Tuesday, 10th December 2024

Govt Employees: ರಾಜ್ಯ ಸರ್ಕಾರಿ ನೌಕರರ ಭತ್ಯೆ ಮರುಪಾವತಿ ಕುರಿತು ಸರ್ಕಾರ ಮಹತ್ವದ ಆದೇಶ

KAS Officers Transfer

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (Govt Employees) ತಪ್ಪಾಗಿ, ಹೆಚ್ಚುವರಿ ಅಥವಾ ಕಡಿಮೆಯಾಗಿ ಪಾವತಿಸಲಾದ ವಿವಿಧ ಭತ್ಯೆಗಳನ್ನು ಸರಿಪಡಿಸಿ ಮರುಪಾವತಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಎಚ್‌ಆರ್‌ಎಂಎಸ್‌ 2.0 ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದು, ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ, ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 2019ರ ಜ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಶೀಘ್ರ ಲಿಪಿಗಾರರು, ಹಿರಿಯ ಶೀಘ್ರ ಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗುವುದಿಲ್ಲ. ಆದರೂ ಸಚಿವರು, ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯುಕ್ತಿಗೊಳಿಸಲಾಗಿರುವ ಶೀಘ್ರ ಲಿಪಿಗಾರರು, ಹಿರಿಯ ಶೀಘ್ರ ಲಿಪಿಗಾರರು ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರಿಗೆ ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜತೆಗೆ ಅವರು ಹೊಂದಿರುವ ಹುದ್ದೆಗಳ ವಿಶೇಷ ಭತ್ಯೆಯನ್ನು ನೀಡಬಹುದಾಗಿದೆ.

ಎಚ್‌ಆರ್‌ಎಂಎಸ್ 2.0 ನ Arrears Module Database ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತದೆ.

ವಿವಿಧ ವೃಂದ, ಹುದ್ದೆಗಳಿಗೆ ಭತ್ಯೆಗಳು ಅನ್ವಯಿಸದಿದ್ದರೂ ಭತ್ಯೆಗಳನ್ನು ಸೆಳೆಯಲಾಗಿದೆ.
ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗಿದೆ.
ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲ್ಲಿ ಭತ್ಯೆಗಳನ್ನು ಸೆಳೆಯಲಾಗಿದೆ.
ವೃಂದ ಬದಲಾವಣೆಯಾದಾಗ ಹಾಗೂ ಮರುನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗಿದೆ.
ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ, ಒಂದಕ್ಕಿಂತ ಹೆಚ್ಚಿನ ಭಕ್ತಿಗಳನ್ನು ಸೆಳೆಯಲಾಗಿದೆ.

ಆದ್ದರಿಂದ, ಇಲಾಖಾ ಹಂತದಲ್ಲಿ ತುರ್ತಾಗಿ ಸೆಳೆಯಲಾಗುತ್ತಿರುವ ಭತ್ಯೆಗಳನ್ನು ಪರಿಶೀಲಿಸಿ, ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ, ಎಚ್‌ಆರ್‌ಎಂಎಸ್ 2.0 ತಂತ್ರಾಂಶದಲ್ಲಿ ಅಳವಡಿಸಲು ಆದೇಶ ಪ್ರತಿಗಳನ್ನು ಸಲ್ಲಿಸಬೇಕು. ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು, ಭತ್ಯೆಗಳ ವರ್ಗೀಕರಣ ಸರಿಪಡಿಸುವುದು, ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸುವುದು ಇದು ಅತಿ ಅವಶ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Belekeri iron ore scam: ಬೇಲೆಕೇರಿ ಅದಿರು ನಾಪತ್ತೆ ಕೇಸ್‌; ಶಾಸಕ ಸತೀಶ್‌ ಸೈಲ್‌ಗೆ ಬಿಗ್‌ ರಿಲೀಫ್‌, ಶಿಕ್ಷೆ ಅಮಾನತಿನಲ್ಲಿಟ್ಟ ಹೈಕೋರ್ಟ್

ಇನ್ನು ಶೀಘ್ರದಲ್ಲೆ ಎಚ್‌ಆರ್‌ಎಂಎಸ್‌ 2.0 Payroll module ನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ತಿಂಗಳ ವೇತನವನ್ನು 10 ಪೈಲಟ್ ಇಲಾಖೆಗಳನ್ನು ಎಚ್‌ಆರ್‌ಎಂಎಸ್ 2.0 ನಲ್ಲೆ ತಯಾರಿಸಿ, ಖಜಾನೆ-2 ಗೆ ಸಲ್ಲಿಸಲಾಗುತ್ತಿದೆ. ಮುಂದುವರಿದು, ಇನ್ನು ಮುಂದಿನ ತಿಂಗಳುಗಳಲ್ಲಿ ಎಲ್ಲಾ ಇಲಾಖೆಗಳು ಎಚ್‌ಆರ್‌ಎಂಎಸ್ 2.0 ನಲ್ಲಿ ವೇತನ ಸೆಳೆಯುವುದರಿಂದ, ಯಾವುದೇ ಆಧಾರವಿಲ್ಲದ ಭತ್ಯೆಗಳನ್ನು ಸೆಳೆಯಲು ಎಚ್‌ಆರ್‌ಎಂಎಸ್ 2.0 ಬಿಡುವುದಿಲ್ಲ. ಆದುದರಿಂದ ಈ ಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ, ಡಿಡಿಒಗಳಿಗೆ ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ಜರೂರಾಗಿ ಪರಿಶೀಲಿಸಿ, ಎಚ್‌ಆ‌ರ್‌ಎಂಎಸ್ 2.0 ನಲ್ಲಿ ಸೇರಿಸಲು ಸೂಕ್ತ ಮಾಹಿತಿಯೊಡನೆ ಸಲ್ಲಿಸಲು ತಿಳಿಸಿದೆ. ಯಾವುದೇ ವಿಶೇಷ ಭತ್ಯೆಗಳು ಆಧಾರವಿಲ್ಲದೆ ಲಭ್ಯಪಡಿಸಲಾಗುವುದಿಲ್ಲಾ ಎಂದು ಈ ಮೂಲಕ ತಿಳಿಸಿ, ಸೂಕ್ತ ನಿರ್ದೇಶನವನ್ನು ತಮ್ಮ ಎಲ್ಲಾ ಡಿಡಿಒಗಳಿಗೆ ನೀಡಲು ಕೋರಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.