Saturday, 14th December 2024

ಯಶಸ್ಸಿಗೆ ಅಂಗವಿಕಲತೆ ಅಡ್ಡಿಯಲ್ಲ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 47

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಈಜುಗಾರ ಕೆ.ಎಸ್.ವಿಶ್ವಾಸ್ ಅಭಿಮತ

ಬೆಂಗಳೂರು: ಆತ ಅಂತಾರಾಷ್ಟ್ರೀಯ ಈಜುಗಾರ, ಉತ್ತಮ ಡ್ಯಾನ್ಸರ್. ಆತನಿಗೆ ಎಲ್ಲ ಕೆಲಸಗಳಿಗೂ ಕಾಲೇ ಗತಿ. ಏಕೆಂದರೆ ಎರಡೂ ಕೈಗಳಿಲ್ಲ. ಜೀವನದಲ್ಲಿ ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಯಶಸ್ಸಿನತ್ತ ಸಾಗುತ್ತಿರುವ ಸೂರ್ತಿಯ ಚಿಲುಮೆ.

ದೇಶಕ್ಕೆ ಐದು, ಕರ್ನಾಟಕಕ್ಕೆ ಹನ್ನೆರಡು ಪದಕ ಗೆದ್ದು ತರುವ ಮೂಲಕ ಕೀರ್ತಿ ತಂದ ಈಜುಗಾರ ಕೆ.ಎಸ್. ವಿಶ್ವಾಸ್ ಅವರ ಸಾಧನೆಯ ಕತೆ ಇದು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಸ್.ವಿಶ್ವಾಸ್ ಅವರು ತಮ್ಮ ಜೀವನ ಹಾಗೂ ಸಾಧನೆಯ ಹಾದಿ ಕುರಿತು ಮಾತನಾಡಿದರು.

ನಾನು ಕೋಲಾರದಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಗ ನನ್ನ ತಂದೆ ಹೊಸ ಮನೆಯನ್ನು ಕಟ್ಟುತ್ತಿದ್ದರು. ಹೊಸ ಕಟ್ಟಡಕ್ಕೆ ನೀರುಣಿಸಲೆಂದು ತಾರಸಿಯ ಮೇಲೆರುವಾಗ ದೇಹ ವಾಲಿತು. ಕೆಳಗೆ ಬೀಳುತ್ತಿರುವಾಗ ಎರಡೂ ಕೈಗಳಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡೆ. ಮೈ ಒದ್ದೆಯಾಗಿದ್ದ ಕಾರಣ ವಿದ್ಯುತ್ ಸ್ಪರ್ಶ ವಾಯಿತು. ಇದನ್ನು ಗಮನಿಸಿದ ನನ್ನ ತಂದೆ ಸತ್ಯನಾರಾಯಣ ಅವರು ಮರದ ತುಂಡಿನಿಂದ ಕೈಯನ್ನು ತಪ್ಪಿಸಲು ಯತ್ನಿಸಿದರು. ಆಗ ಅವರೂ ಆಯ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ನನಗೆ ಅಲ್ಲೇ ಪ್ರಜ್ಞೆ ತಪ್ಪಿತು. ಆಗ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದರು.

ಎರಡು ತಿಂಗಳಾದರೂ ಪ್ರಜ್ಞೆ ಬರಲೇ ಇಲ್ಲ. ಪ್ರe ಬಂದಾಗ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಪತಿಯ ಅಗಲಿಕೆ, ಮಗನ ತುಂಡಾದ ಕೈಗಳು ಇವುಗಳನ್ನು ಕಂಡ ನನ್ನ ತಾಯಿ ಉಷಾ ಕೆಲವೇ ದಿನಗಳಲ್ಲಿ ಅಸುನೀಗಿ ದರು. ಇಂಥ ದುರಂತದ ನಡುವೆ ಬದುಕಿ ಬಂದ ನನಗೆ ಅಜ್ಜಿ ಆಸರೆಯಾದರು ಎಂದು ತಮ್ಮ ಬದುಕಿನ ದುರಂತ ಕಥೆಯನ್ನು ಬಿಚ್ಚಿಟ್ಟರು.

