Thursday, 3rd October 2024

HD Kumaraswamy: ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಅವಹೇಳನಕಾರಿ ಮಾತು; ಉಕ್ಕು, ಬೃಹತ್ ಕೈಗಾರಿಕೆಗಳ ಹೂಡಿಕೆಗೆ ಏಟು?

HD Kumaraswamy
ವಿಶ್ಲೇಷಣೆ: ಗಿರೀಶ್ ಲಿಂಗಣ್ಣ

ಮುಂದಿನ ಐದು ವರ್ಷಗಳ ಅವಧಿಯಲ್ಲಿ (HD Kumaraswamy) ಭಾರತದ ಉಕ್ಕು ವಲಯಕ್ಕೆ ಬಹುತೇಕ 30,000 ಕೋಟಿ ರೂಪಾಯಿಗಳ ಹೂಡಿಕೆ ಲಭಿಸುವ ನಿರೀಕ್ಷೆ ಇದೆ. ಅದರೊಡನೆ, ಭಾರತದ ಉಕ್ಕು ಉತ್ಪಾದನಾ ಸಾಮರ್ಥ್ಯವೂ ಮುಂದಿನ ಐದು ವರ್ಷಗಳಲ್ಲಿ 25 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿಯಾಗಿರುವ ನಾಗೇಂದ್ರ ನಾಥ್ ಶಾ ಅವರು “ನಾವು ಇಲ್ಲಿಯತನಕ ಸಾಧಿಸಿರುವ ಪ್ರಗತಿಯನ್ನು ಗಮನಿಸಿದರೆ, 2029ನೇ ಆರ್ಥಿಕ ವರ್ಷದ ಕೊನೆಯ ವೇಳೆಗೆ 29,500 ಕೋಟಿ ರೂಪಾಯಿಗಳ ಹೂಡಿಕೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು 25 ಮಿಲಿಯನ್ ಟನ್‌ಗಳಷ್ಟು ಹೆಚ್ಚಿಸುವ ನಮ್ಮ ಗುರಿಯನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ನಾವು ನಂಬಿದ್ದೇವೆ” ಎಂದಿದ್ದಾರೆ.

ಆದರೆ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪಿಯಾಗಿರುವ, ಕರ್ನಾಟಕ ಲೋಕಾಯುಕ್ತ ತನಿಖೆ ನಡೆಸುತ್ತಿರುವ ಪ್ರಕರಣವೊಂದು ಸೆಪ್ಟೆಂಬರ್ 29ರ ಭಾನುವಾರ ಕೆಟ್ಟ ತಿರುವೊಂದನ್ನು ಪಡೆದುಕೊಂಡಿತು. ಈ ಬೆಳವಣಿಗೆಯ ಕಾರಣದಿಂದಾಗಿ, ಉಕ್ಕು ವಲಯಕ್ಕೆ ಹೆಚ್ಚಿನ ಹೂಡಿಕೆ ತರುವ ಕನಸಿಗೆ ಒಂದಷ್ಟು ಹಿನ್ನಡೆ ಉಂಟಾಗಿರುವುದಂತೂ ಹೌದು. ಸೆಪ್ಟೆಂಬರ್ 28ರಂದು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರು, ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಎಡಿಜಿಪಿ) ಮಟ್ಟದ, ಹಿಮಾಚಲ ಕೇಡರಿನ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಸಿಬ್ಬಂದಿಗಳಿಗೆ ನೀವು ನಿಮ್ಮ ಕರ್ತವ್ಯ ನಿರ್ವಹಿಸುವುದರಿಂದ ವಿಮುಖರಾಗಬೇಡಿ ಎಂದಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಬರೆದಿದ್ದರು.

ಚಂದ್ರಶೇಖರ್ ಅವರು ಕುಮಾರಸ್ವಾಮಿ ಅವರು ಆರೋಪಿಯಾಗಿರುವ ಒಂದು ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದ್ದರು. ಅವರು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ‘ಜಾಮೀನಿನ ಮೇಲೆ ಹೊರಗಿರುವ ಒಬ್ಬ ಆರೋಪಿ’ ಎಂದು ಸಂಬೋಧಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಸಮರ್ಥವಾಗಿ ಕಾರ್ಯಾಚರಿಸಲು ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದಿದ್ದರು.

ಈ ಸುದ್ದಿಯನ್ನೂ ಓದಿ | Monsoon 2024 : ಭಾರತದಲ್ಲಿ ಈ ಮುಂಗಾರು ಮಳೆಯ ಅನಾಹುತಕ್ಕೆ ಮೃತಪಟ್ಟವರು 1400 ಮಂದಿ

ತಮ್ಮ ಪತ್ರದಲ್ಲಿ, ಚಂದ್ರಶೇಖರ್ ಅವರು ಜಾಮೀನಿನ ಮೇಲೆ ಹೊರಗಿರುವ ಆರೋಪಿಯಾದ ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದಿಂದ ವಿಮುಖರಾಗುವಂತೆ ಮಾಡುವ ಸಲುವಾಗಿಯೇ ಇಂತಹ ಆರೋಪಗಳನ್ನು ಹೊರಿಸಿದ್ದಾರೆ ಎಂದಿದ್ದರು. ಕುಮಾರಸ್ವಾಮಿ ಅವರ ಮುಖ್ಯ ಉದ್ದೇಶವೇ ಎಸ್ಐಟಿ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಿ, ಅವರನ್ನು ಭಯಗೊಳಿಸುವುದು ಎಂದು ಚಂದ್ರಶೇಖರ್ ಪತ್ರದಲ್ಲಿ ಆರೋಪಿಸಿದ್ದರು. “ಆದರೆ ಒಬ್ಬ ಆರೋಪಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಪ್ರಭಾವಶಾಲಿಯಾಗಿರಲಿ, ಆತ ಒಬ್ಬ ಆರೋಪಿಯಷ್ಟೇ. ಇಂತಹ ಆಪಾದನೆಗಳು, ಬೆದರಿಕೆಗಳಿಂದ ನಾವು ನಿರುತ್ಸಾಹಗೊಳ್ಳಬಾರದು” ಎಂದು ಚಂದ್ರಶೇಖರ್ ಕರೆ ನೀಡಿದ್ದರು. ಅದರೊಡನೆ, ಎಂತಹ ಬಾಹ್ಯ ಪ್ರಭಾವ, ಒತ್ತಡಗಳಿಂದಲೂ ತಾನು ತನ್ನ ಸಿಬ್ಬಂದಿಗಳನ್ನು ರಕ್ಷಿಸುವುದಾಗಿಯೂ ಚಂದ್ರಶೇಖರ್ ಹೇಳಿದ್ದರು.

ಮುಂದಿನ ಭಾಗ ಕುತೂಹಲಕರ

ಒಂದು ವೇಳೆ ಚಂದ್ರಶೇಖರ್ ಅವರ ಮಾತುಗಳು ಇಲ್ಲಿಗೇ ನಿಂತಿದ್ದರೆ ಅದನ್ನು ಬಿಟ್ಟುಬಿಡಬಹುದಿತ್ತು. ಆದರೆ, ಈ ಪತ್ರವನ್ನು ನಿಜಕ್ಕೂ ಅನಗತ್ಯ ಎನ್ನುವಂತೆ, ಅದಕ್ಕಿಂತಲೂ ಹೆಚ್ಚಾಗಿ ಅವಹೇಳನಕಾರಿ ಮತ್ತು ಅಸಹ್ಯಕರ ಎಂಬಂತೆ ಮಾಡಿರುವುದು ಅದರ ಎರಡನೇ ಭಾಗ. ಅಲ್ಲಿ ಚಂದ್ರಶೇಖರ್ ಅವರು ಜಾರ್ಜ್ ಬರ್ನಾರ್ಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ಹೇಳಿಕೆಯನ್ನು ಉಲ್ಲೇಖಿಸಿ, ‘ಹಂದಿಗಳೊಡನೆ ಕದನಕ್ಕೆ ಇಳಿಯಬೇಡಿ. ಅದರಿಂದ ಇಬ್ಬರೂ ಕೊಳಕಾಗುತ್ತೀರಿ, ಆದರೆ ಹಂದಿ ಅದನ್ನು ಆನಂದಿಸುತ್ತದೆ’ ಎಂದು ಬರೆದಿದ್ದಾರೆ.

