Saturday, 14th December 2024

GOAT Movie: ದಳಪತಿ ವಿಜಯ್‌ ತಮಿಳು ಸಿನಿಮಾ ಟಿಕೆಟ್‌ಗೆ ಚೆನ್ನೈಯಲ್ಲಿ 60 ರೂ., ಬೆಂಗಳೂರಲ್ಲಿ 1000 ರೂ!

goat movie thalapathy vijay

ಬೆಂಗಳೂರು: ತಮಿಳಿನ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ (Thalapathy Vijay) ಅವರ ಹೊಸ ಚಿತ್ರ GOAT (ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌) ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ತಮಿಳುನಾಡಿನಲ್ಲಿಯೂ ಸಿಗದ ಸ್ವಾಗತ ಬೆಂಗಳೂರಿನಲ್ಲಿ ಸಿಕ್ಕಿದ್ದು, ಹಲವಾರು ಕನ್ನಡ ಚಿತ್ರಗಳನ್ನು (Kannada films) ಎತ್ತಂಗಡಿ ಮಾಡಿ ಗೋಟ್‌ ಸಿನಿಮಾವನ್ನು (GOAT movie) ಮಲ್ಟಿಪ್ಲೆಕ್ಸ್‌ಗಳಲ್ಲಿ ಹಾಕಲಾಗುತ್ತಿದೆ. ಕನ್ನಡ ಹೋರಾಟಗಾರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಟಿಕೆಟ್‌ ದರವೂ ತಮಿಳುನಾಡಿಗೆ (Tamil Nadu) ಹೋಲಿಸಿದರೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ನಟ ವಿಜಯ್‌ ಅವರಿಗೆ ಬೆಂಗಳೂರಿನಲ್ಲಿಯೂ ಅಪಾರ ಪ್ರಮಾಣದ ಅಭಿಮಾನಿಗಳು ಮತ್ತು ಅವರ ಸಿನಿಮಾ ನೋಡುವ ಪ್ರೇಕ್ಷಕ ವರ್ಗವಿದೆ. ಹೀಗಾಗಿ ವಿಜಯ್‌ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಕೆಂಪು ಹಾಸಿನ ಸ್ವಾಗತ ಸಿಗುತ್ತದೆ. ಗೋಟ್‌ ಸಿನಿಮಾ ಕೂಡ ಅದೇ ರೀತಿ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಿದೆ. ಕೆಲವು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೂ ಈ ಸಿನಿಮಾ ಗುರಿಯಾಗಿದೆ.

ಇತ್ತೀಚಿಗೆ ತೆರೆಕಂಡ ಹಲವು ಕನ್ನಡದ ಸಿನಿಮಾಗಳಿಗೆ ಬೆಳಗಿನ 4 ಗಂಟೆಗೆ ಶೋ ಸಿಕ್ಕಿರಲಿಲ್ಲ. ಆದರೆ ಗೋಟ್‌ ಸಿನಿಮಾಕ್ಕೆ ಬೆಳಗಿನ 4 ಗಂಟೆಯ ಶೋಗಳು ಸಿಕ್ಕಿವೆ. ಬೆಂಗಳೂರಿನಲ್ಲಿಯೇ ಸಾವಿರಾರು ಶೋಗಳು ಬುಕ್‌ ಆಗಿವೆ. ಗುರುವಾರವೊಂದೇ ದಿನ ಒಟ್ಟಾರೆ 1200ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಚೆನ್ನೈನಲ್ಲಿ ಸಿನಿಮಾ ಶೋ ಶುರುವಾಗುವುದೇ 9 ಗಂಟೆಯ ನಂತರ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸಿನಿಮಾ ಬೆಳಗಿನ 4 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ.

ಸಾವಿರಾರು ಸಂಖ್ಯೆಯ ಶೋಗಳ ಜತೆಗೆ ಟಿಕೆಟ್‌ಗೆ ಸಾವಿರಾರು ರೂಪಾಯಿ ಚಾರ್ಜ್‌ ಮಾಡಲಾಗುತ್ತಿದೆ. ಇದೇ ಸಿನಿಮಾ ಚೆನ್ನೈನಲ್ಲಿ ರಿಲೀಸ್‌ ಆಗಿದ್ದು, ಅಲ್ಲಿ ಈ ಸಿನಿಮಾದ ಟಿಕೆಟ್‌ ಬೆಲೆ ಸರಾಸರಿ 60 ರೂ.ಗಳಿಂದ ಗರಿಷ್ಠ 190 ರೂಪಾಯಿಗಳವರೆಗೆ ಇದೆ. ಆದರೆ ಇದೇ ಸಿನಿಮಾವನ್ನು ಬೆಂಗಳೂರಿನಲ್ಲಿ ನೋಡುವುದಾದರೆ, ಮಲ್ಟಿಫ್ಲೆಕ್ಸ್‌ಗಳಲ್ಲಿ ಒಂದು ಟಿಕೆಟ್‌ಗೆ 480ರಿಂದ 1000 ರೂಪಾಯಿ ವರೆಗೂ ಬೆಲೆ ಇದೆ.