ಬಾಲ್ಯದಲ್ಲಿ ಸ್ನೇಹಿತರ ಜತೆಗಿನ ಒಡನಾಟ ವಿಭಿನ್ನ. ನನ್ನ ಸ್ನೇಹಿತರ ಪೋಷಕರು ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೂ ಸ್ನೇಹಿತರು ನನ್ನ ಜತೆ
ಚೆನ್ನಾಗಿ ಬೆರೆಯುತ್ತಿದ್ದರು. ಇನ್ನೂ ಕೆಲವರು ಮನಸ್ಸಿಗೆ ಘಾಸಿ ಮಾಡುತ್ತಿದ್ದರು. ಎಂಟನೇ ತರಗತಿಯಲ್ಲಿ ಕೊಲಂಬಿಯಾ ನ್ಯಾಷನಲ್ ಸ್ಕೂಲ್‌ನಲ್ಲಿ ಅವಕಾಶ ಸಿಕ್ಕಿತು. ನನಗೆ ನೋಟ್ಸ್, ಹೋಂವರ್ಕ್ ಕೊಡುವ ಕುರಿತು ಶಿಕ್ಷಕರಿಗೆ ಗೊಂದಲ ಇತ್ತು. ಆದರೂ ವ್ಯಾಸಂಗ ಬಿಡಲಿಲ್ಲ. ಅಂತೂ ಹತ್ತನೇ ತರಗತಿ ಮುಗಿಸಿದೆ. ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡೆ ಎಂದು ಶಿಕ್ಷಣ ಕುರಿತು ಮಾಹಿತಿ ನೀಡಿದರು.

ನಾನು ಅಂಗವಿಲಕ ಎಂಬ ನೋವಿನಿಂದ ಖಿನ್ನತೆಗೆ ಒಳಗಾಗಿದ್ದೆ. ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿದ್ದೆ. ಬಿಕಾಂ ಮುಗಿಸಿ ಸರ್ಟಿಫಿಕೇಟ್
ತಗೊಂಡು ಉದ್ಯೋಗ ಮೇಳಕ್ಕೆ ಹೋಗಿದ್ದೆ. ಅಲ್ಲಿ ಸಂದರ್ಶನಕಾರರು ಶಿಕ್ಷಣ, ಕೆಲಸದ ಬಗ್ಗೆ ಪ್ರಶ್ನೆ ಕೇಳುವುದಕ್ಕಿಂತ ನನ್ನ ವೈಯುಕ್ತಿಕ ಬದುಕಿನ ಕುರಿತು
ಪ್ರಶ್ನೆಗಳನ್ನು ಕೇಳಿದರು. ಒಂದು ರೀತಿ ಮನಸ್ಸಿಗೆ ನಕಾರಾತ್ಮಕ ಅಂಶಗಳನ್ನು ತುಂಬಿ ಮನೆಗೆ ಕಳುಹಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಅಜ್ಜಿಯೇ ಆಸರೆ: ನಮ್ಮ ತಾಯಿ ತೀರಿಕೊಂಡ ನಂತರ ಅಡುಗೆ ಮಾಡಿಕೊಡುವವರು ಯಾರೂ ಇರಲಿಲ್ಲ. ನನ್ನ ಅಜ್ಜಿ ನನಗೆ ಎಲ್ಲ ಸೌಲಭ್ಯ ನೀಡುತ್ತಿದ್ದರು. ಅವರ ಮೇಲೆ ಅವಲಂಬಿತನಾಗಿದ್ದೆ. ಕತ್ತಲೆ ಕೋಣೆಗೆ ಸೀಮಿತವಾಗಿತ್ತು ನನ್ನ ಜೀವನ. ನೋಡಿದವರು ಎರಡೂ ಕೈಗಳು ಇಲ್ಲ ಎಂದು ಭಾವಿಸಕೊಳ್ಳದಿರಲಿ ಎಂದು ಶಾಲು ಹೊದ್ದು ಸಾರ್ವಜನಿಕವಾಗಿ ಓಡಾಡುತ್ತಿದ್ದೆ ಎಂದು ಹೇಳಿದರು.

