Thursday, 12th December 2024

Hair Care Tips: ಈ ಆಹಾರ ಸೇವಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು!

Hair Care Tips

ಸಾವಿಲ್ಲದವರ ಮನೆಯ ಸಾಸಿವೆ ಇಲ್ಲ ಎನ್ನುವಂತೆಯೇ, ಕೂದಲು ಉದುರದವರ ಮನೆಯೇ ಇಲ್ಲ. ಸೂರ್ಯ-ಚಂದ್ರರಂತೆಯೆ ಇದೀಗ ನಿತ್ಯ ಸತ್ಯ ಎನ್ನುವಂತಾಗಿದೆ. ಸಣ್ಣ ವಯಸ್ಸಿನಲ್ಲೇ ಕೂದಲು (Hair Care Tips) ಉದುರಿ ತಲೆಯೆಲ್ಲ ಖಾಲಿಯಾದರೆ ವಯಸ್ಸು ಮಾಗಿದಂತೆ ಕಾಣುವುದು ನಿಜ. ಕೆಲವೊಮ್ಮೆ ಒಂದೊಂದು ಋತುವಿನಲ್ಲಿ ಕೂದಲಿನ ಸಮಸ್ಯೆ ಹೆಚ್ಚುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಸ್ಥಳಗಳಲ್ಲಿ, ಕೂದಲಿನ ಬುಡ ಮತ್ತು ತಲೆಯ ಚರ್ಮವನ್ನು ಆರೋಗ್ಯವಾಗಿಡುವುದು ಸಹ ಸವಾಲಾಗಬಹುದು. ಇದರಿಂದ ತಲೆಯ ಚರ್ಮದ ಮೇಲೆ ತೈಲದಂಶ ಹೆಚ್ಚಿ, ಫಂಗಸ್‌ ಮತ್ತು ಬ್ಯಾಕ್ಟೀರಿಯ ಸೋಂಕು ಪ್ರಾರಂಭವಾಗಿ ಕೂದಲು ಉದುರುವ ತಾಪತ್ರಯ ಹೆಚ್ಚಬಹುದು. ಇದನ್ನು ನಿಭಾಯಿಸುವುದು ಹೇಗೆ?

ಒಂದೇ ಸಮಸ್ಯೆಗೆ ಹಲವು ರೀತಿಯಲ್ಲಿ ಪರಿಹಾರ ಹುಡುಕಲು ಯತ್ನಿಸುವುದನ್ನು ಎಲ್ಲರೂ ಮಾಡುತ್ತಾರೆ. ತಪ್ಪೇನಿಲ್ಲ, ಯಾವುದಾದರೂ ಒಂದು ಪ್ರಯತ್ನ ಕೆಲಸ ಮಾಡಬಹುದು ಎಂಬುದು ಇದರ ಹಿಂದಿನ ಆಶಯ. ಆದರೆ ಕೂದಲಿನ ಸಮಸ್ಯೆಗೆ ಮೊದಲ ಪ್ರಯತ್ನ ಆರಂಭವಾಗಬೇಕಾದ್ದು ನಮ್ಮ ಆಹಾರದಿಂದ. ದೇಹಕ್ಕೆ ಬೇಕಾದ ಸತ್ವಗಳೆಲ್ಲವೂ ಸರಿಯಾಗಿ ದೊರೆಯುತ್ತಾ ಹೋದಾಗ ಶರೀರ ಎಲ್ಲ ರೀತಿಯಲ್ಲೂ ಆರೋಗ್ಯಯುತವಾಗಿ ಇರುತ್ತದೆಂಬುದು ದೊಡ್ಡ ರಹಸ್ಯವೇನಲ್ಲವಲ್ಲ. ಹಾಗಾದರೆ ಎಂತಹ ಸತ್ವಗಳು ನಮ್ಮ ಆಹಾರದ ಭಾಗವಾಗಿದ್ದರೆ ಕೂದಲು ಉದುರುವುದನ್ನು ತಡೆಯಬಹುದು? ಆ ಸತ್ವಗಳು ಯಾವ ಆಹಾರಗಳಲ್ಲಿ ದೊರೆಯುತ್ತವೆ?