ಚಂದ್ರಶೇಖರ್ ಮಾತುಗಳು ಹೂಡಿಕೆಯ ಮೇಲೆ ಪರಿಣಾಮ ಬೀರಬಹುದೇ?

ಇಂಡಿಯಾ ಬ್ರ್ಯಾಂಡ್ ಈಕ್ವಿಟಿ ಫೌಂಡೇಶನ್ (ಐಬಿಇಎಫ್) ಪ್ರಕಾರ, 2023ನೇ ಹಣಕಾಸು ವರ್ಷದಲ್ಲಿ ಭಾರತದ ಉಕ್ಕಿನ ಬಳಕೆ 119.17 ಮೆಟ್ರಿಕ್ ಟನ್ ಆಗಿದ್ದರೆ, 2024ನೇ ಆರ್ಥಿಕ ವರ್ಷದಲ್ಲಿ 138.5 ಮೆಟ್ರಿಕ್ ಟನ್ ಆಗಿತ್ತು. ಇಂಡಿಯನ್ ಸ್ಟೀಲ್ ಅಸೋಸಿಯೇಷನ್ (ಐಎಸ್ಎ) 2023-24ನೇ ಸಾಲಿನಲ್ಲಿ ಉಕ್ಕಿನ ಅಗತ್ಯ 128.9 ಮೆಟ್ರಿಕ್ ಟನ್ ತಲುಪಬಹುದು ಎಂದು ಅಂದಾಜಿಸಿದೆ.

ಹೆಚ್ಚುತ್ತಿರುವ ಹೂಡಿಕೆಗಳು

ಉಕ್ಕಿನ ಉದ್ಯಮದಲ್ಲಿರುವ ಎಲ್ಲ ಸಂಸ್ಥೆಗಳ ಒಕ್ಕೂಟದ ಪರಿಣಾಮವಾಗಿ, ಇತರ ವಲಯಗಳ ಹೂಡಿಕೆದಾರರೂ ಇಲ್ಲಿ ಹೂಡಿಕೆ ನಡೆಸಲು ಮುಂದೆ ಬಂದಿದ್ದಾರೆ. ಈ ಮೂಲಕ, ಜಾಗತಿಕ ಹೂಡಿಕೆದಾರರಿಗೂ ಭಾರತದಲ್ಲಿ ಹೂಡಿಕೆ ನಡೆಸಲು ಹೊಸ ಬಾಗಿಲು ತೆರೆದಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಪಟ್ಟಿಯಲ್ಲಿರುವ ಸಂಸ್ಥೆಗಳು ಮುಂದಿನ ವರ್ಷದಲ್ಲಿ ವಿಶೇಷ ಉಕ್ಕು ತಯಾರಿಕೆಯಲ್ಲಿ 1.2 ಬಿಲಿಯನ್ ಡಾಲರ್ (ಅಂದಾಜು 10,000 ಕೋಟಿ ರೂಪಾಯಿ) ಹೂಡಿಕೆ ಮಾಡುವ ನಿರೀಕ್ಷೆಗಳಿವೆ. 2024ನೇ ಹಣಕಾಸು ವರ್ಷದ ಕೊನೆಯಲ್ಲಿ ಈ ಹೂಡಿಕೆ 1.9 ಬಿಲಿಯನ್ ಡಾಲರ್ (16,000 ಕೋಟಿ ರೂಪಾಯಿ) ತಲುಪಬಹುದು.

ಕೇಂದ್ರದ ನೀತಿಗಳ ಬೆಂಬಲ

ಫೆಬ್ರವರಿ 2024 ರಲ್ಲಿ ಉಕ್ಕು ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿತು. ಕಳೆದ ವರ್ಷದ ಬಜೆಟ್‌ನಲ್ಲಿ, ಕೇಂದ್ರ ಸರ್ಕಾರ 70.15 ಕೋಟಿ ರೂಪಾಯಿಯನ್ನು ಉಕ್ಕು ಸಚಿವಾಲಯಕ್ಕೆ ನಿಯೋಜಿಸಿತ್ತು.

ಸ್ಪರ್ಧಾತ್ಮಕ ಮೇಲುಗೈ

ಭಾರತ ಜಗತ್ತಿನಲ್ಲಿ ಐದನೇ ಅತ್ಯಧಿಕ ಕಬ್ಬಿಣ ನಿಕ್ಷೇಪಗಳನ್ನು ಹೊಂದಿರುವ ದೇಶ. ಭಾರತದ ಉಕ್ಕು ಉತ್ಪಾದನೆ 4-7% ಹೆಚ್ಚಳ ಕಂಡು, 2024ನೇ ಆರ್ಥಿಕ ವರ್ಷದಲ್ಲಿ 123-127 ಮೆಟ್ರಿಕ್ ಟನ್ ತಲುಪಬಹುದು. ಕಡಿಮೆ ವೆಚ್ಚದಾಯಕವಾದ ಮಾನವ ಸಂಪನ್ಮೂಲ ಭಾರತದಲ್ಲಿ ಸುಲಭವಾಗಿ ಲಭ್ಯವಿದೆ. ಅದರೊಡನೆ ಅಪರಿಮಿತ ಕಬ್ಬಿಣದ ಅದಿರಿನ ನಿಕ್ಷೇಪಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಕಾರ್ಯತಂತ್ರದ ಮೇಲುಗೈ ಹೊಂದುವಂತೆ ಮಾಡಿವೆ.

ಈ ಸುದ್ದಿಯನ್ನೂ ಓದಿ | Bus Catches Fire : 44 ಶಾಲಾ ಮಕ್ಕಳಿದ್ದ ಬಸ್‌ಗೆ ಬೆಂಕಿ; 25ಕ್ಕೂ ಹೆಚ್ಚು ಸಾವಿನ ಶಂಕೆ

ಆದರೆ, ಇವೆಲ್ಲ ಅಭಿವೃದ್ಧಿಗಳೂ ಇನ್ನು ಸಾಧ್ಯವೇ? ಪ್ರಸ್ತುತ ಸನ್ನಿವೇಶದಲ್ಲಿ, ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಒಬ್ಬರು ಬಳಸಿರುವ ಕೆಟ್ಟದಾದ ಭಾಷೆ, ಹೋಲಿಕೆಗಳು, ಅದರಲ್ಲೂ ಕೇಂದ್ರ ಸಚಿವರನ್ನು ಹಂದಿಗೆ ಹೋಲಿಸುವ ರೂಪಕದ ಬಳಕೆ, ಅವರ ವೃತ್ತಪರತೆಯ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ. ಒಬ್ಬ ಕಾನೂನು ಪಾಲಕನಾಗಿರುವ ಅಧಿಕಾರಿ, ಕಾನೂನು ಪ್ರಕ್ರಿಯೆ ಏನೇ ಇದ್ದರೂ ಜನ ಪ್ರತಿನಿಧಿಗೆ ಸಲ್ಲಬೇಕಾದ ಗೌರವ ನೀಡಲೇಬೇಕು. ಇದೆಲ್ಲದರ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಮತ್ತು ‘ವಿಕಸಿತ ಭಾರತ 2047’ ಯೋಜನೆಗಳ ಮೇಲೆ ನಂಬಿಕೆ ಇದ್ದರೂ, ಸಚಿವರ ಮೇಲೆ ಅವಹೇಳನಕಾರಿ ಮಾತುಗಳು ಬಂದಾಗ ದೇಶೀಯ ಮತ್ತು ವಿದೇಶೀ ಹೂಡಿಕೆದಾರರು ಹಣ ಹೂಡಲು ಎಷ್ಟರಮಟ್ಟಿಗೆ ಮುಂದೆ ಬರಬಹುದು ಎಂಬ ಪ್ರಶ್ನೆ ಮೂಡಿದೆ. ಮೋದಿಯವರ ಮೇಕ್ ಇನ್ ಇಂಡಿಯಾ ಮತ್ತು ವಿಕಸಿತ ಭಾರತ ಯೋಜನೆಗಳು ಭಾರತದ ಆರ್ಥಿಕ ಪ್ರಗತಿ, ಪರಿಸರ ಸುಸ್ಥಿರತೆ, ಸಾಮಾಜಿಕ ಪ್ರಗತಿ ಮತ್ತು ಉತ್ತಮ ಆಡಳಿತಗಳ ಮೂಲಕ ಭಾರತವನ್ನು ಮುಂದುವರಿದ ದೇಶವನ್ನಾಗಿಸುವ ಗುರಿ ಹೊಂದಿವೆ.

