Friday, 13th December 2024

Green Cess: ಪಶ್ಚಿಮ ಘಟ್ಟಗಳ ನದಿ ನೀರು ಕುಡೀತಿದೀರಾ? ಹಸಿರು ಸೆಸ್ ಕಟ್ಟಿ!

Kasturirangan Report

ಬೆಂಗಳೂರು : ಜೀವವೈವಿಧ್ಯತೆಯ ತಾಣ ಪಶ್ಚಿಮಘಟ್ಟ (Western Ghats) ಹಲವು ನದಿಗಳ (River water) ಮೂಲವಾಗಿದ್ದು, ಈ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ (Green Cess) ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸೂಚಿಸಿದ್ದಾರೆ.

ಪಶ್ಚಿಮಘಟ್ಟಗಳು ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್ ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪು ನಿಧಿ ಸ್ಥಾಪಿಸಿದರೆ, ಈ ಹಣವನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಈ ಹಣ ಬಳಸಬಹುದು, ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ವೀರಶೈವ ಲಿಂಗಾಯತ,ಒಳಪಂಗಡವನ್ನು ಒಬಿಸಿ ಸೇರಿಸಿ : ಈಶ್ವರ ಖಂಡ್ರೆ