ಬೆಂಗಳೂರು: ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ (Assembly Elections) ಹಾಗೂ ಹದಿನೈದು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ (By Election, Bypolls) ಫಲಿತಾಂಶ (Election Results 2024) ಶನಿವಾರ ಪ್ರಕಟವಾಗಿದೆ. ಹೆಚ್ಚಿನ ಕಡೆಗಳಲ್ಲಿ ಆಯಾ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳೇ ಗೆಲುವಿನ ನಗೆ ಬೀರಿವೆ. ಮಹಾರಾಷ್ಟ್ರದಲ್ಲಿ ಆಡಳಿತ ಮೈತ್ರಿಕೂಟ ಮಹಾಯುತಿ ಹಾಗೂ ಜಾರ್ಖಂಡ್ನಲ್ಲಿ ಜೆಎಂಎಂ ಮತ್ತೊಮ್ಮೆ ಅಧಿಕಾರದತ್ತ ದಾಪುಗಾಲು ಹಾಕಿದೆ. ಕರ್ನಾಟಕದ ಮೂರೂ ವಿಧಾನಸಭೆ ಕ್ಷೇತ್ರಗಳನ್ನುಕಾಂಗ್ರೆಸ್ ಬಾಚಿ ಜೋಳಿಗೆಗೆ ಹಾಕಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ
ದೇಶದ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. 288 ಸೀಟುಗಳ ಪೈಕಿ ಆಡಳಿತಾರೂಢ ಮೈತ್ರಿಕೂಟ ಬರೋಬ್ಬರಿ 217 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (Maha Vikas Aghadi) ಒಕ್ಕೂಟ ಕೇವಲ 58 ಕಡೆಗಳಲ್ಲಿ ಮುಂದಿದ್ದು, ಇತರರು 10 ಕಡೆ ಮುನ್ನಡೆ ಸಾಧಿಸಿದ್ದಾರೆ (Maharashtra Election Result).
ಮಹಾಯುತಿ ಒಕ್ಕೂಟದ ಪೈಕಿ ಬಿಜೆಪಿ 115, ಶಿವಸೇನೆ (ಎಸ್ಎಚ್ಎಸ್) 56 ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ 34 ಕಡೆ ಮುನ್ನಡೆಯಲ್ಲಿದೆ. ಇನ್ನು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪೈಕಿ ಶಿವ ಸೇನೆ (ಯುಬಿಟಿ ಬಣ) 20, ಕಾಂಗ್ರೆಸ್ 11, ಎನ್ಸಿಪಿ (ಎಸ್ಪಿ ಬಣ) 2 ಮತ್ತು ಸಮಾಜವಾದಿ ಪಾರ್ಟಿ 2 ಕಡೆಗಳಲ್ಲಿ ಮುನ್ನಡೆ ಸಾಧಿಸಿವೆ. ಇಲ್ಲಿ ಮಹಾಯುತಿಯ ಎದುರು ನಿಲ್ಲಲು ಗಟ್ಟಿಯಾದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹುಡುಕಿಕೊಂಡಿರಲಿಲ್ಲ. ಕಾಂಗ್ರೆಸ್ನ ಮಹಾ ವಿಕಾಸ ಅಘಾಡಿ ಹಾಗೂ ಬಿಜೆಪಿಯ ಮಹಾಯುತಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಮಹಾರಾಷ್ಟ್ರದಲ್ಲಿ ಈ ಬಾರಿ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ಶ್ರಮಿಸಿತ್ತು. ಇಲ್ಲಿನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಹಾಗೂ ಶಿವಸೇನೆಯ (ಉದ್ಧವ್ ಠಾಕ್ರೆ) ಪಕ್ಷಗಳ ಬೆಂಬಲವು ಕಾಂಗ್ರೆಸ್ಗೆ ಇತ್ತು. ಆದರೆ ಚುನಾವಣೆ ಫಲಿತಾಂಶ ಕಾಂಗ್ರೆಸ್ನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿವೆ.
ಜಾರ್ಖಂಡ್ಗೆ ಸೊರೇನ್
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಅಂದರೆ ಜಾರ್ಖಂಡ್ ಮುಕ್ತಿ ಮೋರ್ಚಾ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 26 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 14 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಜಾರ್ಖಂಡ್ನಲ್ಲಿ ಮತ್ತೆ ಜೆಎಂಎಂ ಸರ್ಕಾರ ರಚಸಲಿರುವುದು ಬಹುತೇಕ ಖಚಿತವಾಗಿದೆ. ಸಾಕಷ್ಟು ಆರೋಪಗಳ ಮಧ್ಯೆಯೂ ಹೇಮಂತ್ ಸೊರೇನ್ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ.
