Friday, 13th December 2024

HD Kumaraswamy: ಹೆಚ್ಚಿನ ಆಮದು ಸುಂಕ ಹೇರುವ ಮೂಲಕ ಚೀನಾ ಉಕ್ಕಿಗೆ ಕಡಿವಾಣ

HD Kumaraswamy

ನವದೆಹಲಿ: ಚೀನಾದ ಅಗ್ಗದ ಉಕ್ಕಿನ ಸವಾಲು ಸೇರಿದಂತೆ ದೇಶೀಯ ಉಕ್ಕು ಕ್ಷೇತ್ರದ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ನವದೆಹಲಿಯಲ್ಲಿ ಬುಧವಾರ ಬೆಳಗ್ಗೆ ದೇಶೀಯ ಮಿಶ್ರಲೋಹ ತಯಾರಕರ ಒಕ್ಕೂಟ (IPAFA) ಹಮ್ಮಿಕೊಂಡಿದ್ದ ದೇಶೀಯ ಮಿಶ್ರಲೋಹ ಉದ್ಯಮ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಚೀನಾದಿಂದ (China) ಅನಿಯಂತ್ರಿತವಾಗಿ ಆಮದಾಗುತ್ತಿರುವ ಉಕ್ಕಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಚೀನಾದ ಉಕ್ಕಿನ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಬಗ್ಗೆ ಆದಷ್ಟು ಬೇಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ದೇಶೀಯ ಉಕ್ಕು ಕ್ಷೇತ್ರವನ್ನು ಅಪಾಯಕ್ಕೆ ಸಿಲುಕಲು ಬಿಡುವುದಿಲ್ಲ ಎಂದು ಹೇಳಿದರು.

ಉಕ್ಕಿನ ಕ್ಷೇತ್ರದ ಜತೆಗೆ ದೇಶೀಯ ಮಿಶ್ರಲೋಹ ಉದ್ಯಮವನ್ನು ರಕ್ಷಿಸಬೇಕಾದ ಹೊಣೆ ನಮ್ಮ ಮೇಲಿದೆ. ಸವಾಲುಗಳಿಂದ ಉದ್ಯಮಕ್ಕೆ ರಕ್ಷಣೆ ಕೊಡಬೇಕಿದೆ. ಈ ನಿಟ್ಟಿನಲ್ಲಿ ಉಕ್ಕಿನ ಮೇಲೆ ಕನಿಷ್ಠ ಪ್ರಮಾಣದ ಆಮದು ಸುಂಕ ವಿಧಿಸುವ ಬಗ್ಗೆ ಹಣಕಾಸು ಸಚಿವರ ಜತೆ ಸಮಾಲೋಚನೆ ನಡೆಸಲಾಗುವುದು. ಈ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ. ವಿತ್ತ ಸಚಿವರನ್ನು ಒಪ್ಪಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | R Ashok: ಕಾಂಗ್ರೆಸ್‌ ಸರ್ಕಾರದ ಮತ್ತೊಂದು ʼಅದ್ಧೂರಿʼ ಹಗರಣಕ್ಕೆ ದಸರಾ ವೇದಿಕೆಯಾಗದಿರಲಿ; ಆರ್‌. ಅಶೋಕ್‌ ವ್ಯಂಗ್ಯ

ಉಕ್ಕು ಕ್ಷೇತ್ರದ ದೇಶದ ಆರ್ಥಿಕತೆಯ ಬೆನ್ನೆಲುಬು. ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿಯೇ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸಚಿವಾಲಯದಲ್ಲಿ ನಿರಂತರ ಚರ್ಚೆಗಳು ನಡೆದಿವೆ ಎಂದರು. ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ -RNIL (ವೈಜಾಗ್ ಸ್ಟೀಲ್) ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆಯಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯ ನನ್ನ ಗಮನಕ್ಕೂ ಬಂದಿದೆ. ನಮ್ಮ ಮುಂದೆ ಸವಾಲುಗಳು ಇವೆ. ಆ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು ಉಳಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಮ್ಮೇಳನದಲ್ಲಿ ದೇಶೀಯ ಮಿಶ್ರಲೋಹ ಉದ್ಯಮ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಧಾನಮಂತ್ರಿಗಳು ಉಕ್ಕು ಉದ್ಯಮವನ್ನು ಸಶಕ್ತಿಗೊಳಿಸಿ, ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ನಿಗದಿ ಮಾಡಿದ್ದಾರೆ. ಅವರ ಕನಸು ನನಸು ಮಾಡಲು ನಾವು ಅವಿರತವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ | IND vs BAN: ಮೊದಲ ಟೆಸ್ಟ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡದ ವರದಿ ಹೀಗಿದೆ

ಭಾರತೀಯ ಮ್ಯಾಂಗನೀಸ್ ಅದಿರು ಸಂಸ್ಥೆ (MOIL) ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಅಜಿತ್ ಕುಮಾರ್ ಸಕ್ಸೇನಾ ಹಾಗೂ ದೇಶೀಯ ಮಿಶ್ರಲೋಹ ತಯಾರಕರ ಒಕ್ಕೂಟದ ಅಧ್ಯಕ್ಷ ಮನೀಶ್ ಸರಡಾ ಉಪಸ್ಥಿತರಿದ್ದರು.