Saturday, 14th December 2024

ಗಣೇಶನಗರದಲ್ಲಿ ಗೌರಿಗೆ ಒಲಿದ ಗಂಗೆ

ನೀರಿಲ್ಲದೇ ಸೊರಗುತ್ತಿರುವ ತೋಟಕ್ಕೆ ಬಾವಿ ನಿರ್ಮಾಣ

ಯಾರ ಸಹಾಯವೂ ಇಲ್ಲದೇ ಬಾವಿ ತೋಡಿದ ವೀರ ಮಹಿಳೆ

ವಿಶೇಷ ವರದಿ: ವಿನುತಾ ಹೆಗಡೆ

ಶಿರಸಿ: ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ನಮ್ಮಲ್ಲಿಯ ಶಕ್ತಿ ನಮ್ಮನ್ನು ಗುರಿತಲುಪಿಸುತ್ತದೆ ಎನ್ನುವುದಕ್ಕೆ ಈ ಗೌರಿಯೇ ಸಾಕ್ಷಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶ ನಗರದ 52 ವರ್ಷದ ಗೌರಿ ನಾಯ್ಕ ಸಾಧನೆ ಅಸಾಧಾರಣ.

ಯಾರ ಸಹಾಯವೂ ಇಲ್ಲದೇ ಯಾರಿಗೂ ಹೇಳದೇ ತಾನೊಬ್ಬಳೇ ನಿಂತು ಒಂದಲ್ಲ, ಎರಡೆರಡು ಬಾವಿ ತೋಡಿ, ಗಂಗೆಯನ್ನು ಒಲಿಸಿಕೊಂಡಿದ್ದಾರೆ. ಬೇಸಿಗೆ ಸಮೀಪಿಸುತ್ತಿರುವಂತೆ ತೋಟಗಳಿಗೆ ನೀರಿರುವುದಿಲ್ಲ. ಆದರೆ ಅವರೇ ನೆಟ್ಟ ಗಿಡ, ಮರ ನೀರಿಲ್ಲದೇ
ಸಾಯುವುದನ್ನು ನೋಡಲಾರದ ಈ ಗೌರಿ ನಾಯ್ಕ ತಾನೇ ಯಾಕೆ ಒಂದು ಬಾವಿ ತೆಗೆಯಬಾರದು ಎಂದು ಆಲೋಚಿಸಿ ಬಾವಿ ತೋಡುವ ಕಾರ್ಯಕ್ಕೆ ಕೈ ಹಾಗಿದರು.

ಬರೋಬ್ಬರಿ 65 ಪೂಟಿನ ಬಾವಿ ತೆಗೆದಿದ್ದಾರೆ. ಯಾರ ಸಹಾಯವೂ ಇಲ್ಲದೇ ಕೇವಲ ಮೂರು ಬಕೆಟ್ ಹಾಗೂ ಒಂದು ಗುದ್ದಲಿ ಯಿಂದ ಒಂದು ತಿಂಗಳ ಪರಿಶ್ರಮದಿಂದ ಬಾವಿ ಅಗೆವ ಕಾರ್ಯ ಮುಗಿಸಿದ ನಂತರ ನೀರು ಕಂಡೊಡನೆ ಸಮಾಧಾನದ ನಿಟ್ಟುಸಿರು ಬಿಟ್ಟರು.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಇದೀಗ ಅವರ ತೋಟ ಹಸಿರಾಗಿದ್ದು, ತೋಟಕ್ಕೆ ಹೆಚ್ಚಾಗುವಷ್ಟು ಬಾವಿಯ ನೀರು ಉಕ್ಕಿದೆ. ನೀರು ಕಾಣುವವರೆಗೂ ಊಟ, ನಿದ್ದೆಯ ಪರಿವೇ ಇಲ್ಲದೇ ಬಾವಿ ತೆಗೆಯುವ ಸತತ ಕಾರ್ಯದಲ್ಲಿ ತನ್ನನ್ನು ತಾನು ಮರೆತ
ಗೌರಿಯನ್ನು ಸರಕಾರ ಗುರುತಿಸಿ ಕಿತ್ತೂರು ರಾಣಿ ಚೆನ್ನಮ್ಮ ವೀರ ಮಹಿಳೆ ಪ್ರಶಸ್ತಿಕೊಟ್ಟು ಗೌರವಿಸಿದೆ.

ಅವರು ಯಾವ ಪ್ರಶಸ್ತಿಗೂ, ಯಾರ ಸಹಾಯಕ್ಕೂ ಹಂಬಲಿಸಿದವರಲ್ಲ. ನಾನು ನೆಟ್ಟು ಬೆಳೆಸಿದ ಗಿಡ, ಮರ, ತೋಟ ಹಸಿರಾದರೆ ಸಾಕು. ಅದಕ್ಕೆ ನೀರುಣಿಸುವಂತಾದರೆ ಸಾಕೆಂದು ಹಗಲೂ ರಾತ್ರಿ ಬಾವಿ ತೋಡುವ ಕಾರ್ಯದಲ್ಲೇ ಎಚ್ಚರವಾಗಿದ್ದವರು. ಮನೆಯಲ್ಲಿ ಯಾರಿಗೂ ತಿಳಿಯದಂತೆ ಗುಡ್ಡದ ತೋಟದಲ್ಲಿ ಬಾವಿ ತೋಡುತ್ತಿದ್ದರು.

ಒಂದು ದಿನ ಮಗಳಿಗೆ ತಿಳಿದು ಅದೇನು ಮಾಡುತ್ತಿದ್ದೀಯಾ, ಅಲ್ಲೆಲ್ಲ ಬಾವಿ ತೆಗೆಯಬೇಡ ನೀರು ಬರುವುದಿಲ್ಲವೆಂದು ಮಗಳು
ಬೈದಿದ್ದರೂ, ಬಾವಿ ಮುಚ್ಚೆಂದರೂ ಸುಮ್ಮನೆ ನೋವನ್ನು ನುಂಗಿಕೊಂಡಿದ್ದ ಗೌರಿಗೆ ಆ ಮಾರನೆ ದಿನವೇ ನೀರು ಕಂಡಿದ್ದು, ಎಲ್ಲವೂ ತಾಯಿ ಮಾರಿಕಾಂಬೆಯ ದಯೆ ಎನ್ನುತ್ತಾರೆ.

ಹೆಣ್ಣುಮಕ್ಕಳಿಗೆ ಪ್ರೇರಕ: ಯಾರನ್ನೂ ಕೇಳದೆಯೇ, ನೀರಿನ ಸೆಲೆಯ ಬಗ್ಗೆ ತಿಳಿಯದೆಯೇ, ತಮ್ಮ ತೋಟದಲ್ಲಿ ಬಾವಿ ತೆಗೆದವರು ಗೌರಿ. ಅಂತೆಯೇ ತಮ್ಮ ಮಗಳ ಮನೆಯೂ ಸಮೀಪವಿರುವುದರಿಂದ ಮುಂದಿನ ದಿನದಲ್ಲಿ ಅವರಿಗೂ ಅನಾನುಕೂಲವಾಗ ದಿರಲೆಂದು ಅವರ ಮನೆಗೂ ಒಂದು ಬಾವಿಯನ್ನು ತೆಗೆದು ಪೂರ್ಣಗೊಳಿಸಿದ್ದಾರೆ.

ಯಾವ ಆಳು, ಕಾಳುಗಳಿಲ್ಲ. ಮೂರು ಬಕೇಟ್ ಮಾತ್ರ ಅವರ ಮಣ್ಣು ತೆಗೆಯುವ ಸಾಧನ. ಒಂದು ಗುದ್ದಲಿ ಮಾತ್ರ ಮಣ್ಣು ಅಗೆಯುವ ಆಯುಧ. ಇದಿಷ್ಟರ ಸಹಾಯದಿಂದ ಎರಡು ತಿಂಗಳಿಗೆ ಬಾವಿಯನ್ನೇ ನಿರ್ಮಿಸಿದ ಗೌರಿಯ ಸಾಧನೆ
ಅಸಾಮಾನ್ಯವೇ ಸರಿ. ಇವರ ಕಾಯಕ ಇಡೀ ರಾಜ್ಯದ ಹೆಣ್ಣುಮಕ್ಕಳಿಗೆ ಪ್ರೇರಕ.

***

ನಾನು ಅಡಕೆ ಗಿಡ ನೆಟ್ಟಿದ್ದು, ಮೂರುವರ್ಷಕ್ಕೆ ಗಿಡವೆಲ್ಲ ನೀರಿಲ್ಲದೇ ಒಣಗಿದ್ದನ್ನು ನೋಡಿದ್ದೆ. ಹೆಚ್ಚು ಬಾವಿ ತೆಗೆಯಬಾರದು
ಅಂದುಕೊಂಡು ಬಾವಿ ತೋಡಲು ಆರಂಭಿಸಿದೆ. ನಾನು ಬಾವಿ ತೋಡುವುದು, ತೋಟದಲ್ಲಿ ಇಡೀದಿನ ಕೆಲಸ ಮಾಡುವುದು
ನನ್ನ ಮಕ್ಕಳಿಗೆ ಇಷ್ಟವಿರಲಿಲ್ಲ. ಆದರೂ ನನಗೆ ತೋಟಕ್ಕೆ ನೀರು ಹಾಯಿಸಬೇಕೆಂಬ ಛಲದಿಂದ ಬಾವಿ ತೋಡಿದೆ. ಇದೀಗ
ಹಸಿರಾದ ತೋಟ ನೋಡಿ ಸಮಾಧಾನವಾಗಿದೆ. ಮಾರಿಕಾಂಬೆ ದೇವಿಯ ಆಶೀರ್ವಾದದಿಂದ ಇಂತಹ ಗುಡ್ಡದಲ್ಲಿ ಗಂಗೆ ಬಂದಿದ್ದು ತುಂಬಾ ಸಂತಸವಾಗಿದೆ. ಸರಕಾರ ನೀಡಿದ ವೀರ ಮಹಿಳಾ ಪ್ರಶಸ್ತಿಗೆ ನಾನು ಆಭಾರಿಯಾಗಿದ್ದೇನೆ.
-ಗೌರಿ ನಾಯ್ಕ ವೀರ ಮಹಿಳೆ