Wednesday, 11th December 2024

Huli Karthik: ‘ಗಿಚ್ಚಿ ಗಿಲಿಗಿಲಿ’ ವಿನ್ನರ್‌ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್‌; ಏನಿದು ವಿವಾದ?

Huli Karthik

ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಲರ್ಸ್‌ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್​ನ ವಿಜೇತರಾಗಿ ಹೊರ ಹೊಮ್ಮಿದ ನಟ ಹುಲಿ ಕಾರ್ತಿಕ್‌ (Huli Karthik) ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಜಾತಿ ನಿಂದನೆ (Attrocity) ಕೇಸ್ ದಾಖಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಹುಲಿ ಕಾರ್ತಿಕ್‌ ಬೋವಿ ಜನಾಂಗಕ್ಕೆ ನೋವುಂಟು ಮಾಡುವ ಪದ ಬಳಕೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರ ವಿರುದ್ಧ ಲೋಕೇಶ್‌ ಎನ್ನುವವವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಹುಲಿ ಕಾರ್ತಿಕ್‌ ಹೇಳಿದ್ದೇನು?

ಇತ್ತೀಚೆಗೆ ಕಲರ್ಸ್‌ ಕನ್ನಡ ವಾಹಿನಿ ಅದ್ಧೂರಿಯಾಗಿ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಹುಲಿ ಕಾರ್ತಿಕ್‌ ಭಾಗವಹಿಸಿದ್ದರು. ಈ ವೇಲೆ ಮಾತನಾಡುವ ಭರದಲ್ಲಿ ಅವರು, ʼʼಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ಥರ ಇದ್ಯ. ಈ ಬೆಲ್ಡ್‌ ನನ್ನ ಕೈಯಲ್ಲಿ ಇದೆ ಎಂದರೆ ಅದಕ್ಕೆ ಸ್ಕ್ರಿಪ್ಟ್‌ ಕಾರಣ. ಸ್ಕ್ರಿಪ್ಟ್‌ ರೈಟರ್‌ ಸಂದೀಪ್‌ಗೆ ಅವರಿಗೆ ಧನ್ಯವಾದʼʼ ಎಂದು ಹೇಳಿದ್ದರು. ಸದ್ಯ ಈ ಡೈಲಾಗ್‌ ಅವರಿಗೆ ಮುಳುವಾಗಿ ಪರಿಣಮಿಸಿದೆ.

ಕಾರ್ತಿಕ್‌ ಈ ರೀತಿ ಹೇಳಿದ್ದಕ್ಕೆ ಬೋವಿ ಜನಾಂಗ ಸಿಡಿದೆದ್ದಿದೆ. ತಮ್ಮ ಸಮುದಾಯದ ಬಗ್ಗೆ ಕಾರ್ತಿಕ್‌ ವೇದಿಕೆಯಲ್ಲೇ ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಕಾರ್ತಿಕ್‌ ಜತೆಗೆ ಈ ಕಾರ್ಯಕ್ರಮದ ಸಂಭಾಷಣೆ ಬರೆದವರು, ಕಾರ್ಯಕ್ರಮ ನಿರ್ಮಾಪಕರು ಹಾಗೂ ನಿರ್ದೇಶಕರ ಮೇಲೂ ಕೇಸ್‌ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಹುಲಿ ಕಾರ್ತಿಕ್ ಎ-1, ಅನುಬಂಧ ಸ್ಕ್ರಿಪ್ಟ್ ರೈಟರ್ ಎ-2, ಅನುಬಂಧ ಡೈರೆಕ್ಟರ್ ಎ-3 ಮತ್ತು ನಿರ್ಮಾಪಕನ ಎ-4 ಆರೋಪಿಗಳಾಗಿದ್ದಾರೆ.

ಈ ವಿಚಾರ ಸಂಬಂಧ ಸ್ಪಷ್ಟನೆ ನೀಡಿರುವ ಕಾರ್ತಿಕ್, ನಾನು ಹೊಂಡ ಅಂದಿದ್ದೇ ಹೊರತು ಜನಾಂಗಕ್ಕೆ ನೋವಾಗುವ ಶಬ್ಧವನ್ನ ಬಳಕೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೊ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಸ್ಥಳ ಮಹಜರನ್ನು ಮುಗಿಸಿದ್ದಾರೆ.

ಬಿಗ್‌ ಬಾಸ್‌ ಸ್ಪರ್ದಿ ಎನ್ನಲಾಗಿತ್ತು

ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಹುಲಿ ಕಾರ್ತಿಕ್‌ ಇತ್ತೀಚೆಗೆ ಆರಂಭವಾದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಸುದ್ದಿ ಹರಿದಾಡಿದ್ದವು. ಆದರೆ ಅಧಿಕೃತ ಸ್ಪರ್ಧಿಗಳ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಇದರಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹುಲಿ ಕಾರ್ತಿಕ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಇತ್ತೀಚೆಗೆ ಬಿಡುಗಡೆಯಾದ ದಿಗಂತ್‌, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮ್‌ ಕುಮಾರ್‌ ನಟನೆಯ ʼಪೌಡರ್ʼ ಸಿನಿಮಾದಲ್ಲಿ ಹುಲಿ ಕಾರ್ತಿಕ್‌ ಅಭಿನಯಿಸಿದ್ದರು. ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರಿಗೆ ಹಲವು ಚಿತ್ರಗಳ ಅವಕಾಶ ಹರಿದು ಬರುತ್ತಿದ್ದು, ಅದರ ಮಧ್ಯೆ ವಿವಾದ ಸುತ್ತಿಕೊಂಡಿದೆ.

ಈ ಸುದ್ದಿಯನ್ನೂ ಓದಿ: BBK 11: ನೀನು ಯಾವನೋ: ಬಿಗ್ ಬಾಸ್ ಮನೆ ಮತ್ತೆ ರಣರಂಗ, ಏಕವಚನದಲ್ಲಿ ಜಗದೀಶ್ ಬೆವರಿಳಿಸಿದ ಕ್ಯಾಪ್ಟನ್ ಹಂಸ