Thursday, 19th December 2024

Handbook Release: ಮಂಡ್ಯ ಸಮ್ಮೇಳನದಲ್ಲಿ ಬೆಂಕಿ ಬಸಣ್ಣ ರಚಿತ ʼವಿಶ್ವ ಕನ್ನಡ ಕೂಟಗಳ ಕೈಪಿಡಿʼ ಬಿಡುಗಡೆ

Handbook Release

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಸಂಪಾದಕ ನ್ಯೂಯಾರ್ಕ್‌ನ ಬೆಂಕಿ ಬಸಣ್ಣ ವಿರಚಿತ “ವಿಶ್ವ ಕನ್ನಡ ಕೂಟಗಳ ಕೈಪಿಡಿ” (Handbook Release) ಬಿಡುಗಡೆಯಾಗಲಿದೆ. ಜಾಗತಿಕ ಕನ್ನಡಿಗರೆಲ್ಲರ ವಿವರಗಳೂ ಅಂಗೈನಲ್ಲಿಯೇ ದೊರಕುವಂತಾಗ ಬೇಕು ಎನ್ನುವ ಮಹದಾಶೆಯಿಂದ ರೂಪುಗೊಂಡಿರುವ ಮಾರ್ಗಸೂಚಿ ಇದು.

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿಯವರ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಕಾರಗೊಳಿಸುತ್ತಿದೆ. ಜಗತ್ತಿನ ಕನ್ನಡಿಗರೆಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಒಂದಾಗಬೇಕು, ಅವರ ನೋವು ನಲಿವುಗಳನ್ನು ಹಂಚಿಕೊಳ್ಳಲು ಇದು ನೆಲೆಯಾಗಬೇಕು ಎನ್ನುವುದು ಡಾ. ಮಹೇಶ್ ಜೋಶಿಯವರ ಅಭಿಲಾಷೆಯಾಗಿದೆ. ಈ ಪುಸ್ತಕವು ಕನ್ನಡ ಸಾಹಿತ್ಯ ಪರಿಷತ್ತು ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿರುವ ಕನ್ನಡಿಗರ ಮಾತೃಸಂಸ್ಥೆ ಎನ್ನುವ ಭಾವವನ್ನು ಮೂಡಿಸುತ್ತದೆ.

ಈ ಸುದ್ದಿಯನ್ನೂ ಓದಿ | #MB Movie: ಶಿವರಾಜ್‌ಕುಮಾರ್ ಅಭಿನಯದ ಹೊಸ ಸಿನಿಮಾ ಅನೌನ್ಸ್‌!

ಪ್ರಧಾನ ಸಂಪಾದಕ ನ್ಯೂಯಾರ್ಕ್‌ನ ಬೆಂಕಿ ಬಸಣ್ಣ ಅವರು, ಇಲ್ಲಿಯವರೆಗೆ ವಿಶ್ವದ ಎಲ್ಲಾ ಕನ್ನಡ ಕೂಟಗಳನ್ನು ಒಳಗೊಂಡ ಒಂದು ಸಮಗ್ರ ಗ್ರಂಥ ಕನ್ನಡ ಸಾಹಿತ್ಯ ಲೋಕದಲ್ಲಿ ಇರಲಿಲ್ಲ . ಈ ಕೊರತೆಯನ್ನು ನೀಗಿಸಲು ನಾವು ವಿಶ್ವ ಕನ್ನಡ ಕೂಟಗಳ ಕೈಪಿಡಿಯನ್ನು ಬಿಡುಗಡೆ ಮಾಡುತಿದ್ದೇವೆ. ಈ ಪುಸ್ತಕದಲ್ಲಿ ವಿದೇಶಗಳಲ್ಲಿರುವ ಕನ್ನಡ ಕೂಟಗಳ ಇತಿಹಾಸ, ಸಂಘಗಳು ಬೆಳೆದು ಬಂದ ಹಾದಿ, ಅವುಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ನಡೆಸುತ್ತಿರುವ ‘ಕನ್ನಡ ಕಲಿ’ ಶಾಲೆಗಳ ಬಗ್ಗೆ ವಿವರಗಳಿವೆ ಎಂದರು.

ಈ ಪುಸ್ತಕವನ್ನು ಓದುತ್ತಿದ್ದರೆ ನಿಮಗೆ ಏಷಿಯಾ, ಯುರೋಪು, ಆಫ್ರಿಕಾ , ಆಸ್ಟ್ರೇಲಿಯಾ ಮತ್ತು ಅಮೇರಿಕ ಹೀಗೆ ಪ್ರಪಂಚದ ಪ್ರವಾಸವನ್ನು ಉಚಿತವಾಗಿ ಮಾಡಿದ ಸುಂದರ ಅನುಭವವಾಗುತ್ತದೆ. ನೀವು ವಿದೇಶಗಳಿಗೆ ಪ್ರವಾಸ ಅಥವಾ ವಲಸೆ ಹೋಗುತ್ತಿದ್ದರೆ, ಪುಸ್ತಕದ ಕೊನೆಗೆ ಕೊಟ್ಟಿರುವ ಕೂಟಗಳ ಸಂಪರ್ಕ ಮಾಹಿತಿಯನ್ನು ನೋಡಿ ಅಲ್ಲಿಯ ಕನ್ನಡ ಕೂಟಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ಅವರು ವಿವರಿಸಿದರು.