ಒಮೇಗಾ 3 ಕೊಬ್ಬಿನಾಮ್ಲ

ಕೂದಲಿನ ಕೋಶಗಳ ಆರೈಕೆ ಮಾಡಿ, ಕೇಶಗಳ ಬೆಳವಣಿಗೆಗೆ ಈ ಪೌಷ್ಟಿಕಾಂಶ ಅಗತ್ಯವಾಗಿ ಬೇಕು. ಜತೆಗೆ, ದೇಹದಲ್ಲಿನ ಉರಿಯೂತ ಕಡಿಮೆ ಮಾಡುವಲ್ಲಿ ಇದರ ಪಾತ್ರ ಹಿರಿದು. ಕೂದಲಿನ ಬುಡದಲ್ಲಿರುವ ಊರಿಯೂತ ಸಂಬಂಧಿ ತೊಂದರೆಗಳನ್ನು ಪರಿಹಾರ ಮಾಡುವಲ್ಲಿ ಇದು ಸಹಕಾರಿ. ಹಾಗಾಗಿ ಋತುಮಾನ ಯಾವುದೇ ಇರಲಿ, ಒಮೇಗಾ 3 ಕೊಬ್ಬಿನಾಮ್ಲದ ಆಹಾರಗಳನ್ನು ಅಗತ್ಯವಾಗಿ ಸೇವಿಸಿ. ಕೊಬ್ಬಿನ ಮೀನುಗಳು, ವಾಲ್‌ನಟ್‌, ಅಗಸೆಬೀಜ, ಚಿಯಾಬೀಜ, ಅವಕಾಡೊಗಳೆಲ್ಲ ಈ ಸತ್ವವನ್ನು ಹೇರಳವಾಗಿ ಹೊಂದಿವೆ.

ಈ ಸುದ್ದಿಯನ್ನೂ ಓದಿ | Anish Sarkar: ಮೂರರ ಪೋರ ಅನೀಶ್​ ಈಗ ಫಿಡೆ ರೇಟೆಡ್​ ಚೆಸ್​ ಆಟಗಾರ

ವಿಟಮಿನ್‌ ಎ

ಕೂದಲಿನ ಬುಡ ಮತ್ತು ತಲೆಯ ಚರ್ಮ ಆರೋಗ್ಯಪೂರ್ಣವಾಗಿರಲು ನಮ್ಮ ಚರ್ಮ ನೈಸರ್ಗಿಕವಾಗಿ ಸ್ರವಿಸುವ ಸೇಬಂ ಎಂಬ ತೈಲದಂಶ ಮಹತ್ವದ್ದು. ಈ ಸೇಬಂ ಉತ್ಪಾದನೆಗೆ ವಿಟಮಿನ್‌ ಎ ಅಂಶ ಇಂಬು ನೀಡುತ್ತದೆ. ಇದಲ್ಲದೆಯೆ, ವಿಟಮಿನ್‌ ಎ ಸೇವನೆಯಿಂದ ದೇಹಕ್ಕೆ ಇನ್ನೂ ಹಲವು ಬಗೆಯ ಲಾಭಗಳಿವೆ. ಆದರೀಗ ಮುಖ್ಯವಾಗಿ, ತಲೆಯ ಚರ್ಮಕ್ಕೆ ಯಾವುದೇ ಸೋಂಕು ತಾಗದಿರುವಂತೆ ಕಾಪಾಡಲು ಈ ಸತ್ವವು ಸಹಕಾರಿ. ಹಾಗಾಗಿ ಕ್ಯಾರೆಟ್‌, ಗೆಣಸು ಮತ್ತು ಹಸಿರು ಸೊಪ್ಪು-ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಿ.

ವಿಟಮಿನ್‌ ಸಿ

ದೇಹದ ಬಹಳಷ್ಟು ರಿಪೇರಿ ಕೆಲಸಗಳಲ್ಲಿ ನಮಗೆ ವಿಟಮಿನ್‌ ಸಿ ಅಗತ್ಯ. ಕಾರಣ, ಕೊಲಾಜಿನ್‌ ಎಂಬ ಮಹತ್ವದ ಪ್ರೊಟೀನ್‌ ಉತ್ಪಾದನೆಗೆ ಈ ಸತ್ವ ಅಗತ್ಯ. ಈ ಕೊಲಾಜಿನ್‌ ಇದ್ದರೆ ಮಾತ್ರ ಕೂದಲಿನ ಎಳೆಗಳು ತುಂಡಾಗದಂತೆ ನಾವು ಕಾಪಾಡಿಕೊಳ್ಳಬಹುದು. ಜತೆಗೆ, ಕಬ್ಬಿಣದಂಶವನ್ನು ಹೀರಿಕೊಳ್ಳುವುದಕ್ಕೆ ಸಹ ಇದು ಶರೀರಕ್ಕೆ ಬೇಕಾಗುತ್ತದೆ. ಹಾಗಾಗಿ ಕಿತ್ತಳೆ, ನಿಂಬೆ, ದ್ರಾಕ್ಷಿ, ನೆಲ್ಲಿಕಾಯಿ, ಪಪ್ಪಾಯ ಮುಂತಾದ ವಿಟಮಿನ್‌ ಸಿ ಹೆಚ್ಚಿರುವ ಋತುಮಾನದ ಹಣ್ಣುಗಳು ನಿಮ್ಮ ಆಹಾರದಲ್ಲಿರಲಿ.

ಕಬ್ಬಿಣ

ಕೂದಲಿಗೆ ಬೇಕಾದ ಆಮ್ಲಜನಕವನ್ನು ಒದಗಿಸುವಲ್ಲಿ ಕಬ್ಬಿಣದ್ದು ದೊಡ್ಡ ಕೆಲಸ. ಹಾಗಾಗಿ ಕಬ್ಬಿಣದಂಶ ಕಡಿಮೆಯಾದರೂ ಕೂದಲಿನ ಆರೋಗ್ಯ ಸೊರಗುತ್ತದೆ. ಇದನ್ನು ಹೀರಿಕೊಳ್ಳುವುದಕ್ಕೆ ಸೂಕ್ತ ಪ್ರಮಾಣದಲ್ಲಿ ವಿಟಮಿನ್‌ ಸಿ ಸಹ ಅಗತ್ಯ ಎಂಬುದನ್ನು ನಾವು ಮರೆಯುವಂತಿಲ್ಲ. ಬೇಳೆ-ಕಾಳುಗಳು, ಬ್ರೀಟ್‌ರೂಟ್‌, ಸೊಪ್ಪುಗಳು, ಇಡೀ ಧಾನ್ಯಗಳು, ಕಾಯಿ-ಬೀಜಗಳನ್ನು ತಪ್ಪದೆ ಸೇವಿಸಿ.

ಈ ಸುದ್ದಿಯನ್ನೂ ಓದಿ | Bagheera Movie: ʼಬಘೀರʼನಿಗೆ ಪ್ರಭಾಸ್‌ ಮೆಚ್ಚುಗೆ!

ಬಯೋಟಿನ್‌ (ವಿಟಮಿನ್‌ ಬಿ7)

ಕೂದಲಿನ ಹಂದರವನ್ನು ನಿರ್ಮಿಸುವಂಥ ಪ್ರೊಟೀನ್‌ಗೆ ಕೆರಾಟಿನ್‌ ಎನ್ನುತ್ತಾರೆ. ಇದರ ಉತ್ಪಾದನೆಗೆ ಬಯೋಟಿನ್‌ ಬೇಕು. ಬಯೋಟಿನ್‌ ಕೊರತೆ ದೇಹದಲ್ಲಿ ಉಂಟಾದರೆ ಕೂದಲು ತೆಳುವಾಗುವುದು ಮತ್ತು ಉದುರುವುದು ನಿಶ್ಚಿತ. ಹಾಗಾಗಿ ಮೊಟ್ಟೆ, ಇಡೀ ಧಾನ್ಯಗಳು, ಕಾಯಿ-ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ.

ಜಿಂಕ್

ಕೂದಲಿನ ಬುಡದಲ್ಲಿರುವ ತೈಲಗ್ರಂಥಿಗಳ ಕೆಲಸ ಸಮರ್ಪಕವಾಗಿರಲು ಜಿಂಕ್‌ ಅಗತ್ಯ. ಕೂದಲಿನ ಬೆಳವಣಿಗೆ, ದುರಸ್ತಿಗೆ ಸತು ಇದ್ದಷ್ಟೂ ಒಳ್ಳೆಯದು. ಇದಕ್ಕಾಗಿ ಕುಂಬಳಕಾಯಿ ಬೀಜ, ಗೋಡಂಬಿಯಂಥ ಬೀಜಗಳು, ಕಡಲೆಯಂಥ ಕಾಳುಗಳನ್ನು ಆಹಾರದ ಭಾಗವಾಗಿಸಿಕೊಳ್ಳಿ.