ಸಿಎಂ ಹೇಮಂತ್ ಸೊರೇನ್ ಜೈಲಿಗೆ ಹೋದದ್ದು ಅವರಿಗೆ ರಾಜಕೀಯವಾಗಿ ಲಾಭದಾಯಕವಾಗಿದೆ ಎಂದು ಸಾಬೀತಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಹೇಮಂತ್ ಸೊರೇನ್ ಜನರ ಅನುಕಂಪ ಗಿಟ್ಟಿಸಿಕೊಂಡಿದ್ದಾರೆ. ವಿಶೇಷವಾಗಿ ಬುಡಕಟ್ಟು ಸಮಾಜದ ಜನರಲ್ಲಿ ಅವರ ಮೇಲಿನ ವಿಶ್ವಾಸ ಬಲವಾಯಿತು. ಬಿಜೆಪಿ ಇಲ್ಲಿ ಸೋಲಲು ಇನ್ನೊಂದು ಕಾರಣ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು. ಹೇಮಂತ್ ಸೊರೇನ್ ಎದುರು ನಿಲ್ಲುವ ಸಾಮರ್ಥ್ಯ ಪಕ್ಷಕ್ಕೆ ಇಲ್ಲಿ ಇರಲಿಲ್ಲ.
ಕರ್ನಾಟಕದಲ್ಲಿ ಕೈಗೆ ಜೈ
ಕರ್ನಾಟಕದ ಮೂರು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯ (Karnataka Bypoll results) ಜಿದ್ದಾಜಿದ್ದಿನ ಕದನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆದ್ದು ಬೀಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಫಲಿತಾಂಶದಿಂದ ಮುಖಭಂಗವಾಗಿದೆ. ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಮೂಲಕ ಎನ್ಡಿಎ ಮೈತ್ರಿಕೂಟಕ್ಕೆ ತೀವ್ರ ಆಘಾತ ನೀಡಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿದ್ದು, ಭಾರಿ ಸದ್ದು ಮಾಡಿದ್ದ ಮುಡಾ ಹಗರಣ , ವಾಲ್ಮೀಕಿ ನಿಗಮ ಅಕ್ರಮ ವಕ್ಫ್ ವಿವಾದ ಹಾಗೂ ಸಚಿವ ಜಮೀರ್ ಅವರ ವಿವಾದಾತ್ಮಕ ಹೇಳಿಕೆಗಳು ಮತದಾರನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಣ ಬಡಿದಾಟ ಜೋರಾಗಿತ್ತು. ಆದರೆ, ಉಪ ಚುನಾವಣೆಗೆ ಕಾಂಗ್ರೆಸ್ನ ಎಲ್ಲಾ ನಾಯಕರು ಒಗ್ಗಟ್ಟಿನಿಂದಲೇ ಹೋರಾಟ ಮಾಡಿದ್ದರು.
ವಯನಾಡಿಗೆ ಪ್ರಿಯಾಂಕ ಪ್ರಿಯ
ಇಡೀ ದೇಶದ ಗಮನ ಸೆಳೆದಿದ್ದ ವಯನಾಡು (Wayanad) ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಮೊದಲ ಬಾರಿ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) ಭರ್ಜರಿ 4 ಲಕ್ಷಕ್ಕೂ ಅದಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಗೆದ್ದು, ರಾಜೀನಾಮೆ ನೀಡಿದ ಕ್ಷೇತ್ರದಲ್ಲಿ ಇದೀಗ ಸಹೋದರಿ ಗೆಲುವಿನ ಖಾತೆ ತೆರೆದಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ನ ಭದ್ರಕೋಟೆಯೇ ಆಗಿರುವ ಇಲ್ಲಿ ಪ್ರಿಯಾಂಕ ಗೆಲ್ಲುವ ನಿರೀಕ್ಷೆ ಇತ್ತು. ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ ಇಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತ್ತು. ಸುಮಾರು 16 ಮಂದಿ ಕಣದಲ್ಲಿದ್ದು, ಈ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು.
15 ರಾಜ್ಯಗಳ 48 ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ
ಬಿಹಾರದಲ್ಲಿ ನಡೆದ ಬೆಳಗಂಜ್, ಇಮಾಮ್ಗಂಜ್, ರಾಮಗಢ ಮತ್ತು ತರಾರಿ ಎಂಬ ಎಲ್ಲ ನಾಲ್ಕು ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮೈತ್ರಿಕೂಟವು ಗೆಲುವು ಸಾಧಿಸಿದೆ. ಛತ್ತೀಸ್ಗಢದ ರಾಯಪುರ ದಕ್ಷಿಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ರಾಜಸ್ಥಾನದಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಆದರಲ್ಲಿ ಆಡಳಿತಾರೂಢ ಬಿಜೆಪಿ ಜುಂಜುನು, ರಾಮಗಢ, ದಿಯೋಲಿ-ಉನಿಯಾರಾ ಮತ್ತು ಖಿಸ್ವರ್ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ದೌಸಾದಲ್ಲಿ ಮುಂದಿದೆ, ಹಾಗೂ ಬಿಎಪಿ ಸಾಲುಂಬರ್ ಮತ್ತು ಚೋರಾಸಿಯಲ್ಲಿದೆ ಮುನ್ನಡೆಯಲ್ಲಿದೆ. ಸಿಕ್ಕಿಂನಲ್ಲಿ ನಡೆದ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಗೆಲುವು ಸಾಧಿಸಿದೆ.