ಡ್ಯಾನ್ಸ್‌ನತ್ತ ಹೆಜ್ಜೆ: ಈಜುಗಾರನಾದ ಬಳಿಕ ಡ್ಯಾನ್ಸರ್ ಆಗಲು ಯೋಚಿಸಿದೆ. ಡ್ಯಾನ್ಸ್ ತರಗತಿಗೆ ಹೋದಾಗ ಕನ್ನಡಿ ಮುಂದೆ ನಿಂತಾಗ ಕಹಿ ಘಟನೆಗಳು ಗೋಚರಿಸುತ್ತಿದ್ದವು. ನನ್ನ ಕಣ್ಣ ಮುಂದೆ ಸದಾ ಕಾಣಿಸಿದ್ದು ದುಃಖ. ಇದನ್ನು ಹೊರ ಹಾಕಲು ಡ್ಯಾ ಕಲಿತೆ. ನನ್ನಲ್ಲಿನ ಕಹಿ ಸತ್ಯ ಮರೆಯಲು ಈ ವೃತ್ತಿ ಆಸರೆ ಯಾಯಿತು. ಹೈದರಾಬಾದ್ ನಲ್ಲಿ ಮೊದಲ ಶೋ ನಡೆಯಿತು. ಮಜಾ ಟಾಕೀಸ್ ವೇದಿಕೆಯಲ್ಲಿ ಭಾಗವಹಿಸಿದೆ. ಕರ್ನಾಟಕದಲ್ಲಿ ಬಹಳ ಜನ ಗುರುತಿಸಿದರು. ಮುಂದೆ ಸಂಭಾವನೆ ಪಡೆದು ಡ್ಯಾ ಮಾಡಲು ಶುರು ಮಾಡಿದೆ. ಹಲವಾರು ಕಾರ್ಯಕ್ರಮಗಳನ್ನು ಡ್ಯಾನ್ಸರ್ ಆಗಿ ನಡೆಸಿಕೊಟ್ಟೆ. ಕೆನಡಾ ಹಾಗೂ ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದಿದ್ದೇನೆ ಎಂದು ತಿಳಿಸಿದರು.

ವಿಶ್ವಾಸ್ ಅವರ ಪ್ರೇಮಕಥೆ: ಕಾವೇರಿ ವಿದ್ಯಾಕ್ಷೇತ್ರಂ ಶಾಲೆಯಲ್ಲಿ ಲಕ್ಷ್ಮಿ ಎಂಬುವವರು ಶಿಕ್ಷಕರಾಗಿದ್ದರು. ಅಲ್ಲಿ ಪ್ರಾಂಶುಪಾಲರಾದ ಗಿರೀಶ್ ಅವರು ಹಲವು
ಕಾರ್ಯಕ್ರಮಗಳಿಗೆ ನನ್ನನ್ನು ಅತಿಥಿಯಾಗಿ ಕರೆಯುತ್ತಿದ್ದರು. ಮಕ್ಕಳಿಗೆ ನನ್ನ ಡ್ಯಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಿದ್ದರು. ಲಕ್ಷ್ಮಿ ಅವರು ನನ್ನ ಬಗ್ಗೆ ತಿಳಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡುತ್ತಿದ್ದರು. 2018 ಫೆ. ೧೪ರಂದು ಭೇಟಿಯಾದೆವು. ಅದಕ್ಕೂ ಮುನ್ನ ನನಗೆ ಅವರು ಯಾರು ಅಂತಾ ಗೊತ್ತಿರಲಿಲ್ಲ. ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು, ನಾನು ಉತ್ತರ ನೀಡಿದೆ.