ಹಿರಿಯ ಪೊಲೀಸ್ ಅಧಿಕಾರಿ ಒಬ್ಬ ಕೇಂದ್ರ ಸಚಿವರ ಹುದ್ದೆಯನ್ನು ಅವಮಾನಿಸುವ ಉದ್ದೇಶದಿಂದ ಆ ಮಾತುಗಳನ್ನು ಆಡಿಲ್ಲದೆಯೂ ಇರಬಹುದು. ಆದರೆ ಅಂತಹ ಹೇಳಿಕೆಗಳು ಅಧಿಕಾರಿಯ ಕುರಿತು ಜನರ ಅಭಿಪ್ರಾಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಸ್ಥಳೀಯ ಮತ್ತು ವಿದೇಶೀ ಹೂಡಿಕೆದಾರರ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ, ಮಾತುಗಳನ್ನಾಡದೆ, ಕಾನೂನು ತನ್ನ ಕ್ರಮ ಕೈಗೊಳ್ಳಲು ಬಿಡುವುದು ಸೂಕ್ತವಾದ ಕ್ರಮ.

ಕುಮಾರಸ್ವಾಮಿ ಪ್ರತಿಕ್ರಿಯೆ ಏನು?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಎಡಿಜಿಪಿ ಎಂ ಚಂದ್ರಶೇಖರ್ ಅವರು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿದ್ದು, ಆ ಮೂಲಕ ತನ್ನ ರಾಜಕೀಯ ನಾಯಕರ ಮನ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಚಂದ್ರಶೇಖರ್ ಅವರಿಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಹುದ್ದೆಯ ಭರವಸೆ ನೀಡಲಾಗಿದ್ದು, ಅದಕ್ಕಾಗೇ ಅವರು ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬೇಕರ್ ಅವರಿಂದ ‘ಸರ್ಕಾರ ಮತ್ತು ರಾಜಭವನದ ನಡುವಿನ ಸಂವಹನದ ಸೋರಿಕೆ’ಯ ಕುರಿತು ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಗಳ ವಿಚಾರಣೆ ನಡೆಸಲೂ ಅನುಮತಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಚಂದ್ರಶೇಖರ್ ರಾಜ್ಯ ಸರ್ಕಾರದ ಅನುಮತಿ ಕೋರಿರುವ ವಿಚಾರ ಸೋರಿಕೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕಳೆದ ತಿಂಗಳು ರಾಜ್ಯಪಾಲರು ಈ ವಿಚಾರ ಹೇಗೆ ಸೋರಿಕೆಯಾಯಿತು ಎಂದು ತಿಳಿಯುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದ್ದರು. ಆದರೆ, ಈ ತಿಂಗಳು ಎಡಿಜಿಪಿ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಡಿಜಿಪಿಗೆ ರಾಜ್ಯಪಾಲರ ಕಚೇರಿಯ ವಿರುದ್ಧವೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೋರುವಷ್ಟು ಧೈರ್ಯವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | KEA Exam: VAO, GTTC ಕಡ್ಡಾಯ ಕನ್ನಡ ಪರೀಕ್ಷೆ ಕೀ ಉತ್ತರ ಪ್ರಕಟ

ಕುಮಾರಸ್ವಾಮಿ ಅವರು ಎಡಿಜಿಪಿ ರಾಜ್ಯದಲ್ಲಿನ ತಮ್ಮ ನಿಯೋಜನೆಯನ್ನು ಇನ್ನಷ್ಟು ಸುದೀರ್ಘವಾಗಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅದರೊಡನೆ, ಅವರು ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಹಣ ಸುಲಿಗೆ ನಡೆಸುವ ಕುರಿತು 2,500 ಎಫ್ಐಆರ್ ಎದುರಿಸುತ್ತಿರುವ ವ್ಯಕ್ತಿಯೊಬ್ಬನೊಡನೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಾಗಿ ವರದಿಗಳು ತಿಳಿಸಿವೆ. ತಾವು ಈ ಎಲ್ಲ ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ತಲುಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.