Friday, 13th December 2024

H D Kumaraswamy: ಚನ್ನಪಟ್ಟಣ ಉಪ ಚುನಾವಣೆ; ಬಿಜೆಪಿ ನಾಯಕರೊಂದಿಗೆ ಎಚ್‌.ಡಿ. ಕುಮಾರಸ್ವಾಮಿ ಬಿರುಸಿನ ಪ್ರಚಾರ

H D Kumaraswamy

ಚನ್ನಪಟ್ಟಣ/ರಾಮನಗರ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ಬಿಜೆಪಿ ನಾಯಕರೊಂದಿಗೆ ವಿವಿಧ ಹಳ್ಳಿಹಳ್ಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ರಾಜ್ಯ ಬಿಜೆಪಿ ವರಿಷ್ಠ ನಾಯಕರ ಜತೆಯಲ್ಲಿ ಕೂಡ್ಲೂರು, ಮಳೂರು ಪಟ್ಟಣ ಹಾಗೂ ಚೆಕ್ಕರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಚಿವರು ವಿಸ್ತೃತ ಪ್ರಚಾರ ಮಾಡಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಸೇರಿದಂತೆ ಅನೇಕ ನಾಯಕರ ಜತೆಯಲ್ಲಿ ಕೇಂದ್ರ ಸಚಿವರು ಪ್ರಚಾರ ನಡೆಸಿದರು.

ಮೊದಲು ಹೊಟ್ಟಿನ ಹೊಸಹಳ್ಳಿಯಿಂದ ಪ್ರಚಾರ ಅರಭಿಸಿದ ಸಚಿವರನ್ನು ಚೆಕ್ಕರೆ ಗ್ರಾಮದಲ್ಲಿ ಸೇರಿಕೊಂಡ ಬಿಜೆಪಿ ನಾಯಕರು ಬಿರುಸಿನ ಪ್ರಚಾರಕ್ಕೆ ಸಾಥ್ ನೀಡಿದರು. ಪ್ರಚಾರ ವಾಹನದ ಮೇಲೆ ಭಾಷಣ ಮಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ಕಮಲದ ಹೂಗಳ ಗುಚ್ಛ ನೀಡಿ, ಅಶೋಕ್‌ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಭಿನಂದಿಸಿದರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಾಯಕರಿಗೆ ಬೃಹತ್ ಹೂವಿನ ಹಾರ ಹಾಕಿ ಬರಮಾಡಿಕೊಂಡು ಸ್ವಾಗತಿಸಿದರು.

ಬಳಿಕ ಚೆಕ್ಕೆರೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ ನಾಯಕರು, ಮನೆಮನೆಗೂ ತೆರಳಿ ಮತ ಯಾಚನೆ ಮಾಡಿದರು. ಮಿಣಕೆರೆ ದೊಡ್ಡಿ, ಗಂಗೇದೊಡ್ಡಿ, ಗೋವಿಂದಹಳ್ಳಿ, ಕೂರಣಗೆರೆ, ಕುಕ್ಕೂರು ದೊಡ್ಡಿ, ಕುಕ್ಕೂರು, ತೂಬಿನಕೆರೆ, ಮಳೂರುಪಟ್ಟಣ, ಮಾಳಗಾಳು, ಎಸ್ ಎಂ ಹಳ್ಳಿ, ಎಸ್ ಎಂ ದೊಡ್ಡಿ, ಕೂಡ್ಲೂರು, ಶ್ರೀರಾಂಪುರ ಮತ್ತು ವಾಲೇತೋಪು ಗ್ರಾಮಗಳಲ್ಲಿ ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದರು.

ಆರತಿ ಬೆಳಗಿ ಸ್ವಾಗತಿಸಿದ ಮಹಿಳೆಯರು

ಕೇಂದ್ರ ಸಚಿವರು ಭೇಟಿ ನೀಡಿದ ಕಡೆಯೆಲ್ಲಾ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಅಲ್ಲದೆ, ಸಚಿವರು ಹಾಗೂ ಎಲ್ಲರ ಮೇಲೆ ಪುಷ್ಪವೃಷ್ಟಿಗರೆದರು. ದಾರಿಯುದ್ದಕ್ಕೂ ರೈತರು ಸಚಿವರಿಗೆ ಎಳೆನೀರು, ತಂಪು ಪಾನೀಯ ನೀಡಿ ಉಪಚರಿಸಿದರು. ವಿಶೇಷವಾಗಿ ಮಹಿಳೆಯರು, ಮಕ್ಕಳು, ಯುವಜನರು ಜತೆ ಸೆಲ್ಫಿಗೆ ಸಚಿವರು ಪೋಸು ಕೊಟ್ಟರು. ಪ್ರಚಾರದ ನಡುವೆ ತೋಟಗಳಲ್ಲಿ ರೈತರ ಯೋಗಕ್ಷೇಮ ವಿಚಾರಿಸಿದ ಸಚಿವರು, ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸುದ್ದಿಯನ್ನೂ ಓದಿ | CM Siddaramaiah: ವಕ್ಫ್ ಆಸ್ತಿ ವಿವಾದ; ರಾಜಕೀಯ ಲಾಭಕ್ಕೆ ಬಿಜೆಪಿ ನಾಯಕರ ಪ್ರತಿಭಟನೆ ಎಂದ ಸಿಎಂ