೋದೇ ಒಂದು, ವಾಸ್ತವ ಇನ್ನೊಂದು

ಬೇಸಿಗೆ ಬಂದರೂ ಎಚ್ಚೆತ್ತುಕೊಳ್ಳದ ಸರಕಾರ, ಅಧಿಕಾರಿಗಳು

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದರೂ ಸರಕಾರ ಮಾತ್ರ ನೀರು ಒದಗಿಸುವ ಗೋಜಿಗೆ ಇನ್ನೂ ಮುಂದಾಗಿಲ್ಲ. ಸಮರ್ಪಕ ನಿರ್ವಹಣೆ ಇಲ್ಲದೇ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಹಳ್ಳ ಹಿಡಿದಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ.

ರಾಜ್ಯದಲ್ಲಿ 18,448 ನೀರು ಶುದ್ಧೀಕರಣ ಘಟಕ ಗಳಿಗೆ ಅನುಮೋದನೆ ಆಗಿದೆ. ಈ ಪೈಕಿ 17,803 ಘಟಕಗಳನ್ನು ಅಳವಡಿಸಲಾಗಿದೆ. 645 ಘಟಕ ಅಳವಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಟ್ಟು 17,679 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗ್ರಾಮೀಣಾಭಿವೃದ್ದಿ ವಾರ್ಷಿಕ ವರದಿ ಹೇಳಿದೆ. ಆದರೆ, ಸುಮಾರು 900 ಘಟಕಗಳು ಸ್ಥಗಿತಗೊಂಡಿವೆ. ಒಂದು ಸಾವಿರಕ್ಕೂ ಹೆಚ್ಚು ಘಟಕಗಳು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ. ವಾಸ್ತವದಲ್ಲಿ 1,134ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ.

ಸುಮ್ಮನಿರುವ ಅಧಿಕಾರಿಗಳು: ರಾಜಧಾನಿ ಬೆಂಗಳೂರು ಸೇರಿದಂತೆ ಕೋಲಾರ, ರಾಮನಗರ, ತುಮಕೂರು, ಬೆಳಗಾವಿ, ಯಾದಗಿರಿ, ಕೊಪ್ಪಳ, ಬೀದರ್ ನಂತಹ ಬಯಲು ಸೀಮೆ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದ್ದು, ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆಗೆ ದೂರುಗಳು ಬರುತ್ತಿದ್ದರೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆದ್ದರಿಂದ
ಜನರಿಗೆ ಬೋರ್‌ವೆಲ್ ನೀರೇ ಗತಿ ಎಂಬಂತಾಗಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬೋರ್ ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಜನರು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಫ್ಲೋರೈಡ್‌ನಿಂದ ಮೂಳೆ ಸಮಸ್ಯೆ ಮತ್ತು ಹಲ್ಲುಗಳಲ್ಲಿ ಪಾಚಿ ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ.
ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಪ್ರಾಣಿಜನ್ಯ ಗೊಬ್ಬರ ಬಳಸುವುದರಿಂದ ಅಂತರ್ಜಲದಲ್ಲಿ ನೈಟ್ರೇಟ್ ಮಟ್ಟವೂ ಹೆಚ್ಚಾಗಿದೆ.

ಈ ಅಂಶವು ಕುಡಿಯುವ ನೀರಿನಲ್ಲಿ ಸೇರುವುದರಿಂದ ಕ್ಯಾನ್ಸರ್, ಮಕ್ಕಳಲ್ಲಿ ಜನ್ಮಜಾತ ದೋಷಗಳು, ವಿಶೇಷವಾಗಿ ಉಸಿರಾಟದ ಸಮಸ್ಯೆ, ಮೂಳೆಗಳ ಸಮನ್ವಯತೆಯಲ್ಲಿ ಕೊರತೆ, ಚರ್ಮ ನೀಲಿಗಟ್ಟುವುದು ಹೀಗೆ ಹಲವು ಸಮಸ್ಯೆಗಳಿಗೆ ಮಕ್ಕಳು ತುತ್ತಾಗುತ್ತವೆ. ಸಂತಾನೋತ್ಪತ್ತಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ತಜ್ಞರ ಆತಂಕ: ನಗರ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ ಮತ್ತು ಕೊಳಚೆ ನೀರು ಅಂತರ್ಜಲ ಸೇರಿ ನೀರನ್ನು ವಿಷಮಯ ವಾಗಿಸುತ್ತದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸದೇ ಇದ್ದರೆ, ಹಲವು ಪೀಳಿಗೆಗಳನ್ನು ರೋಗದ ಕೂಪಕ್ಕೆ ತಳ್ಳುವ ಅಪರಾಧದ ಕೆಲಸ ಮಾಡಿದಂತಾಗುತ್ತದೆ ಎನ್ನುತ್ತಾರೆ ತಜ್ಞರು.

ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪಿಸಿ, ಅವುಗಳನ್ನ ನಿರ್ವಹಣೆ ಮಾಡದೇ ಬೀಗ ಹಾಕಲಾಗಿದೆ. ಸರಕಾರದ ಅನುದಾನ ಹೋಮ ಮಾಡಿದಂತಾ ಗುತ್ತದೆ. ಹೀಗಾಗಿ ಸರಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಕೈತೊಳೆದುಕೊಳ್ಳುವ ಬದಲು ಅವುಗಳನ್ನ ಸಮರ್ಪಕ ನಿರ್ವಹಣೆ ಮಾಡುವ ಮೂಲಕ
ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.

ಸರ್ಮಪಕ ನಿರ್ವಹಣೆ ಮಾಡದ ಕಂಪನಿ ಬ್ಲ್ಯಾಕ್ ಲಿಸ್ಟ್ ಗೆ?
ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವ ಹಣೆ ಮಾಡದ ಕಂಪನಿಗಳನ್ನು ಬ್ಲ್ಯಾಕ್ ಲಿಸ್ಟ್‌‌‌ಗೆ ಸೇರಿಸಲು ಮುಂದಾಗಿದೆ. ಇಂತಹ ಕಂಪನಿಗಳನ್ನು ಐದು ವರ್ಷ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡದ ರೀತಿ ಶಿಕ್ಷೆ ನೀಡಲಾಗುತ್ತದೆ. ಸರಕಾರದ ಮತ್ತೊಂದು ಎಡವಟ್ಟು ಅಂದರೆ ಆಧುನಿಕ ಪದ್ಧತಿಯಿಂದ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಮುಂದಾಗ ದಿರುವುದು.

ನೆಪಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಗಳು ಇವೆ. ಆದರೆ, ಜನತೆಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ದಿನಕ್ಕೆ ಒಬ್ಬ ವ್ಯಕ್ತಿಗೆ 55 ಲೀ. ನೀಡುವ ಪ್ರಸ್ತಾವನೆ ಇದ್ದು, ಬೇಸಿಗೆಯಲ್ಲಿ ಒಂದು ಲೀಟರ್ ನೀಡುವಲ್ಲಿಯೂ ಸರಕಾರ ಎಡವುತ್ತಿದೆ. ಕೇಳಿದರೆ ಕರೋನಾ ನೆಪವೊಡ್ಡಿ ಅನುದಾನ ಕೊರತೆ ಎಂದು ಹೇಳುವ ಮೂಲಕ ಸಮಸ್ಯೆೆಯನ್ನು ಮರೆಮಾಚುವ ಕೆಲಸ ಮಾಡುತ್ತಿದೆ.

ಅವ್ಯವಹಾರ ತನಿಖೆಗೆ ಜಂಟಿ ಸದನ ಸಮಿತಿ ರಚನೆ: ಸಚಿವ ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವ ಹಾರ ನಡೆದಿರುವ ಆರೋಪ ಕೇಳಿ ಬಂದಿದ್ದು, ಅವ್ಯವಹಾರ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲಾಗುತ್ತದೆ ಎಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನ ಪರಿಷತ್ನಲ್ಲಿ ತಿಳಿಸಿದ್ದಾರೆ. ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ ರಾವ್ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶುದ್ಧ ಕುಡಿಯುವ ನೀರು ಘಟಕಗಳ ಅವ್ಯವ ಹಾರ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ವಹಿಸುವುದಾಗಿ ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇಲ್ಲಿಯೂ ಅದನ್ನೇ ಘೋಷಣೆ ಮಾಡುತ್ತಿದ್ದು, ಆದಷ್ಟು ಬೇಗ ಜಂಟಿ ಸದನ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.