Wednesday, 11th December 2024

Gruhalakshmi Scheme: ಶೀಘ್ರವೇ ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Gruha Lakshmi Scheme

ಚಿತ್ರದುರ್ಗ : ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 ಸಾವಿರ ಕೋಟಿ ರೂ ಮೊತ್ತವನ್ನು ಯೋಜನೆಗೆ ವ್ಯಯಿಸಲಾಗಿದೆ ಎಂದರು.

ಬಿಜೆಪಿಗರ ಕುತಂತ್ರಕ್ಕೆ ಶೀಘ್ರವೇ ಉತ್ತರ

ಕರ್ನಾಟಕದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸ್ಥಿರವಾದ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಬಿಜೆಪಿ ನಾಯಕರ ಉದ್ದೇಶ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಏನೆಲ್ಲಾ ಸರ್ಕಸ್ ನಡೆಸುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದರು.

ಕೋವಿಡ್ ಕಾಲದ ಭ್ರಷ್ಟಾಚಾರ ಬಯಲು

ಕೋವಿಡ್ ವೇಳೆ ಬಿಜೆಪಿ ಸಚಿವರು ಮಾಡಿದ್ದ ಭ್ರಷ್ಟಾಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮಾಸ್ಕ್, ಆಕ್ಸಿಜನ್, ಬೆಡ್ ಖರೀದಿ ಇನ್ನಿತರ ಪರಿಕರಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ ಕೋವಿಡ್ ಕಾಲದ ಭ್ರಷ್ಟಾಚಾರ ಕುರಿತು ರಚಿಸಲಾಗಿದ್ದ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ಕುರಿತು ಶೀಘ್ರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿ

ಕಾಂಗ್ರೆಸ್ ನಾಯಕರು ಬೆಲೆ ನಿಗದಿ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಬಿ.ಸಿ.ಪಾಟೀಲರು ತಮ್ಮನ್ನು ತಾವೇ ಮಾರಿಕೊಂಡು ಬಿಜೆಪಿಗೆ ಹೋದವರು. ಇಂದು ಅವರಿಗೆ ತಮ್ಮ ಬೆಲೆ ಎಷ್ಟು ಎಂದು ಗೊತ್ತಾಗಿದೆ. ಇಂದು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ. ಬಿ.ಸಿ.ಪಾಟೀಲರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.

ನಮ್ಮದು ಸ್ಥಿರ ಹಾಗೂ ಜನಪರ ಸರ್ಕಾರ, ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷಗಳು ಇದೀಗ ಕಿಚಡಿ ಮೈತ್ರಿ ಮಾಡಿಕೊಂಡಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟೀಕಿಸಿದರು.

ಗೃಹಲಕ್ಷ್ಮೀಯರಿಗೆ ಸಂತಸದ ಸುದ್ದಿ; ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ!

ಬೆಂಗಳೂರು: ರಾಜ್ಯದ ಕುಟುಂಬದ ಯಜಮಾನಿಯರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿಗಳಾದ ಯಜಮಾನಿಯರು ರೀಲ್ಸ್ ಮಾಡಿ ಬಹುಮಾನ ಗೆಲ್ಲಲು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅತ್ಯುತ್ತಮ ಅವಕಾಶ ಕಲ್ಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯು ಜಾರಿಗೆ ಬಂದು ಇಲ್ಲಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲ ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶುಭಾಶಯ ಮತ್ತು ಅಭಿನಂದನೆ ಸಲ್ಲಿಸಿದ್ದು, ಜತೆಗೆ ಯಜಮಾನಿಯರಿಗೆ ಒಂದು ಬಹುಮಾನವನ್ನೂ ಘೋಷಿಸಿದ್ದಾರೆ.

ಇಲ್ಲಿಯವರೆಗೆ ಗೃಹಲಕ್ಷ್ಮೀ ಫಲಾನುಭವಿಗಳಾದ ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಯನ್ನು ಈ ಒಂದು ವರ್ಷದಲ್ಲಿ ತಂದಿದೆ ಎನ್ನುವುದನ್ನು ಯಜಮಾನಿಯರು ಹಂಚಿಕೊಳ್ಳಲು ಸಚಿವರು ಕೋರಿದ್ದಾರೆ.

https://fb.watch/ukcBV0uuOr/

ರೀಲ್ಸ್ ಮಾಡಿ
ಸಾಮಾಜಿಕ ಜಾಲ ಜಾಲತಾಣಗಳಾದ ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್‌ಗಳಲ್ಲಿ ರೀಲ್ಸ್‌ ಅನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.

ಯಾವ ಯಜಮಾನಿಯರು ಮಾಡಿದ ರೀಲ್ಸ್‌ಗೆ ಹೆಚ್ಚು ವೀವ್ಸ್‌ ಬಂದಿದೆಯೋ ಅಂತಹ ಯಜಮಾನಿಯರಿಗೆ ಒಂದು ಬಹುಮಾನ ಘೋಷಿಸಿದ್ದಾರೆ. ಇಲ್ಲಿಂದ ಒಂದು ತಿಂಗಳು ಅಂದರೆ ಸೆಪ್ಟೆಂಬರ್ 30ನೇ ತಾರೀಖಿನವರೆಗೆ ಯಜಮಾನಿಯರು ತಮ್ಮ ರೀಲ್ಸ್ ಗಳನ್ನು ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಳ್ಳಬೇಕಿದೆ. ಜಾಸ್ತಿ ವೀವ್ಸ್ ಸಿಕ್ಕಿದ ಯಜಮಾನಿಯರಿಗೆ ಸಚಿವರು ವೈಯಕ್ತಿಕವಾಗಿ ಒಂದು ಬಹುಮಾನವನ್ನು ನೀಡಲಿದ್ದಾರೆ.

ಮೊದಲ 50 ಯಜಮಾನಿಯರ ರೀಲ್ಸ್ ಹಾದಿಯನ್ನು ಎದುರು ನೋಡುತ್ತಿದ್ದೇನೆ; ಈ ಒಂದು ಗೃಹಲಕ್ಷ್ಮೀ ಯೋಜನೆಯಿಂದ ಜೀವನದಲ್ಲಿ ಆದ ಬದಲಾವಣೆಯನ್ನು ನಮ್ಮೆಲ್ಲ ಕರ್ನಾಟಕದ ಜನರ ಮುಂದೆ ಹಂಚಿಕೊಳ್ಳಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮೀ ಯೋಜನೆಯ ಎಲ್ಲ ಯಜಮಾನಿಯರಲ್ಲಿ ಮನವಿ ಮಾಡಿದ್ದಾರೆ.