Wednesday, 11th December 2024

Dinesh Gundurao: ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಂ ಅಭಿವೃದ್ಧಿಪಡಿಸಲು ಕಾರ್ಯತಂತ್ರ

Dinesh Gundurao

ಬೆಂಗಳೂರು: ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿಗೆ (Bengaluru) ಜನರು ಬರುತ್ತಾರೆ. ಇಲ್ಲಿಗೆ ಬರುವ ಜನರಿಗೆ ಇಲ್ಲಿಯ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು ಹಾಗೂ ಚಿಕಿತ್ಸೆ ಬಗ್ಗೆ ಒಂದು ಭರವಸೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ (Health Department) ಖಾಸಗಿ ಆಸ್ಪತ್ರೆಗಳ (Private Hospitals) ಗುಣಮಟ್ಟದ ಚಿಕಿತ್ಸೆ ಕುರಿತು ಸರ್ಕಾರ ಸರ್ಟಿಫೈ ಮಾಡುವ ಕ್ರಮಗಳು ಆಗಬೇಕಿದೆ. ಸರ್ಕಾರದಿಂದ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಾಗ ಜನರಿಗೆ ವಿಶ್ವಾಸ ಮೂಡಲಿದೆ. ಇದರಿಂದ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಂ (Health Tourism) ಬೆಳೆಯುವುದರ ಜತೆಗೆ, ಐಟಿ ಸಿಟಿ ಬೆಂಗಳೂರು, ಹೆಲ್ತ್ ಸಿಟಿಯಾಗಿಯೂ ಹೆಸರು ಗಳಿಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದರು.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಸಚಿವರು, ಹೆಲ್ತ್ ಟೂರಿಸಂ ಬೆಳೆಸಲು ಸರ್ಕಾರದಿಂದ ಆಗಬೇಕಾಗಿರುವ ಕಾರ್ಯಗಳ ಕುರಿತು ಖಾಸಗಿ ವಲಯದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಸಚಿವರು ಮಾತನಾಡಿದರು.

ಕೆಲವು ಗುಣಮಟ್ಟದ ಚಿಕಿತ್ಸೆಗಳನ್ನು ಪಡೆಯಲು ಮಾತ್ರ ಜನರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಇಂದು ವಿದೇಶಗಳಲ್ಲಿ ತಜ್ಞ ವೈದ್ಯರ ಸಮಯಕ್ಕಾಗಿ ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಂ ಮೂಲಕ ವಿದೇಶಿಗರನ್ನು ಹೆಚ್ಚು ಆಕರ್ಷಿಸಬಹುದು. ಅಲ್ಲದೇ ಆರೋಗ್ಯ ಸೇವೆಗಳಿಗೆ ಬೆಂಗಳೂರಿಗೆ ಬರುವ ಜನರು ರಾಜ್ಯದ ಇತರ ಪ್ರವಾಸ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Gruha Lakshmi Scheme: ಗೃಹ ಲಕ್ಷ್ಮಿ ಹಣದಿಂದ B.Ed ಶುಲ್ಕ ಕಟ್ಟಿದ ವಿದ್ಯಾರ್ಥಿ; ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ ಸಿಎಂ

ಸರ್ಕಾರವೇ ಸರ್ಟಿಫೈ ಮಾಡಲಿ

ಸಭೆಯಲ್ಲಿ ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಾಯ, ಅಪೋಲೋ ಹೆಲ್ತ್ ಕೇರ್ ಸೇರಿದಂತೆ 50 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸರ್ಕಾರದ ವತಿಯಿಂದ ಅಧಿಕೃತ ಪೊರ್ಟಲ್ ಒಂದನ್ನು ರಚಿಸಿ, ಆ ಮೂಲಕ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆಗಳ ಕುರಿತು ಸರ್ಕಾರವೇ ಕ್ರೆಡಿಟ್ ಪಾಯಿಂಟ್ಸ್‌ಗಳನ್ನು ನೀಡಬಹುದು ಎಂದು ಸಭೆಯಲ್ಲಿ ಹಲವು ಖಾಸಗಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿ ಚಿಕಿತ್ಸೆಗಳಿಗೆ ಎಷ್ಟು ದರ, ಹಾಗೂ ಗುಣಮಟ್ಟದ ಬಗ್ಗೆ ಸರ್ಕಾರವೇ ಸರ್ಟಿಫೈ ಮಾಡಲಿ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಹೆಲ್ತ್ ಟೂರಿಸಮ್ ಬಗ್ಗೆ ಮೊದಲ ಸುತ್ತಿನ ಸಭೆ ನಡೆಸಲಾಗುತ್ತೆ. ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಲಿ. ಮತ್ತೊಮ್ಮೆ ಸಭೆ ಸೇರಿ ನಿರ್ಣಗಳನ್ನು ಕೈಗೊಳ್ಳೋಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿದ್ದ ಆಹ್ವಾನಿತರಿಗೆ ಭರವಸೆ ನೀಡಿದರು.