Friday, 13th December 2024

Tejaswi Surya: ವಕ್ಫ್‌ ವಿರುದ್ಧ ಹೇಳಿಕೆ; ಸಂಸದ ತೇಜಸ್ವಿ ಸೂರ್ಯ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

tejaswi surya

ಬೆಂಗಳೂರು: ವಕ್ಫ್ ಮಂಡಳಿ (Waqf board) ಆಸ್ತಿ ಎಂದು ಪಹಣಿಯಲ್ಲಿ ದಾಖಲಾದ ಬಳಿಕ ರೈತರೊಬ್ಬರು ಆತ್ಮಹತ್ಯೆ (Self harming) ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ (Karnataka high court) ರದ್ದುಗೊಳಿಸಿದೆ.

ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ತೇಜಸ್ವಿ ಸೂರ್ಯ ಅವರು ಅರ್ಜಿ ಸಲ್ಲಿಸಿದ್ದು, ಆರೋಪಗಳಿಗೆ ಆಧಾರವಿಲ್ಲ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಸುವ, ದುರುದ್ದೇಶಪೂರಿತ ಹೇಳಿಕೆಗಳನ್ನು ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪದ ಮೇಲೆ ತೇಜಸ್ವಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 353 (2) ರ ಅಡಿಯಲ್ಲಿ ಹಾವೇರಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

ವಾದ ಮತ್ತು ಪ್ರತಿವಾದಗಳ ನಂತರ, ನ್ಯಾಯಾಲಯವು ಈ ವಿಷಯವನ್ನು ಆದೇಶಗಳಿಗಾಗಿ ಗುರುವಾರ ಕಾಯ್ದಿರಿಸಿತ್ತು. ಹಿರಿಯ ವಕೀಲ ಅರುಣಾ ಶ್ಯಾಮ್ ಅವರು, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮೃತನ ತಂದೆಯ ಮಾತನ್ನು ಅನುಸರಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ವಾದಿಸಿದ್ದರು. ಪೊಲೀಸರ ಸೂಚನೆಯ ನಂತರ ಪೋಸ್ಟ್ ಅನ್ನು ಅಳಿಸಲಾಗಿದೆ ಎಂದು ತಿಳಿಸಿದ್ದು, ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ವಿನಂತಿಸಿದರು.

ಆರಂಭಿಕ ವಾದಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ನ್ಯಾಯಪೀಠವು ಈ ಹಿಂದೆ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಈ ಪ್ರಕರಣದಲ್ಲಿ ಸೂರ್ಯ ವಿರುದ್ಧ ಮುಂದಿನ ಕ್ರಮಕ್ಕೆ ತಡೆ ನೀಡಿದೆ.

ಶೈಕ್ಷಣಿಕ ಪ್ರವಾಸಗಳನ್ನು ರದ್ದುಪಡಿಸಿಲ್ಲ:ಶಿಕ್ಷಣ ಇಲಾಖೆ

ಬೆಂಗಳೂರು: 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸಗಳನ್ನು ರದ್ದು ಮಾಡಿಲ್ಲ. ಈಗಾಗಲೇ ತೆರಳಿರುವ ವಿದ್ಯಾರ್ಥಿಗಳನ್ನು ವಾಪಸು ಬರುವಂತೆ ಸೂಚಿಸಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮುರ್ಡೇಶ್ವರದಲ್ಲಿ ನಡೆದ ಶಾಲಾ ಮಕ್ಕಳ ದುರಂತಕ್ಕೆ ಸಂಬಂಧಿಸಿ ಈ ಸುದ್ದಿ ಹಬ್ಬಿತ್ತು.

ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ರದ್ದು ಕುರಿತಂತೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಈ ರೀತಿಯ ಯಾವುದೇ ಆದೇಶ ಇಲಾಖೆ ಹೊರಡಿಸಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25ನೇ ಸಾಲಿನ ಪ್ರಸ್ತುತದ ಶೈಕ್ಷಣಿಕ ಪ್ರವಾಸ ಮಾಡದಂತೆ, ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ, ನಿರ್ದೇಶನ ನೀಡಿರುವುದಿಲ್ಲ ಎಂದಿದ್ದಾರೆ.

2024-25ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಇಲಾಖೆಯ ಸೂಚನೆ, ನಿರ್ದೇಶನ ಅನುಸರಿಸಿ, ಡಿಸೆಂಬರ್ ಒಳಗೆ ಪೂರ್ಣಗೊಳಿಸುವುದು ಅಂತ ಹೇಳಿದ್ದಾರೆ.

ಶೈಕ್ಷಣಿಕ ಪ್ರವಾಸವನ್ನು ವ್ಯವಸ್ಥಿತವಾಗಿ ಕೈಗೊಳ್ಳುವುದು. ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಢ, ಹಾನಿಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರಿ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Murder Case: ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!