Wednesday, 11th December 2024

Good News: ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಸಡಿಲಿಕೆ

vidhana soudha good news

ಬೆಂಗಳೂರು: ರಾಜ್ಯದ ಸಿವಿಲ್ ಸೇವೆಗಳಲ್ಲಿನ (Civil Services) ಗ್ರೂಪ್- ಬಿ ಮತ್ತು ಗ್ರೂಪ್- ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ವಯೋಮಿತಿ ಸಡಿಲಿಕೆಗೆ ರಾಜ್ಯ ಸರ್ಕಾರ (good news) ನಿರ್ಧರಿಸಿದೆ. ಅರ್ಜಿ ಸಲ್ಲಿಕೆಯ ಗರಿಷ್ಠ ವಯೋಮಿತಿಯನ್ನು (Age limit) ಒಂದು ಬಾರಿಗೆ ಸೀಮಿತವಾಗಿ ಮೂರು ವರ್ಷದಷ್ಟು ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ (cabinet meeting) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದರು. ರಾಜ್ಯದ ಸಿವಿಲ್ ಸೇವೆಗಳಲ್ಲಿನ ಗ್ರೂಪ್- ಬಿ ಮತ್ತು ಗ್ರೂಪ್- ಸಿ ಹುದ್ದೆಗಳಿಗೆ ಪ್ರಸ್ತುತ ಸಾಮಾನ್ಯ ವರ್ಗಕ್ಕೆ 35 ವರ್ಷ, ಪ್ರವರ್ಗ 2ಎ, 2ಬಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ಕ್ಕೆ 40 ವರ್ಷ ಗರಿಷ್ಠ ವಯೋಮಿತಿ ಇದ್ದು, ಇದೀಗ 1 ವರ್ಷಕ್ಕೆ ಸೀಮಿತವಾಗಿ ವಯೋಮಿತಿ ಸಡಿಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹದಾಯಿ ಕುಡಿಯುವ ನೀರು ಯೋಜನೆ ವಿಚಾರವಾಗಿ ವನ್ಯಜೀವಿ ಮಂಡಳಿ ನಡೆಯ ವಿರುದ್ಧ ದೂರು ನೀಡಲಾಗುತ್ತದೆ. ಸುಪ್ರೀಂ ಮೆಟ್ಟಿಲೇರಲು ರಾಜ್ಯ ನಿರ್ಧರಿಸಿದೆ. ಸರ್ವಪಕ್ಷ ನಿಯೋಗ ಒಯ್ಯುವ ಬಗ್ಗೆ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಇದು ಕಂಟೆಂಪ್ಟ್ ಆಫ್ ಕೋರ್ಟ್ ಎಂದು ಹೇಳಿಕೆ ನೀಡಿದ್ದರು. ಆದರೆ ಅದು ಅವರ ತಪ್ಪು ಗ್ರಹಿಕೆ. ಇಲ್ಲಿ ಕೋರ್ಟ್ ಕಂಟೆಂಪ್ಟ್‌ ಆಗಿಲ್ಲ ಎಂದರು.

ಕೋವಿಡ್ ಹಗರಣದ ವರದಿ ಬಗ್ಗೆ ಚರ್ಚೆ ನಡೆಸಲಾಯಿತು. ನೂರಾರು ಕೋಟಿ ಅವ್ಯವಹಾರದ ಬಗ್ಗೆ ಪ್ರಸ್ತಾಪವಾಗಿದೆ. ಜಸ್ಟೀಸ್ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹಲವು ಮಿಸ್ಸಿಂಗ್ ಫೈಲ್ಸ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಪಬ್ಲಿಕ್ ಅಕೌಂಟ್ ಕೊಟ್ಟ ವರದಿಯನ್ನು ಉಲ್ಲೇ ಖಿಸಿದೆ. ವಿವರವಾದ ವರದಿ ಬಂದ
ನಂತರ ಕ್ರಮ ಕೈಗೊಳ್ಳಲಾಗುತ್ತದೆ. ವರದಿ ಪರಿಶೀಲನೆಗೆ ಹಿರಿಯ ಅಧಿಕಾರಿಗಳಿಗೆ ಹೊಣೆ ನೀಡಲಾಗಿದೆ. ತಿಂಗಳೊಳಗೆ ಪರಿಶೀಲಿಸಿ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.

ಅತೀಕ್ ಸೇರಿ ಇಬ್ಬರು ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತಿದೆ. ಪರಿಶೀಲಿಸಿ ಕ್ರಮದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ನಿರ್ದಿಷ್ಟ ವ್ಯಕ್ತಿಯ ಬಗ್ಗೆ ನಮಗೆ ಗೊತ್ತಿಲ್ಲ. ವರದಿಯನ್ನು ನಾನು ಪರಿಶೀಲಿಸಿಲ್ಲ. ಆದರೆ ನೂರಾರು ಕೋಟಿ ದುರ್ವ್ಯವಹಾರ ಆಗಿರುವ ಬಗ್ಗೆ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಜನತೆಗೆ ಆಸ್ತಿ ತೆರಿಗೆ ಪಾವತಿಸಲು ಇದ್ದ ಸಮಯದ ಗಡುವನ್ನು ದಿನಾಂಕ 30-11-2024ರವರೆಗೆ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಪೆರಿಫೆರಲ್ ರಸ್ತೆಗೆ ಬಂಡವಾಳ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಕ್ಕೆ ಸಮ್ಮತಿ ನೀಡಲಾಗಿದೆ ಎಂದು ಹೇಳಿದರು.

ಕಾರ್ಕಳದಲ್ಲಿ ಟೆಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. 27.29 ಲಕ್ಷದಲ್ಲಿ ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದೆ. ಉದಯೋನ್ಮುಖ ತಂತ್ರಜ್ಞಾನ ತರಬೇತಿ ನೀಡಲಾಗುತ್ತದೆ. ನಿಪುಣ ಕರ್ನಾಟಕ ಕಾರ್ಯಯೋಜನೆಗೆ ಒಪ್ಪಿಗೆ ನೀಡಲಾಗಿದೆ. 100 ಕೋಟಿ ಅನುದಾನದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಸ್ಥಳೀಯ ಉದ್ಯೋಗಾವಕಾಶ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಜೈವಿಕ ತಂತ್ರಜ್ಞಾನ ನೀತಿ 2024-29ಗೆ ಅನುಮೋದನೆ ನೀಡಲಾಗಿದೆ. ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 18.54 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಅನ್ನ ಭಾಗ್ಯ ಯೋಜನೆ ಯಥಾಸ್ಥಿತಿ ಮುಂದುವರಿಸಲಾಗುತ್ತಿದೆ. ಡಿಬಿಟಿ ವ್ಯವಸ್ಥೆ ಮುಂದುವರಿಕೆಗೆ ಒಪ್ಪಿಗೆ ನೀಡಲಾಗಿದೆ. ಸಂಪುಟದ ಮುಂದೆ ಮೂರು ಪ್ರಸ್ತಾವನೆ ಬಂದಿದ್ದವು. ಅದರಲ್ಲಿ ಫುಡ್ ಕಿಟ್ ನೀಡುವ ಪ್ರಸ್ತಾಪವಿತ್ತು . ಅರ್ಧ ಕೆಜಿ ತೊಗರಿ, ಎಣ್ಣೆ , ಸಕ್ಕರೆ ಕೊಡುವ ಪ್ರಸ್ತಾವನೆ ಇತ್ತು . ಆದರೆ ಅದನ್ನ ಕೈಬಿಡಲಾಗಿದೆ. ಯಥಾಸ್ಥಿತಿ 170 ರೂ. ಹಣ ವಿತರಣೆ ಮುಂದುವರಿಕೆ ಮಾಡಲಾಗುತ್ತಿದೆ ಎಂದರು.

59 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯಕ್ಕೆ ಒಪ್ಪಿಗೆ ನೀಡಲಾಗುತ್ತಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ನೀಡಲಾಗುತ್ತಿದೆ. ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಮಿಕ ನೋಂದಣಿ ಶುಲ್ಕ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ಶೇ.35ರಷ್ಟು ಏರಿಕೆಗೆ ಸರ್ಕಾರದ ತೀರ್ಮಾನ ಕೈಗೊಂಡಿದೆ. ನ್ಯಾಯಾಂಗ ನೇಮಕಾತಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದೆ. ಕಿದ್ವಾಯಿ ಗ್ರಂಥಿ ಸಂಸ್ಥೆಗೆ 70 ಕೋಟಿ ವೆಚ್ಚದಲ್ಲಿ ಉಪಕರಣ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಮೈಸೂರಿನ ನೆಪ್ರೋ ಆಸ್ಪತ್ರೆ ಮೇಲ್ದರ್ಜೆಗೇರಿಕೆಗಾಗಿ 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿಯಲ್ಲಿ ಮಕ್ಕಳ ಆರೋಗ್ಯ ಘಟಕ ನಿರ್ಮಿಸಲು 221 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ನೆಪ್ರೋ ಸಂಸ್ಥೆಗೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನೋಂದಣಿ ಮುದ್ರಾಂಕ ಇಲಾಖೆ ವರ್ಗಾವಣೆಗೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.

32 ವಾಹನ ಚಾಲನಾ ಪರೀಕ್ಷಾ ಕೇಂದ್ರ ಸ್ಥಾಪನೆಯನ್ನು ರಾಜ್ಯದ 32 ಕಡೆಗಳಲ್ಲಿ ಸ್ಥಾಪನೆಗೆ ಅನುದಾನ ಕಲ್ಪಿಸಲಾಗುತ್ತಿದೆ. 15 ವರ್ಷಗಳ ಹಳೆಯ ವಾಹನ ನಾಶಕ್ಕೆ ಅವಕಾಶ ನೀಡಲಾಗಿದೆ. ದಂಡ ಶುಲ್ಕವಿಲ್ಲದೆ ನಾಶಪಡಿಸಲು ಸಮಯ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವರ್ಷದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಸಾರಿಗೆ ಆಯುಕ್ತರ ಸ್ವಂತ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ಅಂದಾಜು ಮೊತ್ತಕ್ಕೆ ಸಮ್ಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 50:50 ಮಾದರಿ ವಸತಿ ನಿವೇಶನಕ್ಕಾಗಿ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮಹದಾಯಿ ಪ್ರಾಧಿಕಾರ ಯೋಜನೆಗೆ 1.67 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. ಬೈಲಹೊಂಗಲ ಏತ ನೀರಾವರಿಗೆ 149 ಕೋಟಿ ಅನುದಾನ ಒದಗಿಸಲಾಗಿದೆ. ವಿಧಾನಮಂಡಲ ಅನರ್ಹತಾ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ ಎಂದು ವಿವರ ನೀಡಿದರು.

ಈ ಸುದ್ದಿ ಓದಿ: BBMP property Tax: ಬೆಂಗಳೂರಿಗರಿಗೆ ಗುಡ್ ನ್ಯೂಸ್, ಆಸ್ತಿ ತೆರಿಗೆ ಪಾವತಿ ಸಮಯ ವಿಸ್ತರಣೆ