ಅಸ್ಸಾಂನಲ್ಲಿ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ನಾಲ್ಕರಲ್ಲಿ ಅಸ್ಸಾಂನಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಒಂದರಲ್ಲಿ ಮುನ್ನಡೆ ಸಾಧಿಸಿದೆ. ಪಂಜಾಬ್ನಲ್ಲಿಯೂ ನಡೆದ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಮೂರಲ್ಲಿ ಗೆದ್ದಿದೆ. ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಧ್ಯಪ್ರದೇಶದ ವಿಜಯಪುರ ಮತ್ತು ಬುಧ್ನಿ ಎರಡು ಸ್ಥಾನಗಳಲ್ಲಿ ಉಪಚುನಾವಣೆ ಫಲಿತಾಂಶಗಳು ಬಂದಿವೆ. ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚಿವ ರಾಮ್ನಿವಾಸ್ ರಾವತ್ ಅವರು ಕಾಂಗ್ರೆಸ್ನ ಮುಖೇಶ್ ಮಲ್ಹೋತ್ರಾ ವಿರುದ್ದ ಸೋಲಪ್ಪಿದ್ದಾರೆ. ಬುಧ್ನಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮಾಕಾಂತ್ ಭಾರ್ಗವ ಮುನ್ನಡೆ ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು ಆರು ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದಿದ್ದು, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯು ಸೀತಾಯಿ, ಮದಾರಿಹತ್ ಮತ್ತು ನೈಹತಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಎಸ್ಕೆ ರಬಿಯುಲ್ ಇಸ್ಲಾಂ, ಸುಜೋಯ್ ಹಜ್ರಾ ಮತ್ತು ಫಲ್ಗುಣಿ ಸಿಂಘಬಾಬು ಅವರು ಹರೋವಾ, ಮೇದಿನಿಪುರ ಮತ್ತು ತಲ್ದಂಗ್ರಾ ಕ್ಷೇತ್ರಗಳಿಂದ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳ ಉಪಚುನಾವಣೆಗೆ ಮತ ಎಣಿಕೆ ಮುಂದುವರೆದಿದೆ. ಯುಪಿಯ ಕಾನ್ಪುರದ ಸಿಸಮಾವು ಮತ್ತು ಕರ್ಹಾಲ್ ಸ್ಥಾನಗಳನ್ನು ಎಸ್ಪಿ ಗೆದ್ದಿದೆ. ಘಾಜಿಯಾಬಾದ್, ಖೈರ್, ಫುಲ್ಪುರ್ ಮತ್ತು ಮೀರಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೊರಾದಾಬಾದ್ನ ಕುಂದರ್ಕಿ, ಕತೇಹಾರಿ ಮತ್ತು ಮಜ್ವಾನ್ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಕೇರಳದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ, ಚೇಲಕ್ಕರಾದಲ್ಲಿ ಎಲ್ಡಿಎಫ್ ನ ಯುಆರ್ ಪ್ರದೀಪ್ ಗೆಲುವು ಮೂಲಕ ಎಡಪಕ್ಷಗಳ ಭದ್ರಕೋಟೆಯನ್ನು ಉಳಿಸಿಕೊಂಡರು. ಇನ್ನು ಪಾಲಕ್ಕಾಡ್ನಲ್ಲಿ ಯುಡಿಎಫ್ನ ರಾಹುಲ್ ಮಂಕೂಟತಿಲ್ ಅವರು ಬಿಜೆಪಿಯ ಸಿ ಕೃಷ್ಣಕುಮಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ. ಗುಜರಾತ್ನ ವಾವ್ ವಿಧಾನಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಸ್ವರೂಪಜಿ ಠಾಕೋರ್ ಅವರು ಕಾಂಗ್ರೆಸ್ ಅಭ್ಯರ್ಥಿ ಗುಲಾಬ್ಸಿನ್ಹ್ ರಜಪೂತ್ ಅವರನ್ನು 2,353 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಗಳಿಸಿದ್ದಾರೆ. ಮೇಘಾಲಯದಲ್ಲಿ ನಡೆದ ಏಕೈಕ ಸ್ಥಾನದ ಉಪಚುನಾವಣೆಯಲ್ಲಿ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ಪತ್ನಿ ಮೆಹ್ತಾಬ್ ಚಂಡಿ ಸಂಗ್ಮಾ ಅವರು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಗಂಬೆಗ್ರೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಯ ಸಧಿರಾಣಿ ಸಂಗ್ಮಾ ಅವರಿಗಿಂತ 4594 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ.