ಶಿಗ್ಗಾವಿ: ಆಸ್ಸಾಂನ ಜೋರ್ಹತ್ ನಲ್ಲಿ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಜಗದೀಶ ಸುತಗಟ್ಟಿ (29) ನ.19ರಂದು ಬೆಳಗ್ಗೆ ನಿಧನರಾಗಿದ್ದಾರೆ.
13 ನವೆಂಬರ್ 1992ರಂದು ಶಿಗ್ಗಾವಿಯಲ್ಲಿ ಜನಿಸಿದ್ದ ಜಗದೀಶ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ರಾಣೆಬೆನ್ನೂರಿನ ದೇವಿಕಾ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದರು. ಬಳಿಕ ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (JJMMC) MBBS ಅಧ್ಯಯನ ಮಾಡಿದ್ದರು.
16, ಮಾರ್ಚ್ 2017ರಲ್ಲಿ ಭಾರತೀಯ ವಾಯುಪಡೆಯ 10, ವಿಂಗ್ ಏರ್ ಫೋರ್ಸ್ ವಿಭಾಗದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದರು. ಸದ್ಯ ಆಸ್ಸಾಂನ ಜೋರ್ಹತ್ ನಲ್ಲಿ ಸೇವೆ ಸಲ್ಲಿಸುವ ಮುನ್ನ ಬೆಂಗಳೂರಿನಲ್ಲಿ ಎರಡು ವರ್ಷ ಹತ್ತು ತಿಂಗಳು ಸೇವೆ ಸಲ್ಲಿಸಿದ್ದರು.
ಮೃತ ಜಗದೀಶ ಅವರು, ಅಜ್ಜ ಹೌಸಿಂಗ್ ಬೋರ್ಡ್ ಕಾಲನಿಯ ನಿವೃತ್ತ ಇಂಜಿನೀಯರ್ ಕರಿಯಪ್ಪ ಮಿರ್ಜಿ, ಅಜ್ಜಿ ಲಲಿತಾ, ತಂದೆ ನಿಂಗಪ್ಪ, ತಾಯಿ ಉಮಾದೇವಿ, ಸೋದರ ವೀರೇಶ ಅವರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರ ಶುಕ್ರವಾರ ರಾತ್ರಿ ಬೆಂಗಳೂರು ಮಾರ್ಗವಾಗಿ ರಸ್ತೆ ಮೂಲಕ ಆಗಮಿಸಿ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶಿಗ್ಗಾವಿ ಪಟ್ಟಣ ತಲುಪಲಿದೆ.