ಹರಪನಹಳ್ಳಿ: ಅರಣ್ಯ ಪ್ರದೇಶದಲ್ಲಿ ಮೇಯಲು ಹೋಗಿದ್ದ ಎರಡು ಹಸುಗಳು ಸ್ಪೋಟಕ ವಸ್ತುವನ್ನು ತಿಂದು ಹಸುವಿನ ಬಾಯಿ ಛಿದ್ರಗೊಂಡಿರುವ ಘಟನೆ ತಾಲೂಕಿನ ಕೊಂಗನಹೊಸೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತರಾದ ಬ್ಯಾಳಾಲ ವೀರಪ್ಪ ಹಾಗೂ ಕೊಗಳಿ ಮಠದ ಶಂಕ್ರಯ್ಯನವರಿಗೆ ಸೇರಿದ ಹಸುಗಳು ಸ್ಪೋಟಕಕ್ಕೆ ಗಂಭೀರವಾಗಿ ಗಾಯಗೊಂಡಿವೆ.
ಕೊಂಗನಹೊಸೂರು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ಕೆಲವು ಕಿಡಿಗೇಡಿಗಳು ಸ್ಪೋಟಕ ಸಿಡಿಮದ್ದನ್ನು ಮಾವಿನ ತೊಗಟೆಯಲ್ಲಿ(ಗೋಟು) ಹಾಕಿದ್ದಾರೆ, ಮೇಯಲು ತೆರಳಿದ್ದ ಹಸುಗಳು ಅದನ್ನು ಬಾಯಿಯಲ್ಲಿ ತಿಂದು ಕೂಡಲೇ ಸ್ಪೋಟ ಗೊಂಡು, ಹಸುವಿನ ಬಾಯಿ ಛಿದ್ರಗೊಂಡಿವೆ. ಈ ಘಟನೆಯಿಂದ ಭಯ ಭೀತರಾದ ರೈತರು ಅರಣ್ಯದಲ್ಲಿ ತಮ್ಮ ದನ, ಕರುಗಳನ್ನು ಮೇಯಿಸಲು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಸಿ.ಸಿ.ರಸ್ತೆ ಉದ್ಘಾಟನೆಗೆ ಆಗಮಿಸಿದ ಶಾಸಕ ಜಿ.ಕರುಣಾಕರ ರೆಡ್ಡಿಯವರ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತ ನಾಡುವುದಾಗಿ ಹೇಳಿದರು. ಈ ಸಂಬ0ಧ ಬುಧುವಾರ ರಾತ್ರಿ ಹರಪನಹಳ್ಳಿ ಪೋಲಿಸ್ ಠಾಣೆಗೆ ಆಗಮಿಸಿದ ಗ್ರಾಮಸ್ಥರು ಅರಣ್ಯ ಪ್ರದೇಶದಲ್ಲಿ ಸ್ಪೋಟಕ ವಸ್ತುಗಳನ್ನು ಇಟ್ಟಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
***
ಅರಣ್ಯ ಪ್ರದೇಶದಲ್ಲಿ ಸಿಡಿ ಸ್ಪೋಟಕವನ್ನು ಯಾರು ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಪ್ರಥಮ ಮಾಹಿತಿ ಕಲೆ ಹಾಕಲಾಗುತ್ತಿದೆ, ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ಯಾರು ಓಡಾಡದಂತೆ ಈಗಾಗಲೇ ಸುತ್ತಮುತ್ತಲ ಗ್ರಾಮಸ್ಥರಿಗೆ ಡಂಗುರ ಹಾಕಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಇಲಾಖೆ ಸಹಕಾರದೊಂದಿಗೆ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮಲ್ಲಪ್ಪ, ಅರಣ್ಯ ವಲಯ ಅಧಿಕಾರಿ, ಹರಪನಹಳ್ಳಿ