Wednesday, 11th December 2024

ಶ್ರೀ ಗಂಗಲಿಂಗೇಶ್ವರ, ಬೀರಲಿಂಗೇಶ್ವರ ಜಾತ್ರಾ ಸಮಾರೋಪ

ಗುರು-ಶಿಷ್ಯರ ಮಹಿಮೆಯಲ್ಲಿ ಮಿಂದೆದ್ದ ಭಕ್ತರು

ಆಳಂದ: ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಶ್ರೀ ಗಂಗಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಅತೀ ವಿಜೃಂಭಣೆಯಿಂದ ಜರುಗಿ ಸಂಪನ್ನಗೊಂಡಿತು.

ಜಾತ್ರಾ ದಿನದ ಕೊನೆಯ ದಿನವಾದ ರವಿವಾರ ವಿವಿಧ ಕಾರ್ಯಕ್ರಮಗಳಿಂದ ದೇವಸ್ಥಾನದ ಆವರಣವು ಭಕ್ತ ಗಣ ಮಧ್ಯೆ ಜಗಮ ಗಿಸಿದ್ದು ಕಂಡು ಬಂತು. ರಾತ್ರಿಯೆಲ್ಲ ಇಂಡಿ ತಾಲೂಕಿನ ಝಳಕಿ ಗ್ರಾಮದ ಬೀರಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ  ‘ಹಠವಾದಿ ಬೀರಪ್ಪ , ಮಹಾಜ್ಞಾನಿ ಮಾಳಪ್ಪ (ಗುರು-ಶಿಷ್ಯರ ಮಹಿಮೆ) ಎಂಬ ಪೌರಾಣಿಕ ನಾಟಕ ಪ್ರದರ್ಶನವಾಯಿತು.

ನಾಟಕವನ್ನು ನೂರಾರು ಭಕ್ತರು ವೀಕ್ಷಿಸಿ, ಗುರು-ಶಿಷ್ಯರ ನಡುವಿನ ಪ್ರಸಂಗದ ದೃಶ್ಯಗಳು ಕಂಡು  ಭಾವುಕರಾದರು. ಇದಕ್ಕೂ ಮುನ್ನ ಜಮಖಂಡಿಯ ಮಲ್ಲಿಕಾರ್ಜು ಶಾಸ್ತ್ರೀಗಳ ನೇತೃತ್ವದಲ್ಲಿ ಮಾ. 21 ರಿಂದ ಪ್ರಾರಂಭವಾಗಿದ್ದ ಹಾಲುಮತದ ಮಹಾ ಪುರಾಣವು 11 ನೇ ದಿನಕ್ಕೆ ಮುಕ್ತಾಯವಾಯಿತು.

ಗಂಗಲಿಂಗೇಶ್ವರ ದೇವಸ್ಥಾನದಿಂದ ದೇವಲಗಾಣಗಾಪುರದ ಸಂಗಮನಾಥ ಸನ್ನಿಧಿಗೆ ಪಲ್ಲಕ್ಕಿ ಉತ್ಸವ ತಲುಪಿ ವಾಸ್ತವ್ಯ ಮಾಡಿದ ನಂತರ ಗ್ರಾಮಕ್ಕೆ ಮರಳಿದ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ದೇವಸ್ಥಾನಕ್ಕೆ ತಲುಪಿತು.ನಿರಂತರ ಹದಿನೈದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವವು ಕೊನೆಯ ದಿನದ ನಾಟಕ ಪ್ರದರ್ಶನಕ್ಕಿಂತ ಮುಂಚೆ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನವರಂತೆ ಏರುಧ್ವನಿಯಲ್ಲಿ ಚಂದಪ್ಪ ಸಿದ್ಧಪ್ಪ ಅರಳಿಕಟ್ಟೆ ಎಂಬ ಕಲಾ ವಿದರು ತಮ್ಮ ಏಕಾಭಿನಯ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

ಅಲ್ಲದೇ, ಜಾತ್ರಾ ಮಹೋತ್ಸವ ನಿಮಿತ್ಯ ಪ್ರಸಿದ್ಧ ಗಾಯಕರಿಂದ ಶ್ರೀ ಗಂಗಲಿಂಗೇಶ್ವರ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಡೊಳ್ಳಿನ ಪದಗಳು ಹಾಗೂ ವಿವಿಧ ಕಲಾವಿದರಿಂದ ಡೊಳ್ಳು ಕುಣಿತ ಜರುಗಿದವು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಚಿದಾನಂದ ತೇಲಿ, ಉತ್ಸವ ಸಮಿತಿಯ ಬಸವರಾಜ ಪೂಜಾರಿ, ಶರಣಬಸಪ್ಪ ಧಬಾಡೆ, ಬೀರಣ್ಣ ಪಟ್ಟಣ, ಗ್ರಾ.ಪಂ ಸದಸ್ಯ ಶಿವಲಿಂಗಪ್ಪ ಪೂಜಾರಿ, ಎಸ್. ಎಸ್ ಪಾಟೀಲ್, ಮಂಜುನಾಥ ಅಕ್ಕಲಕೋಟ, ಮುಖಂಡ ತಿಪ್ಪಯ್ಯ ಗುತ್ತೇದಾರ, ಮಲ್ಲಪ್ಪ ಹೊನಗುಂಟಿ, ಮಾಳಪ್ಪ ಪೂಜಾರಿ, ಸದಾಶಿವ ಜವಳಿ, ಶಾಂತಮಲ್ಲ ಪೂಜಾರಿ, ಕಲ್ಲಪ್ಪ ಹೊನಗುಂಡಿ, ಸಿದ್ದಪ್ಪ ಜವಳಿ, ಮಲ್ಲಪ್ಪ ಜವಳಿ, ಶರಣು ಮಾಂಗ್ ಸೇರಿದಂತೆ  ಭಕ್ತಾದಿಗಳು ಈ ವೇಳೆ ಪಾಲ್ಗೊಂಡಿದ್ದರು.