ನನ್ನ ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದು ನನ್ನ ಪುಣ್ಯ. ಬಳಿಕ ಮದುವೆ ಆಯಿತು ಎಂದು ವಿಶ್ವಾಸ್ ಅವರು ಪ್ರೇಮ ಕಥೆ ಹೇಳಿದರು. ತೆರೆಗೆ ಬರಲಿದೆ ವಿಶ್ವಾಸ್ ಜೀವನಾಧಾರಿತ ಸಿನಿಮಾ ’ಅರಬ್ಬಿ’ ನಿರ್ದೇಶಕ ರಾಜೀವ್ ಪಾವಗಡ ಅವರು ಕೈಗಳಿಲ್ಲದ ಈಜುಪಟು ವಿಶ್ವಾಸ್ ಅವರ ಜೀವನ ಕಥೆ ಆಧರಿಸಿ ಅರಬ್ಬಿ
ಎಂಬ ಸಿನಿಮಾ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೂಲಕ ವಿಶ್ವಾಸ್ ಅವರ ಯಶೋಗಾಥೆ ಜನರಿಗೆ ತಲುಪಲಿ ಎಂದು ವಿಶ್ವಾಸ್ ಅವರ ಚಿಕ್ಕಪ್ಪ ಸುರೇಶ್ ಅವರು ಮಾಹಿತಿ ನೀಡಿದರು.

ಸಾಧನೆಯ ಹಾದಿ
ನನ್ನ ದೇಹಕ್ಕೆ ಅನುಗುಣವಾಗಿ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿ ಈಜುಗಾರನಾಗಲು ನಿರ್ಧರಿಸಿದೆ. ಮೊದಲ ಆರು ತಿಂಗಳು ೨೫ ಮೀಟರ್ ಈಜುಕೋಳದಲ್ಲಿ ತರಬೇತಿ ಪಡೆದೆ. ಬಳಿಕ ೫೦ ಮೀಟರ್ ಈಜುಕೊಳದಲ್ಲಿ ತರಬೇತಿ ಪಡೆದೆ. ರಾಜ್ಯಮಟ್ಟದಲ್ಲಿ ರಾಜಸ್ಥಾನ, ಮಧ್ಯಪ್ರದೇಶಕ್ಕೆ ಹೋಗಿ ಯಶಸ್ಸು ಪಡೆದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವುದು ಅಷ್ಟು ಸಲುಭದ ಮಾತಲ್ಲ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ನನಗೆ ಆಸ್ಥಾ ಪ್ರತಿಷ್ಠಾನ ನೆರವಾಯಿತು. ರಾಜ್ಯ ಸರಕಾರವೂ ರೋಲ್ ಮಾಡೆಲ್ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟರು.

ಅಂಕಣಕಾರ ಷಡಕ್ಷರಿ ಅವರ ವಿಶ್ವಾಸದ ಮಾತು
ಕೆ.ಎಸ್.ವಿಶ್ವಾಸ್ ಅವರ ಮಾತುಗಳನ್ನು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆಲಿಸಿದ ಅಂಕಣಕಾರ ಷಡಕ್ಷರಿ ಅವರು ಸುವರ್ಣ ಅವಕಾಶ ನೀಡಿದ್ದಾರೆ. ಅವರ ಶಾಲಾ-ಕಾಲೇಜುಗಳಲ್ಲಿ ತಿಂಗಳಿಗೊಮ್ಮೆ ಭಾಷಣ ಮಾಡುವ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ತಿಂಗಳಿಗೆ ಐದು ಸಾವಿರ ರು. ಸಹಾಯಧನ ನೀಡುವುದಾಗಿ ತಿಳಿಸಿದ್ದಾರೆ.