ಇದೀಗ ಕನ್ನಡ ಪರ ಹೋರಾಟಗಾರರು ಈ ಬಗ್ಗೆ ಕಿಡಿ ಕಾರಿದ್ದಾರೆ. ಇವರು ಬೆಂಗಳೂರು ಪೊಲೀಸ್‌ಗೆ ಟ್ಯಾಗ್‌ ಮಾಡಿ, ಸಿನಿಮಾ ಪ್ರದರ್ಶನದ ನಿಯಮಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ. ಗೋಟ್‌ ಸಿನಿಮಾವನ್ನು ಬಾಯ್ಕಾಟ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ. “ಕನ್ನಡಿಗರಿಗೆ ನಾಚಿಕೆಯಾಗಬೇಕು, ತಮಿಳು ಚಿತ್ರವೊಂದು ಬೆಂಗಳೂರು ನಗರದಲ್ಲಿ 1260/1500 ಪ್ರದರ್ಶನಗಳನ್ನು ಪಡೆಯುತ್ತದೆ. ನಟ ವಿಜಯ್ ಯಾಕೆ ಕನ್ನಡಿಗರ ಮೇಲೆ ತಮಿಳನ್ನು ಡಂಪ್ ಮಾಡುತ್ತಿದ್ದೀರಿ? ಸಿನಿಮಾ ಪ್ರದರ್ಶನ ನಿಯಮಗಳ ಉಲ್ಲಂಘನೆಯಾಗಿದೆ. ಬೆಂಗಳೂರು ಪೊಲೀಸರೇ ಏನ್ಮಾಡ್ತಿದ್ದೀರಿ? ನಾರಾಯಣ ಗೌಡ್ರೆ, ರೂಪೇಶ್‌ ರಾಜಣ್ಣ.. ಯಾಕ್ರೀ ಸ್ವಾಮಿ ಇದು ಕಣ್ಣಿಗೆ ಕಾಣಿಸ್ತಿಲ್ವಾ?? ಇದರ ಬಗ್ಗೆ ನಿಮ್ಮ ಗಮನ ಯಾವಾಗ?” ಎಂದು ಪ್ರಶ್ನಿಸಿದ್ದಾರೆ.

“ಸಿದ್ದರಾಮಯ್ಯನವ್ರೇ, ಡಿ ಕೆ ಶಿವಕುಮಾರ್‌ ಅವರೇ ಎಲ್ರಿ ಸ್ವಾಮಿ ನಿಮ್ಮ ಕನ್ನಡ ಅಭಿಮಾನ?? ಕನ್ನಡ ಚಿತ್ರೋದ್ಯಮದಲ್ಲಿರುವ ಎಲ್ಲಾ ನಟರು, ತಂತ್ರಜ್ಞರು ಏನ್ಮಾಡ್ತಾವ್ರೆ?? ನೀವು ನಿಮ್ಮನ್ನು ಮಾರಿಕೊಳ್ಳಿ, ಕನ್ನಡವನ್ನು ಯಾಕ್ರೀ ನಿಮ್ಮ ತೆವಲಿಗೆ ಮಾರ್ತೀರ?? ಡಾ. ರಾಜ್‌ಕುಮಾರ್‌ ಕಟ್ಟಿದ ಈ ಸಂಸ್ಥೆಯನ್ನು ಹಾಳು ಮಾಡಿದ್ದೀರಾ.. ಎಷ್ಟೋ ಪ್ಲೆಕ್ಸ್‌ಗಳಲ್ಲಿ ಗುರುವಾರ ಕನ್ನಡ ಸಿನಿಮಾವೇ ಇಲ್ಲ” ಎಂದು ಕನ್ನಡ ಡೈನಾಸ್ಟಿ ಟ್ವಿಟರ್‌ ಪುಟದಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

“ಈ ಕನ್ನಡ ನೆಲದಲ್ಲಿ ಉಂಡ ಮನೆಗೆ ದ್ರೋಹ ಬಗೆಯುವವರು ಒಬ್ಬರ ಇಬ್ಬರ??? ಒಂದು rock ಇನ್ನೊಂದು rockline! ಒಬ್ಬರು ಕನ್ನಡವನ್ನು ಬಳಸಿ ರಾಜ್ಯ ಪಟ್ಟಕ್ಕೆ ಏರಿದರು. ಇನ್ನೊಬ್ಬರು ಕನ್ನಡ ಚಿತ್ರರಂಗದ ಮುಖ್ಯರು! ಇವರ ಮಾಲಿಕತ್ವದ ಮಾಲ್ ನಲ್ಲಿ ತಮಿಳು ಚಿತ್ರಕ್ಕೆ ಶೋ ಗಳು ನೋಡಿ” ಎಂದೂ ಪೋಸ್ಟ್‌ ಹಂಚಿಕೊಂಡಿದೆ.

ಈ ಸುದ್ದಿ ಓದಿ: ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