ಕೇವಲ ಮೂರು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾ, ಆಫ್ರಿಕಾ, ಏಷಿಯಾ, ಅಮೇರಿಕಾ, ಯುರೋಪ್ ಹೀಗೆ ಜಗತ್ತಿನ ಎಲ್ಲಾ ಖಂಡಗಳಲ್ಲಿರುವ ಕನ್ನಡ ಸಂಘಗಳ ಲೇಖನಗಳನ್ನು ಸಂಗ್ರಹಿಸಿ ಪ್ರಕಸುವುದು ಅತ್ಯಂತ ಕಠಿಣ ಸವಾಲಾಗಿತ್ತು. ಜಗತ್ತಿನ ಎಲ್ಲಾ ಟೈಮ್ ಜೋನ್ ಗಳಲ್ಲಿ ಇರುವ ಸಂಪಾದಕರ ಜೊತೆ ಮೀಟಿಂಗ್ ಮಾಡುವ ಸಾಧ್ಯವಾಗಿತ್ತು. ನಮ್ಮ ಸಂಪಾದಕ ಮಂಡಳಿಯು ಯುರೋಪಿನಿಂದ ಶೋಭಾ ಚೌಹಾನ್ , ಆಸ್ಟ್ರೇಲಿಯಾದಿಂದ ಭಾಗ್ಯ ಪಾಟಿಲ್ ಶಂಕರ್, ಏಷ್ಯಾ- ಪ್ಯಾಸಿಫಿಕ್ ನಿಂದ ವೆಂಕಟ ರತ್ನಯ್ಯ, ಗಲ್ಫ್ ದೇಶಗಳಿಂದ ಶಶಿಧರ ನಾಗರಾಜಪ್ಪ, ಮತ್ತು ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಅಮೆರಿಕ ಖಂಡದಿಂದ H.K. ಅರ್ಪಿತಾ, V. ಪ್ರಸನ್ನ ಕುಮಾರ್ , H.K. ಅಕ್ಷತಾ, ಮತ್ತು ಭಾರತದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತಾ ಹಾವನೂರ – ಹೊನ್ನತ್ತಿಯವರನ್ನು ಒಳಗೊಂಡಿತ್ತು. ಈ ಪುಸ್ತಕವನ್ನು ತುಂಬಾ ಸುಂದರವಾಗಿ ಡಿಸೈನ್ ಮಾಡಿಕೊಟ್ಟ ಅನಿತಾ ಹಾಗೂ ಅಚ್ಚುಕಟ್ಟಾಗಿ ಕಲರ್ ಪುಟಗಳಲ್ಲಿ ಮುದ್ರಿಸಿಕೊಟ್ಟ ಕರ್ನಾಟಕ ಆಫ್ ಸೆಟ್ ಪ್ರಿಂಟರ್ಸ್‌ನ ಮಾಲೀಕರಾದ ಬಿ. ವಿ. ಗಜೇಂದ್ರಕುಮಾರ್ ಅವರಿಗೆ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಡಿ.21ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಇದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಅಮೇರಿಕಾದ ರಿಚ್ಮಂಡ್‌ನಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಭೇಟಿಯಾದ ಸಮಯದಲ್ಲಿ ವಿಶ್ವ ಕನ್ನಡ ಕೂಟಗಳ ಪುಸ್ತಕವನ್ನು ಹೊರ ತರುವ ತಮ್ಮ ಮಹತ್ವಾಕಾಂಕ್ಷೆಯನ್ನು ನನ್ನೊಂದಿಗೆ ಹಂಚಿಕೊಂಡರು. ಕಳೆದ ಜುಲೈ ತಿಂಗಳಲ್ಲಿ ಜರ್ಮನಿಯಲ್ಲಿ ನಡೆದ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದ “ಮೈನಾಕ” ಸ್ಮರಣ ಸಂಚಿಕೆಯಲ್ಲಿ ಯುರೋಪಿನಲ್ಲಿರುವ ಕನ್ನಡಕೂಟಗಳ ಸಂಗ್ರಹವನ್ನು ಪ್ರಕಟಿಸಿದ ಅನುಭವವಿರುವ ನೀವು ಈ ವಿಶ್ವ ಕನ್ನಡ ಕೂಟಗಳ ಪುಸ್ತಕವನ್ನು ಹೊರತರುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು. ಕೇವಲ ಮೂರು ತಿಂಗಳಲ್ಲಿ ಇದು ಸಾಧ್ಯವೇ ಎಂದು ನನಗೆ ಅನುಮಾನ ಮೂಡಿತು. ʼಖಂಡಿತ ಸಾಧ್ಯವಿದೆʼ ಎಂದು ಧೈರ್ಯವನ್ನು ತುಂಬಿ ಈ ಮಹಾನ್ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಾಡೋಜ ಡಾ. ಮಹೇಶ್ ಜೋಶಿ ಅವರು ಹುರಿದುಂಬಿಸಿದರು ಎಂದು ಬೆಂಕಿ ಬಸಣ್ಣ ಅವರು ತಿಳಿಸಿದ್ದಾರೆ.