Friday, 13th December 2024

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ

ಮಂಡ್ಯ/ಮೈಸೂರು: ಹಿರಿಯ ರಾಜಕಾರಣಿ, ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ(80)  ಶುಕ್ರವಾರ ನಿಧನರಾದರು.

ಲಿವರ್ ಕ್ಯಾನ್ಸರ್​ಗೆ ತುತ್ತಾಗಿದ್ದ ಕೆ.ಆರ್.ಪೇಟೆ ಕೃಷ್ಣ ಅವರಿಗೆ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ಕರೆ ತರಲಾಗಿತ್ತು. ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆ.ಆರ್‌.ಪೇಟೆ ತಾಲೂಕಿನ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೆ.ಆರ್‌.ಪೇಟೆ ಕ್ಷೇತ್ರದಿಂದ ಮೂರು ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣ, ಸಚಿವರಾಗಿ, ಸ್ಪೀಕರ್ ಆಗಿ ಕೆಲಸ ನಿರ್ವಹಿಸಿದ್ದರು. 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜನತಾಪಕ್ಷದ ಎಸ್‌.ಆರ್‌.ಬೊಮ್ಮಾಯಿ ಸರ್ಕಾರದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾಗಿದ್ದ ಕೃಷ್ಣ, 2004ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭೆ ಸ್ಪೀಕರ್‌ ಆಗಿದ್ದರು. 2008 ಹಾಗೂ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡರು. 2018ರಲ್ಲಿ ಅನಾರೋಗ್ಯ ಕಾರಣಕ್ಕೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು.