ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ
ಮಂಗಳೂರು: ತುಳು ಸಿನಿಮಾ ’ಪಿಂಗಾರ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪಿಂಗಾರ ಸಿನಿಮಾದಲ್ಲಿ 1960- 2019ರ ವರೆಗಿನ ಕಾಲಘಟ್ಟವನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಕರಾವಳಿಯ ಭೂತಾರಾಧನೆ ಹಾಗೂ ಮೇಲು-ಕೀಳೆಂಬ ತಾರತಮ್ಯ ಮತ್ತು ಅನ್ಯಾಯ ಮಾಡಿದವರನ್ನು ದೈವ -ದೇವರು
ಶಿಕ್ಷಿಸುವ ಕಥಾನಕ ಹೊಂದಿರುವ ಸಿನಿಮಾದಲ್ಲಿ ಭೂತ ಪಾತ್ರಧಾರಿಗಳು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇಬ್ಬರು ಕಲಾವಿದರು
ಪಾತ್ರದ ಒಳಗೆ ಹೊಕ್ಕು ಅಭಿನಯಿಸಿದ್ದು, ಇದು ಸಿನಿಮಾದ ವೈಶಿಷ್ಟ್ಯ.
ಈ ಕುರಿತು ಭೂತದ ಪ್ರಧಾನ ಪಾತ್ರಧಾರಿ ಸುನಿಲ್ ನೆಲ್ಲಿಗುಡ್ಡೆ ಖುಷಿ ಹಂಚಿಕೊಂಡರು. ಮೊದಲ ಬಾರಿ ಕಲಾತ್ಮಕ ಸಿನಿಮಾದಲ್ಲಿ
ಅಭಿನಯಿಸುವ ಅವಕಾಶ ಸಿಕ್ಕಿತು. ಗಿರಿ ಗಿಟ್ ಸಿನಿಮಾದಲ್ಲಿ ನನ್ನ ನಟನೆ ನೋಡಿ ನಿರ್ದೇಶಕರು ನನ್ನನ್ನು ಕರೆದು ಪಾತ್ರ
ನೀಡಿದರು. ಕಥೆ ನೋಡಿ ತಕ್ಷಣ ಒಪ್ಪಿದೆ. ಅದರಲ್ಲಿ ಭೂತದ ಪಾತ್ರ. ಅದಕ್ಕಾಗಿ ಭೂತ ಕಟ್ಟುವ ನಲಿಕೆ ಯವರ ಬಳಿ ಹೋಗಿ ಮಾಹಿತಿ ಪಡೆದೆ. ಆ ಕಾಲದ ಆಡು ಭಾಷೆಯಲ್ಲಿ ಬಳಸುವ ಶಬ್ದಗಳನ್ನು ಕಲಿತೆ. ಪ್ರಶಸ್ತಿ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟೆಲ್ಲ ಮೌಲ್ಯ ಯುತ ಪ್ರಶಸ್ತಿ ಸಿಗಬಹುದು ಎಂದು ಎಣಿಸಿರಲಿಲ್ಲ ಎಂಬುದು ಸುನಿಲ್ ಹೃದಯಾಂತರಾಳದ
ಅನಿಸಿಕೆ.
ಕಲಾವಿದ ಪ್ರಶಾಂತ್ ಸಿ.ಕೆ. ಪ್ರತಿಕ್ರಿಯಿಸಿದ್ದು ಹೀಗೆ. ಎರಡು ತಲೆಮಾರಿನ ದೈವ ಕಟ್ಟುವವರ ಕಥೆ. ನನಗೆ ಭೂತ ಪಾತ್ರಧಾರಿ ಮಗನ ಪಾತ್ರ. ಪಾಳೇಗಾರಿಕೆ ವಿರುದ್ಧ ಭೂತ ಕಟ್ಟುವ ಸಮುದಾಯ ಸಿಡಿದು ನಿಲ್ಲುವ, ದೈವ ನ್ಯಾಯ ನೀಡುವ ಕಥಾ ಹಂದರ. ಇಲ್ಲಿ ಜಾನಪದ ಸೊಗಡನ್ನು ಅತ್ಯುತ್ತಮವಾಗಿ ತೋರಿಸಲಾಗಿದೆ. ಇಂಥ ಅದ್ಭುತ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿರುವುದು ನನ್ನ ಪಾಲಿನ ಹೆಮ್ಮೆ ಎಂದು ವಿಶ್ಲೇಷಿಸಿದರು.
ನಿರ್ಮಾಪಕ ಅವಿನಾಶ್ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದ ಕುರಿತು ಖುಷಿ ಹಂಚಿ ಕೊಂಡರು. 2019 ರಲ್ಲಿ ಪಿಂಗಾರ ಸಿನಿಮಾ ಮಾಡಿದೆ. ಪ್ರಶಸ್ತಿಗಳು ಬಂದಿವೆ. ಬಿಡುಗಡೆ ಮಾಡಲು ಪ್ಲ್ಯಾನ್ ಮಾಡ್ತಾ ಇದ್ದೇವೆ. 3 ಸಾವಿರ ಫಿಲಂ ಪೆಸ್ಟಿವಲ್ ಗಳಲ್ಲಿ ಪಿಂಗಾರ ಪ್ರದರ್ಶನ ಮತ್ತು ಸ್ಪರ್ಧೆ ಮಾಡಲಿದೆ.
ಕಳೆದ ವರ್ಷ ಮಸಣದ ಹೂ ಮಾಡಿದ್ದೇನೆ. ತುಳು- ಕನ್ನಡ ಕನ್ಯಾ ರಾಶಿ ಹಸ್ತಾ ನಕ್ಷತ್ರ ಮಾಡ್ತಾ ಇದ್ದೇನೆ ಎಂದರು. ಪಿಂಗಾರ ಸಿನಿಮಾ ಅತ್ಯುತ್ತಮ ಏಷಿಯನ್ ಸಿನಿಮಾ-ನೆಟ್ ಪ್ಯಾಕ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ನಿರ್ದೇಶನ ಆರ್. ಪ್ರಿತಮ್ ಶೆಟ್ಟಿ,
ನಿರ್ಮಾಣ ಅವಿನಾಶ್ ಯು ಶೆಟ್ಟಿ, ಮಂಜುನಾಥ್ ರೆಡ್ಡಿ, ಛಾಯಾಗ್ರಹಣ ವಿ ಪವನ್ ಕುಮಾರ್, ಕಲಾವಿದರು ನೀಮಾ ರೇ,
ಶರಣ್ ಶೆಟ್ಟಿ, ಉಷಾ ಭಂಡಾರಿ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ, ರಂಜಿತ್ ಸುವರ್ಣ, ಪ್ರಶಾಂತ್ ಸಿ. ಕೆ.